ಪ್ರಧಾನಿಯಾಗಿದ್ದಾಗ ನಾನು ಅಸಹಾಯಕನಾಗಿದ್ದೆ, ಸೇನಾ ಮುಖ್ಯಸ್ಥರಲ್ಲೇ ನಿಜವಾದ ಅಧಿಕಾರವಿತ್ತು: ಇಮ್ರಾನ್‌ ಖಾನ್

Update: 2022-12-17 17:50 GMT

ಇಸ್ಲಮಾಬಾದ್: ಪ್ರಧಾನಿಯಾಗಿದ್ದಾಗ ತಾನು ಅಸಹಾಯಕನಾಗಿದ್ದೆ. ಯಾಕೆಂದರೆ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಕಮರ್ ಜಾವೆದ್ ಬಾಜ್ವಾ ಅಧಿಕಾರದಲ್ಲಿದ್ದ ನಿಜವಾದ ವ್ಯಕ್ತಿಯಾಗಿದ್ದರು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಹೇಳಿದ್ದಾರೆ. 

ನಾನು ಪ್ರಧಾನಿಯಾಗಿದ್ದರೂ ಜನರಲ್ ಬಾಜ್ವಾ ಅಧಿಕಾರದಲ್ಲಿದ್ದ ನಿಜವಾದ ವ್ಯಕ್ತಿಯಾಗಿದ್ದರು. ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆ(ಎನ್ಎಬಿ)ಯ ನಿಯಂತ್ರಣ ಅವರ ಕೈಯಲ್ಲಿತ್ತು. ಯಾವ ರಾಜಕಾರಣಿ ಜೈಲಿಗೆ ಹೋಗಬೇಕೆಂಬುದನ್ನು ಅವರು ನಿರ್ಧರಿಸುತ್ತಿದ್ದರು ಎಂದು ಇಮ್ರಾನ್‌ ಖಾನ್
ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

“ಕಳ್ಳರಾದ ಷರೀಫ್ ಕುಟುಂಬ, ಜರ್ದಾರಿ ಕುಟುಂಬದ ವಿರುದ್ಧದ ಪ್ರಕರಣಗಳು ಪ್ರಬುದ್ಧವಾಗಿದೆ ಎಂದು ಎನ್ಎಬಿ ನನಗೆ ವರದಿ ನೀಡಿದ್ದರೂ ಅದನ್ನು ತಾರ್ಕಿಕ ಅಂತ್ಯದೆಡೆ ಕೊಂಡೊಯ್ಯಲು ಜನರಲ್ ಬಾಜ್ವಾ ಅವಕಾಶ ನೀಡಲಿಲ್ಲ. ಬೃಹತ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಗಿನ ಪ್ರಧಾನಿ ಶಹಬಾರ್ ಶರೀಫ್ ಅಪರಾಧಿ ಎಂಬುದು ಸ್ಪಷ್ಟವಾಗಿದ್ದರೂ ಜ. ಬಾಜ್ವಾ ಅವರ ನೆರವಿಗೆ ಬಂದರು. ಶಹಬಾಝ್ ಶರೀಫ್ ಮತ್ತವರ ಪುತ್ರರಾದ ಹಂಝಾ ಮತ್ತು ಸುಲೆಮಾನ್ ವಿರುದ್ಧದ ಬಹುಕೋಟಿ ಡಾಲರ್ ಪ್ರಕರಣದಲ್ಲಿ ಫೆಡರಲ್ ತನಿಖಾ ಏಜೆನ್ಸಿಯ ತನಿಖೆಗೆ ಚಾಲನೆ ದೊರೆತಾಗಲೂ ಬಾಜ್ವಾ ಅವರ ರಕ್ಷಣೆಗೆ ನಿಂತರು. ನಾನಾಗ ಪ್ರಧಾನಿಯಾಗಿದ್ದರೂ ಅಸಹಾಯಕನಾಗಿದ್ದೆ” ಎಂದು ಇಮ್ರಾನ್ ಹೇಳಿದ್ದಾರೆ.

“ತನ್ನ ಸರಕಾರದ ವಿರುದ್ಧ ಬಾಜ್ವಾ ‘ಡಬಲ್ ಗೇಮ್’ ಆಡುತ್ತಿದ್ದರು. 2019ರಲ್ಲಿ ಅವರ ಸೇವಾವಧಿಯನ್ನು ವಿಸ್ತರಿಸಿ ತಾನು ಬಹುದೊಡ್ಡ ತಪ್ಪು ಮಾಡಿದ್ದೆ” ಎಂದು ಈ ಹಿಂದೆ ಇಮ್ರಾನ್‌ ಖಾನ್ ಹೇಳಿದ್ದಾರೆ.

Similar News