ಡಿ.9ರಿಂದ 11: ಶಿವಪುರದಲ್ಲಿ ರಾಜ್ಯ ಸಬ್ ಜೂನಿಯರ್ ಕಬಡ್ಡಿ ಟೂರ್ನಿ

Update: 2022-12-05 15:57 GMT

ಉಡುಪಿ, ಡಿ.5: ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಹೆಬ್ರಿ ತಾಲೂಕು ಶಿವಪುರದ ಫ್ರೆಂಡ್ಸ್ ಶಿವಪುರದ ಸಹಯೋಗದೊಂದಿಗೆ ಇದೇ ಡಿ.9ರಿಂದ 11ರವರೆಗೆ ಹೊನಲು ಬೆಳಕಿನ ಮೂರನೇ ಕರ್ನಾಟಕ ರಾಜ್ಯ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಚಾಂಪಿಯನ್‌ಷಿಪ್‌ನ್ನು ಆಯೋಜಿಸಲಿದೆ ಎಂದು ಸಂಘದ ಅಧ್ಯಕ್ಷ ರಾಜೇಂದ್ರ ಸುವರ್ಣ ತಿಳಿಸಿದ್ದಾರೆ.

16 ವರ್ಷದೊಳಗಿನ 55 ಕೆ.ಜಿ.ವಿಭಾಗದಲ್ಲಿ ನಡೆಯುವ ಈ ಟೂರ್ನಿಯಲ್ಲಿ ರಾಜ್ಯದ 27 ಬಾಲಕರ ಹಾಗೂ 27 ಬಾಲಕಿಯರ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ ಎಂದು ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಈ ಟೂರ್ನಿಯಲ್ಲಿ ತೋರುವ ಪ್ರದರ್ಶನದ ಆಧಾರದ ಮೇಲೆ ಇದೇ ಡಿ. 27ರಿಂದ 30ರವರೆಗೆ ಜಾರ್ಖಂಡಿನಲ್ಲಿ ನಡೆಯುವ 32ನೇ ರಾಷ್ಟ್ರೀಯ ಸಬ್ ಜೂನಿಯರ್ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಕರ್ನಾಟಕ ಬಾಲಕ ಹಾಗೂ ಬಾಲಕಿಯರ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಆಟಗಾರರಿಗೆ 15 ದಿನಗಳ ತರಬೇತಿಯನ್ನೂ ನೀಡಲಾಗುತ್ತದೆ  ಎಂದವರು ನುಡಿದರು.

ಹೆಬ್ರಿ ತಾಲೂಕಿನ ಶಿವಪುರ ಹೆಸ್ಕೂಲ್ ಕ್ರೀಡಾಂಗಣದಲ್ಲಿ ನಡೆಯುವ ಈ ಸ್ಪರ್ಧೆಗಾಗಿ 3 ಮ್ಯಾಟ್ ಕಬಡ್ಡಿ ಕ್ರೀಡಾಂಗಣವನ್ನು ಹಾಗೂ 4ಸಾವಿರ ಪ್ರೇಕ್ಷಕರು ವೀಕ್ಷಿಸಬಹುದಾದ ಗ್ಯಾಲರಿಯನ್ನು ಸಿದ್ಧಗೊಳಿಸಲಾಗಿದೆ. ಪಂದ್ಯಗಳು ಬೆಳಗ್ಗೆ 9:00ರಿಂದ 10ಗಂಟೆಯವರೆಗೆ ನಡೆಯಲಿದೆ. ಟೂರ್ನಿಯ ಸಂಘಟನೆಗೆ 12 ಲಕ್ಷ ರೂ. ವೆಚ್ಚವಾಗುವ ನಿರೀಕ್ಷೆ ಇದೆ ಎಂದರು.

ಡಿ.9ರಂದು ಅಪರಾಹ್ನ 3:30ಕ್ಕೆ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಗೆ ಮುನ್ನ ರಾಜ್ಯಾದ್ಯಂತದಿಂದ ಬಂದು ಭಾಗವಹಿಸುವ 750 ಮಂದಿ ಯು ಕಬಡ್ಡಿ ಆಟಗಾರರನ್ನು ಆಕರ್ಷಕ ಪುರ ಮೆರವಣಿಗೆಯಲ್ಲಿ ಮೈದಾನಕ್ಕೆ ಕರೆ ತರಲಾಗುವುದು ಎಂದರು.

ಸಚಿವ ಸುನಿಲ್‌ ಕುಮಾರ್ ಅಧ್ಯಕ್ಷತೆಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಪಂದ್ಯಾಟವನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಕ್ರೀಡಾಂಗಣವನ್ನು ಉದ್ಘಾಟಿಸುವರು. ಕಬಡ್ಡಿ ಕ್ರೀಡೆ ಯಲ್ಲಿ ಜೀವಮಾನದ ಸಾಧನೆಗಾಗಿ ಧ್ಯಾನಚಂದ್ ಪ್ರಶಸ್ತಿ ಪಡೆದಿರುವ ಬಿ.ಪಿ.ಸುರೇಶ್ ಉಪಸ್ಥಿತ ರಿರುವರು. ಡಿ.11ರ ಸಂಜೆ 4:30ಕ್ಕೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ರಾಜೇಶ್ ಸುವರ್ಣ ತಿಳಿಸಿದರು.

ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆಯುವ ತಲಾ ನಾಲ್ಕು ತಂಡಗಳಿಗೆ ಪ್ರಶಸ್ತಿಯೊಂದಿಗೆ ಎಂಟು ವಿಶೇಷ ತಂಡಗಳಿಗೆ ಆಕರ್ಷಕ ಪ್ರಶಸ್ತಿ ನೀಡಲಾಗುತ್ತದೆ. ಇದರೊಂದಿಗೆ ವೈಯಕ್ತಿಕ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ ಎಂದರು. 

ಟೂರ್ನಿಯಲ್ಲಿ ಉಡುಪಿ, ದಕ್ಷಿಣ ಕನ್ನಡ ತಂಡಗಳಲ್ಲದೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜ ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಶಿವಮೊಗ್ಗ, ಮೈಸೂರು ತಂಡಗಳು ಸೇರಿದಂತೆ ಎರಡೂ ವಿಭಾಗಗಳಲ್ಲಿ ತಲಾ 27 ತಂಡಗಳು ಪಾಲ್ಗೊಳ್ಳಲಿವೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ಪಂದ್ಯಾಟ ಸಂಘಟನಾ ಸಮಿತಿಯ ಅಧ್ಯಕ್ಷ ಸುಮಿತ್ ಹೆಗ್ಡೆ, ಕಾರ್ಯದರ್ಶಿ  ವಿನಯಕುಮಾರ್, ಗೌರವ ಸಲಹೆಗಾರರಾದ ರಮೇಶ್‌ಕುಮಾರ್ ಮತ್ತು ರಮಾನಂದ ಶೆಟ್ಟಿ ಉಪಸ್ಥಿತರಿದ್ದರು.

Similar News