ಉಕ್ರೇನ್, ಚೀನಾದಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪರಿಹಾರ ಹುಡುಕುವಂತೆ ಸರ್ಕಾರಕ್ಕೆ ಸುಪ್ರೀಂ ಸೂಚನೆ

Update: 2022-12-11 10:31 GMT

ಹೊಸದಿಲ್ಲಿ: ಉಕ್ರೇನ್ (Ukraine) ಮತ್ತು ಚೀನಾ (China) ದೇಶಗಳಿಂದ ಮರಳಿರುವ ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಮುಂದುವರಿಸಲು ಅನುವಾಗುವಂತೆ ಪರಿಹಾರವೊಂದನ್ನು ಕಂಡುಕೊಳ್ಳಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಹಂತದಲ್ಲಿ ಯಾವುದೇ ಪರಿಹಾರವನ್ನು ಕಂಡುಕೊಳ್ಳದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ ಎಂದು ಅಭಿಪ್ರಾಯ ಪಟ್ಟಿದೆ.

ನ್ಯಾ. ಬಿ.ಆರ್. ರವಿ ಹಾಗೂ  ನ್ಯಾ. ವಿಕ್ರಮ್ ನಾಥ್ ಅವರನ್ನೊಳಗೊಂಡಿದ್ದ ನ್ಯಾಯಪೀಠವು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರವು ಅಗತ್ಯ ಬಿದ್ದರೆ ತಜ್ಞರ ಸಮಿತಿಯೊಂದನ್ನು ನೇಮಿಸಬಹುದು ಎಂದು ಹೇಳಿದೆ.

ಕೇಂದ್ರ ಸರ್ಕಾರವು ದೇಶದ ಆಸ್ತಿಯಾಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರಕ್ಷಿಸಲು ತಾನು ನೀಡಿರುವ ಸಲಹೆಯನ್ನು ಪರಿಗಣಿಸುತ್ತದೆ ಮತ್ತು ಪರಿಹಾರ ಕಂಡುಕೊಳ್ಳುತ್ತದೆ ಎಂಬ ಆಶಾವಾದ ಹೊಂದಿದೆ ಎಂದು ನ್ಯಾಯಾಲಯ ಹೇಳಿತು. ಒಂದು ವೇಳೆ ಯಾವುದೇ ಪರಿಹಾರ ಕಂಡುಕೊಳ‍್ಳದಿದ್ದರೆ ವಿದ್ಯಾರ್ಥಿಗಳ ಕುಟುಂಬವು ಶೋಷಣೆಗೊಳಗಾಗುವುದಲ್ಲದೆ ಅವರ ಶೈಕ್ಷಣಿಕ ಬದುಕು ಸಂಪೂರ್ಣ ಅತಂ‍ತ್ರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿತು.

 “ತಜ್ಞರಿಂದ ಪರಿಹಾರ ಪಡೆಯಲು ಈ ಪ್ರಕರಣವು ಸೂಕ್ತವಾಗಿದೆ ಎಂದು ನಾವು ಭಾವಿಸುತ್ತೇವೆ. ನಾವು ಆದೇಶ ನೀಡುವುದರಿಂದ ಹಿಂದೆ ಸರಿಯುತ್ತಿದ್ದೇವೆ. ಈ ಮಾನವೀಯ ಸಮಸ್ಯೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು” ಎಂದು ಸೂಚಿಸಿತು.

ಬಹುತೇಕ ವಿದ್ಯಾರ್ಥಿಗಳು ತಮ್ಮ ಪದವಿ ಪೂರೈಸಿದ್ದರೂ, ಇನ್ನೂ ಚಿಕಿತ್ಸಾ ತರಬೇತಿ ಪಡೆಯಬೇಕಿರುವ ಸಂಗತಿಯನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿತು. ಈ ಕುರಿತು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ವೈದ್ಯಕೀಯ ಪದವಿಗಳಲ್ಲಿ ಪ್ರಾಯೋಗಿಕ ತರಬೇತಿ ಬಹು ಮುಖ್ಯವಾಗಿದೆ ಎಂದು ಪ್ರತಿಪಾದಿಸಿದರು.

