ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಪರಿಶೀಲನೆಗೆ ದುಬಾರಿ ಶುಲ್ಕ ವಸೂಲಿ ಆರೋಪ: ಎಚ್‌ಪಿಸಿಎಲ್ ವಿರುದ್ಧ ದೂರು

Update: 2022-12-08 15:56 GMT

ಮಂಗಳೂರು, ಡಿ.8: ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿ ಲಿಮಿಟೆಡ್ (ಎಚ್‌ಪಿಸಿಎಲ್)ನ ಸಿಬ್ಬಂದಿಯು ಸುರಕ್ಷತಾ ತಪಾಸಣೆಯ ಹೆಸರಿನಲ್ಲಿ ಮನೆಗಳಿಗೆ ಭೇಟಿ ನೀಡಿ ಅಡುಗೆ ಮನೆಯಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಪರಿಶೀಲನೆ ಹಾಗೂ ಅದಕ್ಕೆ ಸೇವಾ ಶುಲ್ಕವಾಗಿ ದುಬಾರಿ ಹಣ ಕೇಳಿರುವುದನ್ನು ಆಕ್ಷೇಪಿಸಿ ಪುತ್ತೂರಿನ ದಸ್ತಾವೇಜು ಬರಹಗಾರ ಆರ್.ಕೆ.ಪಾಂಗಣ್ಣಾಯ ಎಂಬವರು ದ.ಕ. ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಗುರುವಾರ ದೂರು ನೀಡಿದ್ದಾರೆ.

ಕೇಂದ್ರ ಸರಕಾರದ ಜೊತೆ ಮಾಡಿಕೊಂಡ ಒಪ್ಪಂದಂತೆ ಎಚ್‌ಪಿಸಿಎಲ್‌ನ ಆದೇಶದ ಪ್ರಕಾರ ಕಂಪನಿಯ ಸಿಬ್ಬಂದಿಯು ಗ್ರಾಹಕರ ಮನೆ ಬಾಗಿಲಿಗೆ ಬರುವುದಾಗಿ ಮಾಧ್ಯಮಗಳಲ್ಲಿ ಗ್ಯಾಸ್ ಏಜೆನ್ಸಿಯೊಂದು ಪ್ರಕಟನೆ ಹೊರಡಿಸಿದೆ. ಕೇಂದ್ರ ಸರಕಾರದ ಗಜೆಟ್ ಪ್ರಕಟನೆಯ ಹೊರತು ಈ ರೀತಿ ಮನೆಗಳಿಗೆ ತೆರಳಿ ಹಣ ವಸೂಲಿ ಮಾಡುವಂತಿಲ್ಲ. 2015ರಲ್ಲೂ ಈ ರೀತಿ ಗ್ಯಾಸ್ ಏಜೆನ್ಸಿಗಳು ವಸೂಲಿಗೆ ಮುಂದಾದಾಗ ಜಿಲ್ಲಾಡಳಿತ ಹಾಗೂ ಸಹಾಯಕ ಕಮಿಷನರ್‌ರ ಗಮನಕ್ಕೆ ತಂದು ವಸೂಲಿಯನ್ನು ಸ್ಥಗಿತಗೊಳಿಸಲಾಗಿತ್ತು ಎಂಬುದನ್ನು ಆರ್.ಕೆ.ಪಾಂಗಣ್ಣಾಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅನಿಲ ಜಾಡಿಯನ್ನು ಮನೆಗಳಿಗೆ ಸರಬರಾಜು ಮಾಡುವಾಗ ಪ್ರತಿ ಬಾರಿ ಗ್ಯಾಸ್ ರಿಫಿಲ್ ವೇಳೆ ಪರೀಕ್ಷಿಸಿ ಕುಂದುಕೊರತೆ ನಿವಾರಿಸಿ ನೀಡಬೇಕು ಎಂದು ಕಾನೂನು ಹೇಳುತ್ತದೆ. ಆದ್ದರಿಂದ ಈ ಬಗ್ಗೆ ತಕ್ಷಣ ಗಮನ ಹರಿಸಿ ಮನೆ ಭೇಟಿ ಹಾಗೂ ಹಣ ವಸೂಲಿ ಕ್ರಮವನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಹಾಗೂ ಪ್ರಧಾನ ಕಾರ್ಯದರ್ಶಿಯ ವಿರುದ್ಧವೇ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದಿದ್ದಾರೆ.

