ಮೊರ್ಬಿ ಸೇತುವೆ ಕುಸಿತದ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ಪಕ್ಷದ ವಕ್ತಾರ ಸಾಕೇತ್ ಗೋಖಲೆ ಬಂಧನ: ಟಿಎಂಸಿ ಆರೋಪ

Update: 2022-12-06 05:12 GMT

ಹೊಸದಿಲ್ಲಿ: ಮೊರ್ಬಿ ಸೇತುವೆ ಕುಸಿತದ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ಪಕ್ಷದ  ವಕ್ತಾರ ಸಾಕೇತ್ ಗೋಖಲೆ Saket Gokhale ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಇದು ಬಿಜೆಪಿಯ ರಾಜಕೀಯ ಸೇಡು ಎಂದು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ಟಿಎಂಸಿ ರಾಷ್ಟ್ರೀಯ ವಕ್ತಾರ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.  ಸಾಕೇತ್ ಅವರು ಸೋಮವಾರ ರಾತ್ರಿ 9 ಗಂಟೆಗೆ ಹೊಸದಿಲ್ಲಿಯಿಂದ ರಾಜಸ್ಥಾನದ ಜೈಪುರಕ್ಕೆ ವಿಮಾನದಲ್ಲಿ ತೆರಳಿದ್ದರು, ಅವರು ವಿಮಾನದಿಂದ ಇಳಿದಾಗ  ವಿಮಾನ ನಿಲ್ದಾಣದಲ್ಲಿ ಸಾಕೇತ್ ಗಾಗಿ ಕಾಯುತ್ತಿದ್ದ  ಗುಜರಾತ್ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಬಂಗಾಳದ ಆಡಳಿತ ಪಕ್ಷದ ಹಿರಿಯ ನಾಯಕ ಡೆರೆಕ್ ಒ'ಬ್ರಿಯಾನ್ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ತನ್ನ ತಾಯಿಗೆ ಕರೆ ಮಾಡಿದ ಸಾಕೇತ್ ಪೊಲೀಸರು ನನ್ನನ್ನು  ಅಹಮದಾಬಾದ್‌ಗೆ ಕರೆದುಕೊಂಡು ಹೋಗುತ್ತಿದ್ದು, ಇಂದು ಮಧ್ಯಾಹ್ನದ ವೇಳೆಗೆ ಅಹಮದಾಬಾದ್ ತಲುಪುವುದಾಗಿ ತಿಳಿಸಿದ್ದರು. ಪೋಲೀಸರು ಆ ಒಂದು ಎರಡು ನಿಮಿಷಗಳ ಫೋನ್ ಕರೆ ಮಾಡಲು ಅವಕಾಶ ಮಾಡಿಕೊಟ್ಟರು. ನಂತರ ಅವರ ಫೋನ್ ಹಾಗೂ  ಅವರ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡರು ಡರೆಕ್ ಒಬ್ರಿಯಾನ್ ಹೇಳಿದ್ದಾರೆ.

"ಮೊರ್ಬಿ ಸೇತುವೆ ಕುಸಿತದ ಕುರಿತು ಸಾಕೇತ್ ಅವರ ಟ್ವೀಟ್ ಬಗ್ಗೆ  ಅಹಮದಾಬಾದ್ (ಪೊಲೀಸ್) ಸೈಬರ್ ಸೆಲ್‌ ಪ್ರಕರಣ ದಾಖಲಿಸಿದೆ. ಹೀಗೆ ಮಾಡುವುದರಿಂದ  ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಹಾಗೂ  ಪ್ರತಿಪಕ್ಷಗಳನ್ನು ಮೌನಗೊಳಿಸಲು ಸಾಧ್ಯವಿಲ್ಲ. ಬಿಜೆಪಿ ರಾಜಕೀಯ ಸೇಡನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದೆ’’ ಎಂದು ಒಬ್ರಯಾನ್ ಹೇಳಿದ್ದಾರೆ.

ಬಿಜೆಪಿಯಾಗಲಿ, ಗುಜರಾತ್ ಸರಕಾರವಾಗಲಿ ಇನ್ನೂ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸುದ್ದಿ ಸಂಸ್ಥೆ ಪಿಟಿಐ ಜೈಪುರ ವಿಮಾನ ನಿಲ್ದಾಣದ ಪೊಲೀಸ್ ಉಸ್ತುವಾರಿ ದಿಗ್ಪಾಲ್ ಸಿಂಗ್ ಅವರನ್ನು ಸಂಪರ್ಕಿಸಿದೆ.  "ನನಗೆ ಯಾವುದೇ ಮಾಹಿತಿ ಇಲ್ಲ, ಯಾರೂ ನಮಗೆ ಮಾಹಿತಿ ನೀಡಿಲ್ಲ ಅವರು ಹೇಳಿದ್ದಾರೆ

Similar News