ಜಾತ್ರೆ ವೇಳೆ ಕಳೆದು ಹೋಗಿದ್ದ ವ್ಯಕ್ತಿ: ಮೂರು ದಶಕಗಳ ಬಳಿಕ ಪತ್ತೆಗೆ ನೆರವಾದ 'ಟ್ಯಾಟೂ'

Update: 2022-12-17 10:02 GMT

ಲಕ್ನೊ: 26 ವರ್ಷಗಳ ಹಿಂದೆ ಜಾತ್ರೆಯೊಂದರಲ್ಲಿ ಕಳೆದು ಹೋಗಿದ್ದ ಯುವಕನೋರ್ವ ತನ್ನ ಕೈ ಮೇಲಿದ್ದ ಹಚ್ಚೆ ಗುರುತಿನ (tattoo) ಸಹಾಯದಿಂದ ಮತ್ತೆ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾನೆ ಎಂದು timesofindia  ವರದಿ ಮಾಡಿದೆ.

ಶ್ರೀಮಂತ ಕೃಷಿ ಕುಟುಂಬದ ಕಿರಿಯ ಪುತ್ರನಾಗಿದ್ದ, ಕಿವುಡು-ಮೂಕ ಸಮಸ್ಯೆಗೊಳಗಾಗಿದ್ದ ಜಿಲಾಜಿತ್ ಸಿಂಗ್ ಮೌರ್ಯ ಎಂಬ ಯುವಕ 1996ರಲ್ಲಿ ಅಜಂಗಢ ಜಿಲ್ಲೆಯ ತನ್ನ ಗೊಥಾನ್ ಗ್ರಾಮದ ಹೊರವಲಯದಿಂದ ಕಾಣೆಯಾಗಿದ್ದ. ಆಗ ಆತನ ವಯಸ್ಸು 35 ವರ್ಷವಾಗಿತ್ತು.

"ಈ ಘಟನೆಯು 1996ರಲ್ಲಿ ಜಿಲಾಜಿತ್ ಸಿಂಗ್ ತನ್ನ ಗ್ರಾಮದ ಸಮೀಪ ಆಯೋಜಿಸಲಾಗಿದ್ದ ಜಾತ್ರೆಗೆ ತೆರಳಿದ್ದಾಗ ಸಂಭವಿಸಿತ್ತು. ಆನಂತರ ಆತ ಮನೆಗೆ ಹಿಂದುರಿಗಿರಲಿಲ್ಲ" ಎಂದು ಅಜಂಗಢದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾರ್ಥಿಗಳಿಗೆ ವಿಜ್ಞಾನ ಬೋಧಿಸುತ್ತಿರುವ ಆತನ ಸೋದರನ ಪುತ್ರ ಚಂದ್ರಶೇಖರ್ ಮೌರ್ಯ (46) ತಿಳಿಸಿದ್ದಾರೆ. 

ಮಗ ನಾಪತ್ತೆಯಾದಾಗಿನಿಂದ ಜಿಲಾಜಿತ್ ಸಿಂಗ್ ತಂದೆ ಸೋಹನ್ ಮೌರ್ಯ ಹಾಗೂ ಆತನ ಇಬ್ಬರು ಸಹೋದರರು ತೀರಾ ಕ್ಷೋಭೆಗೊಳಗಾಗಿದ್ದರು ಮತ್ತು ಅವರನ್ನು ಸಂತೈಸುವುದೇ ಸವಾಲಾಗಿ ಪರಿಣಮಿಸಿತ್ತು. ಜಿಲಾಜಿತ್ ಸಿಂಗ್ ತಾಯಿ 1991ರಲ್ಲೇ ನಿಧನರಾಗಿದ್ದರು.

"ಆತ ಮಾನಸಿಕವಾಗಿಯೂ ಇತರರಷ್ಟು ಜಾಗೃತ ವ್ಯಕ್ತಿಯಾಗಿರಲಿಲ್ಲ. ನನ್ನ ತಾತ ತಿಂಗಳುಗಟ್ಟಲೆ ಆತನಿಗಾಗಿ ರೋದಿಸಿದರು. ನನ್ನ ತಂದೆ ಹಾಗೂ ಚಿಕ್ಕಪ್ಪ ಆತನನ್ನು ಹುಡುಕಲು ನೆರೆಯ ಜಿಲ್ಲೆಗಳಿಗೆ ತೆರಳಿದರು. ಆದರೆ, ಅಲ್ಲೆಲ್ಲೂ ಆತ ಪತ್ತೆಯಾಗಲಿಲ್ಲ. ನಾವು ಪೂಜಾ ಸ್ಥಳಗಳಿಗೂ ಭೇಟಿ ನೀಡಿ, ಬಡಜನರಿಗೆ ದಾಮ-ಧರ್ಮ ನೀಡಿದೆವು. ಹಲವಾರು ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿದೆವು. ಆದರೆ, ಅವೆಲ್ಲ ವ್ಯರ್ಥವಾದವು" ಎಂದು ಅವರು ಹೇಳಿದ್ದಾರೆ.

ವರ್ಷಗಳುರುಳಿದಂತೆ ಜನರು ಆತ ಕಾಣೆಯಾಗಿದ್ದಾನೆ ಎಂಬ ನಿರ್ಧಾರಕ್ಕೆ ಬಂದರು. ಜಿಲಾಜಿತ್ ತಂದೆ 2011ರಲ್ಲಿ ಮೃತಪಟ್ಟರು. ಜಿಲಾಜಿತ್ ಕುಟುಂಬವು ತಲೆಮಾರಿನ ಬದಲಾವಣೆಗೆ ಸಾಕ್ಷಿಯಾಗಿ ಇದೀಗ ಜಿಲಾಜಿತ್‌ ಸಹೋದರರ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಅವರಿಗೆ ಮಕ್ಕಳೂ ಇವೆ.

