ಬೆಂಗಳೂರು: ವಿದ್ಯುತ್ ಮೀಟರ್ ಕುತ್ತಿಗೆಗೆ ಹಾಕಿಕೊಂಡು ಗುತ್ತಿಗೆದಾರರ ವಿನೂತನ ಪ್ರತಿಭಟನೆ

ಬೃಹತ್ ಕಾಮಗಾರಿಗಳೊಂದಿಗೆ ಸಿವಿಲ್ ಕಾಮಗಾರಿಗಳ ಸೇರ್ಪಡೆ ರದ್ದುಪಡಿಸಲು ಒತ್ತಾಯ

Update: 2022-12-05 16:59 GMT

ಬೆಂಗಳೂರು, ಡಿ.5: ಒಂದು ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗಿನ ಸಿವಿಲ್ ಕಾಮಗಾರಿಯನ್ನು ಬೃಹತ್ ಕಾಮಗಾರಿಯೊಂದಿಗೆ ಸೇರ್ಪಡಿಸಿ ಟೆಂಡರ್ ಕರೆಯಲಾಗುತ್ತಿದ್ದು, ಇದನ್ನು ಕೂಡಲೇ ರದ್ದುಗೊಳಿಸುವುದು ಸೇರಿ ವಿದ್ಯುತ್ ಗುತ್ತಿಗೆದಾರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಧರಣಿ ಸತ್ಯಾಗ್ರಹ ನಡೆಸಿ, ಬೆಸ್ಕಾಂ ಎಂ.ಡಿ.ಮಾಂತೇಶ ಬೆಳಗಿಯವರ ಮೂಲಕ ಸಿಎಂಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್, ಸಂಘವು ನೂರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಗುತ್ತಿಗೆದಾರರ ಸಂಕಷ್ಟ, ಸಮಸ್ಯೆಗಳಿಗೆ ಶ್ರಮಿಸುತ್ತಿದೆ. ರಾಜ್ಯದಲ್ಲಿ 30 ಸಾವಿರ ಗುತ್ತಿಗೆದಾರರಿದ್ದು, ಅವರನ್ನು ನಂಬಿಕೊಂಡು 10ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಹಾಲಿ ಸಣ್ಣ ಸಣ್ಣ ಕಾಮಗಾರಿಗಳನ್ನು ಕ್ರೂಢೀಕರಿಸಿ ಬೃಹತ್ ಟೆಂಡರ್ ಕರೆದಿರುವುದನ್ನು ಸರಕಾರ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. 

‘ಬೆಳಕು ಯೋಜನೆ’ಯು ಬೆಸ್ಕಾಂ ನೀಡಿರುವ ದರವನ್ನು ಎಲ್ಲ್ಲ ಎಸ್ಕಾಂಗಳಿಗೂ ಜಾರಿಗೊಳಿಸಬೇಕು. ಬೆಳಕು ಯೋಜನೆ ಕಾಮಗಾರಿ ನಿರ್ವಹಿಸಿರುವ ಬಿಲ್‍ಗಳಿಗೆ ಬಜೆಟ್ ಅನ್ನು ನೀಡಬೇಕು. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಸಂಬಂಧಪಟ್ಟಂತೆ ಶೀಘ್ರ ವಿದ್ಯುತ್ ಯೋಜನೆಗೆ ಕಳೆದ ಒಂದು ವರ್ಷದಲ್ಲಿ ಯಾವುದೇ ಅನುದಾನವನ್ನು ನೀಡದೆ ಅನ್ಯಾಯ ಮಾಡಿದೆ. ಅನಧಿಕೃತ ಬಡಾವಣೆಗಳಲ್ಲಿ ಅಭಿವೃದ್ಧಿ ಶುಲ್ಕ ಹೆಚ್ಚುವರಿಯಾಗಿ ಎಸ್ಕಾಂಗಳು ಸಂಗ್ರಹಿಸುತ್ತಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಹಿಂದೆ ಇದ್ದ ಆದೇಶದಂತೆ ಹಣವನ್ನು ಸಂಗ್ರಹಿಸಬೇಕು ಎಂದು ಹೇಳಿದರು.  

ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಎಂ.ಎನ್.ರಮೇಶ್, ಊರ್ಬನ್ ಪಿಂಟೊ, ಚಂದ್ರಬಾಬು, ಅನ್ನರ್ ಮಿಯಾ, ಶಿವಾನಂದ್ ಬಾಲಪ್ಪನವರ್, ಚಂದ್ರಬಾಬು ಭಾಗವಹಿಸಿದ್ದರು.

Similar News