ದಮನಿತ ವರ್ಗಗಳನ್ನು ಶಿಕ್ಷಣದಿಂದ ವಂಚಿಸುವ ಷಡ್ಯಂತ್ರ: ಶಾಸಕ ಝಮಿರ್ ಅಹ್ಮದ್ ಖಾನ್

Update: 2022-12-05 18:16 GMT

ಬೆಂಗಳೂರು, ಡಿ.5: ಕೇಂದ್ರ ಸರಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಸಮುದಾಯದ 1 ರಿಂದ 8ನೆ ತರಗತಿ ವರೆಗಿನ ಮಕ್ಕಳ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸಿರುವುದು ದಮನಿತ ವರ್ಗಗಳನ್ನು ಶಿಕ್ಷಣದಿಂದ ವಂಚಿಸುವ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ ಎಂದು ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರನ್ನು ಸಂವಿಧಾನವು ತುಳಿತಕ್ಕೆ ಒಳಗಾದ ಹಾಗೂ ಸೌಲಭ್ಯಗಳಿಂದ ವಂಚಿತರಾಗಿರುವವರು ಎಂದು ಗುರುತಿಸಿದೆ. ಈ ವರ್ಗಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಸಲು ಅಗತ್ಯ ಬೆಂಬಲವನ್ನು ಸರಕಾರಗಳು ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡುವುದು ಸರಕಾರದ ಜವಾಬ್ದಾರಿ. ಮಕ್ಕಳನ್ನು ಶಿಕ್ಷಣ ಪಡೆಯಲು ಪ್ರೋತ್ಸಾಹಿಸುವ ಬದಲು ಅವರಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ಕಸಿದುಕೊಳ್ಳುತ್ತಿರುವುದು ಅತ್ಯಂತ ಖೇದಕರ ಹಾಗೂ ಮಕ್ಕಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಆರ್‍ಟಿಇ ಕಾಯ್ದೆಯಡಿ ಒಂದರಿಂದ 8ನೇ ತರಗತಿವರೆಗಿನ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ನೆಪವನ್ನು ಕೇಂದ್ರ ಸರಕಾರ ನೀಡಿದೆ. ಆದರೆ, ಸರಕಾರದ ಷಡ್ಯಂತ್ರದ ಭಾಗವಾಗಿ ಈ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಈ ಹಿಂದೆ ಸರಕಾರಗಳ ಆಡಳಿತ ಅವಧಿಯಲ್ಲಿ ಮಕ್ಕಳಿಗೆ ನೀಡುತ್ತಿದ್ದ ರೀತಿಯಲ್ಲೆ ವಿದ್ಯಾರ್ಥಿವೇತವನ್ನು ಮುಂದುವರೆಸಬೇಕು ಎಂದು ಅವರು ಆಗ್ರಹಿಸಿದರು.

Similar News