ಬೆಂಗಳೂರು | ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2022-12-10 11:52 GMT

ಬೆಂಗಳೂರು, ಡಿ.10: ರಿಯಲ್ ಎಸ್ಟೇಟ್ ಉದ್ಯಮಿಯೂ ಆದ ಆಂಧ್ರಪ್ರದೇಶ ಮೂಲದ ರೌಡಿ ಶಿವಶಂಕರ್ ರೆಡ್ಡಿ ಹಾಗೂ ಆತನ ಕಾರು ಚಾಲಕ ಅಶೋಕ್ ರೆಡ್ಡಿ ಮೇಲೆ ಪಿಸ್ತೂಲಿನಿಂದ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪದಡಿ ಮೂವರನ್ನು ಇಲ್ಲಿನ ವೈಟ್‍ಫೀಲ್ಡ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಿವಶಂಕರ್ ರೆಡ್ಡಿ ಹಾಗೂ ಆತನ ಕಾರು ಚಾಲಕ ಅಶೋಕ್ ರೆಡ್ಡಿ ಮೇಲೆ ಎಂಟು ಸುತ್ತು ಗುಂಡು ಹಾರಿಸಿದ್ದ ಎದುರಾಳಿ ಬಯ್ಯಾರೆಡ್ಡಿ ಸೇರಿ ಮೂವರು ಬಂಧಿತ ಆರೋಪಿಗಳಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದರು.

ಕೆ.ಆರ್.ಪುರ ಸಮೀಪದ ಕುರು ಸೊನ್ನೇನಹಳ್ಳಿ ಸಮೀಪ ತಾನು ಕಟ್ಟಿಸುತ್ತಿರುವ ಅಪಾರ್ಟ್‍ಮೆಂಟ್ ಕಟ್ಟಡ ಪರಿಶೀಲನೆಗೆ ಡಿ.8ರ ಮಧ್ಯಾಹ್ನ 3ರ ವೇಳೆ ಬಂದಿದ್ದಾಗ ಶಿವಶಂಕರ್ ರೆಡ್ಡಿ ಹಾಗೂ ಆತನ ಕಾರು ಚಾಲಕನ ಮೇಲೆ ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ಗುಂಡು ಹಾರಿಸಿ ಪರಾರಿಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಗಿರೀಶ್ ಅವರು ರಚಿಸಿದ್ದ ಮೂರು ವಿಶೇಷ ಪೆÇಲೀಸ್ ತಂಡಗಳು ಎಂಟು ಸುತ್ತು ಗುಂಡು ಹಾರಿಸಿ ಪರಾರಿಯಾಗಿರುವ ದುಷ್ಕರ್ಮಿಗಳ ಜಾಡು ಹಿಡಿದು ಸ್ಥಳೀಯ ಸಿಸಿ ಟಿವಿ ಕ್ಯಾಮಾರ ದೃಶ್ಯಾವಳಿ ಇನ್ನಿತರ ಮಾಹಿತಿಯನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.

ಮೂರು ಕೊಲೆ ಮತ್ತು ಒಂದು ಕೊಲೆ ಯತ್ನದಲ್ಲಿ ಶಿವಶಂಕರ್ ರೆಡ್ಡಿ(29) ಭಾಗಿಯಾಗಿದ್ದನು. ಶಿವಶಂಕರ್ ರೆಡ್ಡಿ ಹಾಗೂ ಬೈರಾ ರೆಡ್ಡಿ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ದ್ವೇಷ ಹೊಂದಿತ್ತು. ಅದರಂತೆ 17ನೆ ವಯಸ್ಸಿನಲ್ಲಿ ಮೊದಲ ಕೊಲೆ ಮಾಡಿದ್ದ ಶಿವಶಂಕರ್ ರೆಡ್ಡಿ, 18ನೆ ವಯಸ್ಸಿನಲ್ಲಿ ಎರಡನೆ ಕೊಲೆ ಮಾಡಿದ್ದನು. ಬಳಿಕ 23ನೆ ವರ್ಷದಲ್ಲಿ ಮೂರನೆ ಕೊಲೆ ಮಾಡಿದ್ದು, ಒಟ್ಟಾರೆ ಈತನ ಮೇಲೂ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರರಾವ್, ಡಿಸಿಪಿ ಗಿರೀಶ್ ಸೇರಿದಂತೆ ಪ್ರಮುಖರಿದ್ದರು.

Similar News