ಕೇವಲ ಪಠ್ಯಪುಸ್ತಕ ಅಧ್ಯಯನಗಳು ಪ್ರಾಯೋಗಿಕ ತರಬೇತಿಗೆ ಸಮವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡದಿರುವ ನಿರ್ಧಾರವನ್ನು ಆರೋಗ್ಯ ಸಚಿವಾಲಯ, ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯಗಳೊಂದಿಗೆ ಸಮಾಲೋಚಿಸಿದ ನಂತರವೇ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

“ನ್ಯಾಯಾಲಯವು ತಜ್ಞರನ್ನು ಹೊಂದಿಲ್ಲದೆ ಇರುವುದರಿಂದ ನಿಮ್ಮ ವಾದವು ಸಮರ್ಥನೀಯವಾಗಿದೆ. ಹೀಗಿದ್ದೂ ಕೋವಿಡ್ ನಿಂದ ಉದ್ಭವಿಸಿದ ಅಸಂಖ್ಯಾತ ಪರಿಸ್ಥಿತಿಗಳು ನಿಯಂತ್ರಣ ಮೀರಿ ಘಟಿಸಿದ್ದು, ಅವು ಕಲ್ಪನೆಗೂ ನಿಲುಕದಾಗಿವೆ” ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿತು.

 “ಒಂದು ಶತಮಾನದ ನಂತರ ಮಾನವೀಯತೆ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈಗಾಗಲೇ ಐದು ವರ್ಷ ವ್ಯಾಸಂಗ ಪೂರೈಸಿರುವ ಬಹುತೇಕ 500 ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಅತಂತ್ರಗೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅವರೆಲ್ಲ ಈಗಾಗಲೇ ಏಳು ಸೆಮಿಸ್ಟರ್ ಗಳನ್ನು ಭೌತಿಕವಾಗಿ ಹಾಗೂ ಮೂರು ಸೆಮಿಸ್ಟರ್ ಗಳನ್ನು ಆನ್ ಲೈನ್ ‍ತರಗತಿಗಳಲ್ಲಿ ಪೂರೈಸಿದ್ದಾರೆ. ಹೀಗಿದ್ದೂ ಪಠ್ಯ ಕ್ರಮ ತರಬೇತಿಯು ಪ್ರಾಯೋಗಿಕ ತರಬೇತಿಗೆ ಸರಿಸಮವಾಗುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿಲುವಿಗೆ ತನ್ನ ಸಹಮತವಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

 “ಹೀಗಿದ್ದೂ ವಿದ್ಯಾರ್ಥಿಗಳ ಪೋಷಕರು ಅವರ ಶಿಕ್ಷಣಕ್ಕಾಗಿ ದೊಡ್ಡ ಮೊತ್ತವನ್ನು ವೆಚ್ಚ ಮಾಡಿದ್ದಾರೆ. ಸಮಸ್ಯೆಗೆ ಯಾವುದೇ ಪರಿಹಾರ ಕಂಡುಕೊಳ್ಳದಿದ್ದರೆ, ವಿದ್ಯಾರ್ಥಿಗಳ ಕುಟುಂಬಗಳು ಶೋಷಣೆಗೊಳಗಾಗುವುದಲ್ಲದೆ, ಅವರ ಶೈಕ್ಷಣಿಕ ಬದುಕು ಸಂಪೂರ್ಣ ಅತಂತ್ರವಾಗಲಿದೆ” ಎಂದು ಹೇಳಿತು.

ವೈದ್ಯಕೀಯ ಶಿಕ್ಷಣ ವ್ಯವಸ್ಥೆಯು ಏರುಪೇರಾಗುವ ಸಾಧ‍್ಯತೆ ಇರುವುದರಿಂದ ಯುದ್ಧದ ಕಾರಣಕ್ಕೆ ಉಕ್ರೇನ್ ನಿಂದ ದೇಶಕ್ಕೆ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಲು ಸಾಧ‍್ಯವಿಲ್ಲ ಎಂದು ಇದಕ್ಕೂ ಮುನ್ನ ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು.

ವಿದೇಶಿ ವೈದ್ಯಕೀಯ ವಿದ್ಯಾಲಯಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕ್ರಮವಾಗಿ ಒಂದರಿಂದ ನಾಲ್ಕನೆ ವರ್ಷದ ಪದವಿಯಲ್ಲಿ ಕಲಿಯುತ್ತಿರುವ ಪದವಿ ಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ಸಲ್ಲಿಸಿರುವ ಮೊಕದ್ದಮೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಲಿಸುತ್ತಿದೆ.

Similar News