ಜಿಲಾಜಿತ್ ಪತ್ತೆಯಾದಾಗಿನಿಂದ ಆತನ ಕುಟುಂಬವು ಆತ ನಾಪತ್ತೆಯಾದಾಗಿನಿಂದ ಅನುಭವಿಸಿದ ನೋವನ್ನು ಸ್ಮರಿಸುತ್ತಿದೆ. ಯಾರೂ ಕೂಡಾ ತಮ್ಮ ಹುಚ್ಚು ಕನಸಿನಲ್ಲೂ ಆತ ಒಂದು ದಿನ ಮರಳಿ ಮನೆಗೆ ಬರಬಹುದು ಎಂದು ಊಹಿಸಿರಲಿಲ್ಲ. ಆದರೆ, ಆತ ಕೊನೆಗೂ ಕುಟುಂಬವನ್ನು ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಅಜಂಗಢದಿಂದ 260 ಕಿಮೀ ದೂರದಲ್ಲಿರುವ ರಾಯ್‌ಬರೇಲಿ ಜಿಲ್ಲೆಯ ಹತ್ವಾ ಗ್ರಾಮದಲ್ಲಿನ ಕ್ಷೌರದ ಅಂಗಡಿಯಲ್ಲಿ ಕಿವಿ ಕೇಳಿಸದ, ಮಾತು ಬಾರದ, ಕೊಳಕಾಗಿದ್ದ ವಯಸ್ಸಾದ ವ್ಯಕ್ತಿಯೊಬ್ಬ ಆ ಗ್ರಾಮದ ಪ್ರಧಾನ ದಿಲೀಪ್ ಸಿಂಗ್ ಕಣ್ಣಿಗೆ ಬಿದ್ದ. ಆತನ ವಾಸಸ್ಥಳವನ್ನು ಅರಿಯಲು ಆತನ ಕೈ ಮೇಲೆ ಹಾಕಿದ್ದ ಮಾಸಿದ ಹಚ್ಚೆ ಗುರುತು (tattoo) ಮಾತ್ರ ಸುಳಿವು ನೀಡುತ್ತಿತ್ತು. ಆ ಹಚ್ಚೆಯಲ್ಲಿ ಆತನ ಹೆಸರು, ವಿಳಾಸವನ್ನು ನಮೂದಿಸಲಾಗುತ್ತಾದರೂ, 'ಮೌರ್ಯ', 'ಅಜಂಗಢ' ಎಂಬ ಪದಗಳು ಮಾತ್ರ ಸ್ಪಷ್ಟವಾಗಿ ಕಾಣುತ್ತಿದ್ದವು.

ಆ ಕರುಣಾಮಯಿ ಪ್ರಧಾನರು ಆ ವ್ಯಕ್ತಿಯನ್ನು ತನ್ನ ಮನೆಗೆ ಕರೆದೊಯ್ದು ಆತನಿಗೆ ಆಹಾರ ಉಣಿಸಿದರು. ನಂತರ ಆತನ ಕೈಮೇಲಿದ್ದ ಹಚ್ಚೆ ಗುರುತಿನ ಭಾವಚಿತ್ರ ತೆಗೆದು ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡರು. ಇದನ್ನು ಹಲವಾರು ಮಂದಿ ಹಂಚಿಕೊಂಡಿದ್ದರಿಂದ ಆ ಭಾವಚಿತ್ರ ಮೌರ್ಯ ಕುಟುಂಬದ ಸಂಬಂಧಿಕರೊಬ್ಬರಿಗೂ ತಲುಪಿತು.

"ಡಿಸೆಂಬರ್ 13ರಂದು ಓರ್ವ ಶಿಕ್ಷಕರು ವಯಸ್ಸಾದ ವ್ಯಕ್ತಿಯೊಬ್ಬರ ಕೈ ಮೇಲಿರುವ ಮಾಸಿದ ಹಚ್ಚೆ ಗುರುತಿನ ಭಾವಚಿತ್ರವನ್ನು ನನಗೆ ಕಳಿಸಿದ್ದರು. ಆ ಚಿತ್ರವನ್ನು ಅಮೇಠಿ ಮೂಲದ ಶಿವೇಂದ್ರ ಸಿಂಗ್ ಮಾಡಿದ್ದ ಫೇಸ್‌ಬುಕ್ ಪೋಸ್ಟ್‌ನಿಂದ ಹಂಚಿಕೊಳ್ಳಲಾಗಿತ್ತು" ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

"ಮರು ಯೋಚಿಸದೆ ಗ್ರಾಮ ಪ್ರಧಾನರ ಪುತ್ರರಾಗಿದ್ದ ಶಿವೇದ್ರ ಸಿಂಗ್ ಅವರಿಗೆ ಸಂದೇಶ ಕಳಿಸಿ ನಂತರ ಆ ಭಾವಚಿತ್ರವನ್ನು ತೋರಿಸಲು ನನ್ನ ತಂದೆಯ ಬಳಿಗೆ ಓಡಿದೆ" ಎಂದು ಹೇಳಿದ್ದಾರೆ.

ಜಿಲಾಜಿತ್‌ನ ಇಬ್ಬರು ಸಹೋದರರು ಆತನ ಗುರುತನ್ನು ದೃಢಪಡಿಸಿದ ನಂತರ ಚಂದ್ರಶೇಖರ್, ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಕಿರಿಯ ಸಹೋದರನೊಂದಿಗೆ ಅಮೇಠಿಗೆ ತೆರಳಿ ಆತನನ್ನು ಮರಳಿ ಮನೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Similar News