ಕೇಂದ್ರ, ಮೂರು ರಾಜ್ಯಗಳ ವೇತನ ವೆಚ್ಚಗಳನ್ನು ಮೀರಿದ ಪಿಂಚಣಿ ಪಾವತಿ: ವರದಿ

Update: 2022-12-05 14:15 GMT

ಹೊಸದಿಲ್ಲಿ: 2019-20ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರ ಮತ್ತು ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳ ಪಿಂಚಣಿ (Pension) ಪಾವತಿಯು ವೇತನ ವೆಚ್ಚಗಳನ್ನು ಮೀರಿತ್ತು ಎಂದು CAG ವರದಿಯು ಬಹಿರಂಗಗೊಳಿಸಿದೆ ಎಂದು indianexpress.com ವರದಿ ಮಾಡಿದೆ.

ಹಳೆಯ ಪಿಂಚಣಿ ಯೋಜನೆ (OPS)ಯು ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನ ಸಭಾ ಚುನಾವಣೆಗಳ ಪ್ರಮುಖ ಚುನಾವಣಾ ಭರವಸೆಯಾಗಿರುವ ಜೊತೆಗೆ ರಾಜಕೀಯ ವಲಯದ ಹೊರಗೂ ಚರ್ಚೆಗಳನ್ನು ಹುಟ್ಟುಹಾಕಿರುವ ನಡುವೆಯೇ ಸಿಎಜಿ ವರದಿ ಹೊರಬಿದ್ದಿದೆ.

ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿರುವ ಎರಡು ರಾಜ್ಯಗಳು (ರಾಜಸ್ಥಾನ ಮತ್ತು ಛತ್ತೀಸ್ಗಡ) ಒಪಿಎಸ್ ಅನ್ನು ಜಾರಿಗೊಳಿಸಲು ಈಗಾಗಲೇ ನಿರ್ಧರಿಸಿದ್ದು,ತಾನು ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಅಧಿಕಾರಕ್ಕೆ ಬಂದರೆ ಅದನ್ನು ಮರುಜಾರಿಗೊಳಿಸುವುದಾಗಿ ಪಕ್ಷವು ಭರವಸೆ ನೀಡಿದೆ.

2019-20ನೇ ಹಣಕಾಸು ವರ್ಷದಲ್ಲಿ ಕೇಂದ್ರದ ಒಟ್ಟು ಬದ್ಧ ವೆಚ್ಚವು 9.78 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಅದರ ಒಟ್ಟು ಆದಾಯ ವೆಚ್ಚದ (26.15 ಲ.ಕೋ.ರೂ.) ಶೇ.37ರಷ್ಟಿತ್ತು. ಇದರಲ್ಲಿ ವೇತನಗಳಿಗಾಗಿ 1.39 ಲಕ್ಷ ಕೋಟಿ ರೂ., ಪಿಂಚಣಿಗಳಿಗಾಗಿ 1.83 ಲ.ಕೋ.ರೂ, ಬಡ್ಡಿ ಮತ್ತು ಸಾಲ ಪಾವತಿಗಾಗಿ 6.55 ಲ.ಕೋ.ರೂ. ಸೇರಿವೆ. ಪಿಂಚಣಿ ಪಾವತಿಗಾಗಿ ಮಾಡಲಾಗಿರುವ ವೆಚ್ಚವು ವೇತನ ವೆಚ್ಚಕ್ಕಿಂತಲೂ ಅಧಿಕವಾಗಿದೆ ಎಂದು ವರದಿಯು ತಿಳಿಸಿದೆ.

ವರದಿಯ ಪ್ರಕಾರ 2019-20ರಲ್ಲಿ ಕೇಂದ್ರದ ಪಿಂಚಣಿ ಪಾವತಿ ವೆಚ್ಚವು ಅದರ ವೇತನ ವೆಚ್ಚದ ಶೇ.132ರಷ್ಟಾಗಿತ್ತು. 2019-20ರ ನಂತರದ ಕೇಂದ್ರ ಮತ್ತು ರಾಜ್ಯಗಳ ತುಲನಾತ್ಮಕ ದತ್ತಾಂಶಗಳು ಲಭ್ಯವಿಲ್ಲ.

2019-20ರಲ್ಲಿ ಕರ್ನಾಟಕ, ಗುಜರಾತ್ ಮತ್ತು ಪಶ್ಚಿಮ ಬಂಗಾಳಗಳಲ್ಲಿಯೂ ಪಿಂಚಣಿ ವೆಚ್ಚವು ವೇತನ ವೆಚ್ಚಗಳನ್ನು ಮೀರಿತ್ತು.

ಕರ್ನಾಟಕದಲ್ಲಿ ಪಿಂಚಣಿ ಪಾವತಿ (18,404 ಕೋ.ರೂ.) ವೇತನ ವೆಚ್ಚದ (14,573 ಕೋ.ರೂ.) ಶೇ.126ರಷ್ಟಾಗಿತ್ತು. ಗುಜರಾತ್ ನಲ್ಲಿ ಪಿಂಚಣಿ ಪಾವತಿ (17,663 ಕೋ.ರೂ.) ವೇತನ ವೆಚ್ಚ (11,126 ಕೋ.ರೂ)ದ ಶೇ.159 ಆಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಪಿಂಚಣಿ ಪಾವತಿ (17,462 ಕೋ.ರೂ.) ವೇತನ ವೆಚ್ಚ (16,915 ಕೋ.ರೂ.)ದ ಶೇ.103ರಷ್ಟಿತ್ತು.
2019-20ನೇ ಸಾಲಿನಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಪಿಂಚಣಿ ಪಾವತಿ 3.38 ಲ.ಕೋ.ರೂ.ಗಳಾಗಿದ್ದು,ಇದು ಅವುಗಳ ಒಟ್ಟು ವೇತನ ವೆಚ್ಚ (5.47 ಲ.ಕೋ.ರೂ)ದ ಶೇ.61.82ರಷ್ಟಾಗಿತ್ತು. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ತಮಿಳುನಾಡು ಮತ್ತು ಒಡಿಶಾಗಳಲ್ಲಿ ಪಿಂಚಣಿ ವೆಚ್ಚ ವೇತನ ವೆಚ್ಚಗಳ ಮೂರನೇ ಎರಡಕ್ಕಿಂತ ಹೆಚ್ಚಾಗಿತ್ತು.

ಪಿಂಚಣಿಗಳು, ವೇತನಗಳು, ಬಡ್ಡಿ ಮತ್ತು ಸಾಲಪಾವತಿಗಳಿಗಾಗಿ ಸರಕಾರದ ಬದ್ಧ ವೆಚ್ಚವು ಅದರ ಮುಂಗಡಪತ್ರದ ಮುಖ್ಯ ಅಂಶವಾಗಿದೆ.

2019-20ರಲ್ಲಿ ಎಲ್ಲ ರಾಜ್ಯಗಳ ಒಟ್ಟು ಬದ್ಧ ವೆಚ್ಚ 12.38 ಲ.ಕೋ.ರೂ.ಗಳಾಗಿದ್ದು, ಇದು ಅವುಗಳ ಒಟ್ಟು ಆದಾಯ ವೆಚ್ಚ (27.41 ಲ.ಕೋ.ರೂ.)ದ ಸುಮಾರು ಅರ್ಧದಷ್ಟಿತ್ತು ಎಂದು ವರದಿಯು ತಿಳಿಸಿದೆ.

Similar News