ಬೆಂಗಳೂರು | ದಲಿತರ ಸಾಂಸ್ಕೃತಿಕ ಪ್ರತಿರೋಧ; ನಾಳೆ(ಡಿ.6) ಬೃಹತ್ ಐಕ್ಯತಾ ಸಮಾವೇಶ

Update: 2022-12-05 16:53 GMT

ಬೆಂಗಳೂರು, ಡಿ. 5: ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯು ‘ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ’ಗಾಗಿ ‘ದಲಿತರ ಸಾಂಸ್ಕೃತಿಕ ಪ್ರತಿರೋಧ, ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ’ವನ್ನು ನಾಳೆ(ಡಿ.6)ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದು, ಡಾ.ಬಿ.ಆರ್. ಅಂಬೇಡ್ಕರ್ ಮೊಮ್ಮಗಳಾದ ರಮಾಬಾಯಿ ಆನಂದ್ ತೇಲ್ತುಂಬೆ ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ. ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್, ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಹಿರಿಯ ಸಾಹಿತಿ ದೇವನೂರು ಮಹದೇವ, ಲೇಖಕ ಕೆ.ರಾಮಯ್ಯ ದಲಿತ ಮುಖಂಡರಾದ ಎನ್. ವೆಂಕಟೇಶ್, ಇಂದೂಧರ ಹೊನ್ನಾಪುರ, ಎಸ್.ಮರಿಸ್ವಾಮಿ, ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್, ವಿ.ನಾಗರಾಜ್, ಲಕ್ಷ್ಮಿನಾರಾಯಣ ನಾಗವಾರ, ಎನ್.ಮುನಿಸ್ವಾಮಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಆಶಯಗಳನ್ನು ನಾಶ ಮಾಡುತ್ತಿರುವ ಆರೆಸ್ಸೆಸ್ ಹಾಗೂ ಬಿಜೆಪಿಯ ದುರಾಡಳಿತದ ವಿರುದ್ಧ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶವನ್ನು ಆಯೋಜಿಸಲಾಗಿದೆ. ಆ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಗಳು, ನೀಲಿ ಬಾವುಟಗಳು ರಾಜಾಜಿಸುತ್ತಿದ್ದು, ನಗರ ಸಂಪೂರ್ಣ ನೀಲಿಮಯವಾಗಿದೆ.

‘ಜಾತೀಯತೆ, ಕೋಮು ದ್ವೇಷದ ಮೂಲಕ ಸಮಾಜವನ್ನು ಒಡೆಯುವ ಕೆಲಸದಲ್ಲಿ ತೊಡಗಿರುವ ಆರೆಸ್ಸೆಸ್, ಬಿಜೆಪಿ ವಿರುದ್ಧ ನಡೆಯಲಿರುವ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಕ್ಕೂ ಅಧಿಕ ಮಂದಿ ಸಮಾವೇಶಕ್ಕೆ ಸೇರುವ ನಿರೀಕ್ಷೆ ಇದೆ. ಅಂಬೇಡ್ಕರ್ ರೂಪಿಸಿದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸಂರಕ್ಷಿಸುವ ಧ್ಯೇಯದೊಂದಿಗೆ ದಲಿತರ ಸಾಂಸ್ಕøತಿಕ ಪ್ರತಿರೋಧ ಸಮಾವೇಶ ಜರುಗಲಿದೆ’

-ವಿ.ನಾಗರಾಜ್ ದಸಂಸ ಐಕ್ಯತಾ ಹೋರಾಟ ಚಾಲನಾ ಸಮಿತಿ

Similar News