ಗೃಹ ಬಳಕೆ ಸಿಲಿಂಡರ್ ಹೊಂದಿರುವ ಗ್ರಾಹಕರ ಮನೆಗೆ ತೆರಳಿ ಸಿಬ್ಬಂದಿಯು ಸುರಕ್ಷತಾ ತಪಾಸಣೆ ನಡೆಸಿದರೆ ಪ್ರತಿ ಗ್ರಾಹಕ 236 ರೂ.ನಂತೆ ಪಾವತಿಸಬೇಕು. ರಬ್ಬರ್ ಗ್ಯಾಸ್ ಟ್ಯೂಬ್ ಬದಲಾಯಿಸಬೇಕಾದರೆ 190 ರೂ. ನೀಡಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಪುತ್ತೂರು ತಾಲೂಕಿನಲ್ಲಿ 40 ಸಾವಿರ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಇದ್ದು, 236 ರೂ. ಸೇವಾ ಶುಲ್ಕ ವಸೂಲಿ ಮಾಡಿದರೆ ಆ ಮೊತ್ತವೇ 94.40 ಲಕ್ಷ ರೂ.ಆಗುತ್ತದೆ. ದ.ಕ.ಜಿಲ್ಲಾದ್ಯಂತ ಸುಮಾರು 2 ಲಕ್ಷ ಗ್ರಾಹಕರು 236 ರೂ.ನಂತೆ ಪಾವತಿಸಿದರೆ 4.72 ಕೋ. ರೂ. ಮೊತ್ತ ಜಮೆಯಾಗುತ್ತದೆ. ರಾಜ್ಯಾದ್ಯಂತ ಇದೇ ರೀತಿ ಸೇವಾ ಶುಲ್ಕ ವಸೂಲಿ ಮಾಡಿದರೆ ಸುಮಾರು 50 ಕೋ.ರೂ.ಗೂ ಅಧಿಕ ಮೊತ್ತ ಕಂಪನಿ ವಸೂಲಿ ಮಾಡಿದಂತಾಗುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಗ್ಯಾಸ್ ಕಂಪನಿ ಸಿಬ್ಬಂದಿಯು ಮನೆಗಳಿಗೆ ಭೇಟಿ ನೀಡಿ ಕಂಪನಿಯ ಆ್ಯಪ್ ಮೂಲಕ ಗ್ಯಾಸ್ ಸುರಕ್ಷೆ ಬಳಕೆಯನ್ನು ದೃಢಪಡಿಸುತ್ತಾರೆ. ಗ್ಯಾಸ್ ಪೈಪ್, ಸಿಲಿಂಡರ್ ಸುರಕ್ಷತೆ, ಅಡುಗೆ ಕೋಣೆ ವೆಂಟಿಲೇಷನ್ ಸಹಿತ ಕೈಗೊಂಡ ಇತರ ಕ್ರಮಗಳನ್ನು ಆ್ಯಪ್‌ನಲ್ಲೇ ದಾಖಲಿಸಿ ಬಳಿಕ ಅದರ ಪ್ರತಿಯನ್ನು ಏಜೆನ್ಸಿಗೂ ಕಳುಹಿಸಿಕೊಡುತ್ತಾರೆ. ಕಂಪನಿ ಸುರಕ್ಷತೆಯನ್ನು ದೃಢೀಕರಿಸಿದರೆ ಮುಂದೆ ಅನಾಹುತ ಸಂಭವಿಸಿದರೆ, ಆಗ ವಿಮಾ ಮೊತ್ತ ಬಿಡುಗಡೆಗೆ ಸಹಕಾರಿಯಾಗುತ್ತದೆ. ಇಲ್ಲದಿದ್ದರೆ ವಿಮೆ ಸಿಗುವುದಿಲ್ಲ ಎಂಬುದು ಏಜೆನ್ಸಿಗಳ ಮಾತಾಗಿದೆ.

"ಅಡುಗೆ ಗ್ಯಾಸ್ ಸಿಲಿಂಡರ್ ಬಳಕೆಯ ಸುರಕ್ಷೆಯನ್ನು ದೃಢಪಡಿಸಲು ಆಯಾ ಅನಿಲ ಕಂಪನಿಗಳು ಪ್ರತಿ ಐದು ವರ್ಷಕ್ಕೊಮ್ಮೆ ಈ ರೀತಿ ಮನೆ ಭೇಟಿ ಸಮೀಕ್ಷೆ ಮಾಡುತ್ತಾರೆ. ಇಂತಹ ಸಮೀಕ್ಷೆ ದೇಶಾದ್ಯಂತ ನಡೆಯುತ್ತಿದೆ. ಮನೆ ಭೇಟಿ ವೇಳೆ ಸೇವಾ ಶುಲ್ಕವಾಗಿ 236 ರೂ.ವನ್ನೂ ವಸೂಲಿ ಮಾಡಲಾಗುತ್ತಿದೆ".

-ರಾಹುಲ್
ಸೇಲ್ಸ್ ಮೆನೇಜರ್, ಎಚ್‌ಪಿಸಿಎಲ್-ಮಂಗಳೂರು

Similar News