ಪತ್ರಕರ್ತರ 37ನೇ ರಾಜ್ಯ ಸಮ್ಮೇಳನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಆಹ್ವಾನ

'ಕೆಯುಡಬ್ಲ್ಯೂಜೆ' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲರು

Update: 2022-12-08 18:28 GMT

ಬೆಂಗಳೂರು: ತೊಂಬತ್ತೊಂದು ವರ್ಷಗಳಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕ್ರಿಯಾಶೀಲವಾಗಿ ಕೆಲಸ ಮಾಡಿಕೊಂಡು ಬಂದಿರುವ ಬಗ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯಪುರ ಜಿಲ್ಲೆಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ರಾಜ್ಯಪಾಲರಾದ ಆಹ್ವಾನಿಸುವ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಸಂಘಟಿಸುವ ರಾಜ್ಯ ಪತ್ರಕರ್ತರ ಸಮ್ಮೇಳನದ ಬಗ್ಗೆಯೂ ವಿವರ ಮಾಹಿತಿ ಪಡೆದುಕೊಂಡರು.

ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪತ್ರಕರ್ತರು ಕೋವಿಡ್ ಸಂದರ್ಭದಲ್ಲಿ ಎದುರಿಸಿದ ಸಾವು ನೋವಿನ ಬಗ್ಗೆ ವಿವರಿಸಿ, ಸಂಕಷ್ಟದಲ್ಲಿದ್ದ ಪ್ರತಿ ಕುಟುಂಬಕ್ಕೆ ಸರ್ಕಾರ ತಲಾ 5 ಲಕ್ಷ ರೂ ಪರಿಹಾರ ಕೊಡಿಸಿದ್ದನ್ನು ವಿವರಿಸಿದರು. ಆ ಎಲ್ಲಾ ವಿವರ ಮಾಹಿತಿಯನ್ನು ಕೋವಿಡ್ ಕಥೆಗಳು ಪುಸ್ತಕ ರೂಪದಲ್ಲಿ ತರಲಾಗಿದೆ ಎಂದು ತಿಳಿಸಿ ಪುಸ್ತಕವನ್ನು ನೀಡಿದರು.

ನಿಯೋಗದಲ್ಲಿದ್ದ ಪ್ರತಿಯೊಬ್ಬರನ್ನೂ ಪರಿಚಯಿಸಿಕೊಂಡ ರಾಜ್ಯಪಾಲರು, ವಿಜಯಪುರ ಸಮ್ಮೇಳನದ ಬಗ್ಗೆಯೂ ಮಾಹಿತಿ ಪಡೆದರು.

'ತೊಂಬತ್ತೊಂದು ವಸಂತ ತುಂಬಿರುವ ಕೆಯುಡಬ್ಲ್ಯೂಜೆ ನಾಡಿನ ಸಮಸ್ತ ಪತ್ರಕರ್ತರ ಮಾತೃ ಸಂಘಟನೆಯಾಗಿದೆ ಎನ್ನುವುದು ಹೆಮ್ಮೆಯ ಸಂಗತಿ' ಎಂದು ರಾಜ್ಯಪಾಲರು ಪ್ರತಿಕ್ರಿಯಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸುವ ಪತ್ರಕರ್ತರ ಸಮ್ಮೇಳನ ಬಗ್ಗೆ ಮಾಹಿತಿ ಪಡೆದ ರಾಜ್ಯಪಾಲರು ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ಐಎಫ್ ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಭೀ ಬಾಳೋಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ, ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ. ಬಿ. ವಡವಡಗಿ, ವಾಸುದೇವ ಹೊಳ್ಳ, ಮುನಿರಾಜು, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ.  ಶಟಗಾರ, ಚನ್ನವೀರ ಸಗರನಾಳ ಮತ್ತಿತರರು ಹಾಜರಿದ್ದರು.

Similar News