ಯುವ ಸಾಹಿತಿಗಳು ಅಧ್ಯಯನದಲ್ಲಿ ತೊಡಗಬೇಕು: ಮೂಡ್ನಾಕೂಡು ಚಿನ್ನಸ್ವಾಮಿ

Update: 2022-12-18 17:48 GMT

ಬೆಂಗಳೂರು, ಡಿ.18: ಇಂದಿನ ಯುವ ದಲಿತ ಸಾಹಿತಿಗಳು ಸಂಶೋಧನೆ ಮತ್ತು ಆಳವಾದ ಅಧ್ಯಯನದಲ್ಲಿತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಕಿವಿಮಾತು ಹೇಳಿದರು.

ರವಿವಾರ ಕನ್ನಡ ಭವನದಲ್ಲಿ ನಡೆದ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಯುವ ಸಾಹಿತಿಗಳು ಒಂದು ಪುಸ್ತಕವನ್ನು ಪ್ರಕಟಿಸುತ್ತಿದಂತೆ ಸಾಮಾಜಿಕ ಜಾಲತಾಣಗಳ ಪ್ರಚಾರದ ಗೀಳಿಗೆ ಬೀಳುವುದು ಹೆಚ್ಚಾಗಿದೆ. ಇಂದಿನ ಸಮಾಜಕ್ಕೆ ಸಾಹಿತಿಗಳ ಜವಾಬ್ದಾರಿ ಹೆಚ್ಚಾಗಿರುವುದರಿಂದ ಹೆಚ್ಚೆಚ್ಚು ಅಧ್ಯಯನಗಳಲ್ಲಿ ತೊಡಗಬೇಕು ಎಂದು ತಿಳಿಸಿದರು.

ಇಂದು ದಲಿತ ಪರಿಷತ್ತಿನ ಪ್ರಾಮುಖ್ಯತೆ ಹೆಚ್ಚಾಗಿದೆ. ಪರಿಷತ್ತುಗಳು ಧಾರ್ಮಿಕ ಬೆಳವಣಿಗೆಯನ್ನು ಬಿತ್ತಬಾರದು ಬದಲಾಗಿ ಸಾಹಿತ್ಯಿಕ ಬೆಳವಣಿಗೆ ಆಗಬೇಕು. ಈ ನಿಟ್ಟಿನಲ್ಲಿ ದಲಿತ ಪರಿಷತ್ತು ಸಾಹಿತ್ಯಿಕವಾಗಿ ಮುನ್ನಡೆಯುತ್ತಿದೆ ಎಂದರು.

ದಲಿತರಲ್ಲಿ ಅಂಬೇಡ್ಕರ್ ಇನ್ನೂ ತೆರೆದುಕೊಂಡಿಲ್ಲ. ಆದ ಕಾರಣ ದಲಿತರು ಇನ್ನು ಕಗ್ಗತ್ತಲಲ್ಲಿದ್ದಾರೆ. ನಾವು ಮನೆ ಮನೆಗೆ ಅಂಬೇಡ್ಕರ್ ತಲುಪಿಸುವ ಕಾರ್ಯ ಮಾಡಬೇಕು. ಇಂದಿನ ದಿನಮಾನಗಳಲ್ಲಿ ದಲಿತರು ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.

ಮಕ್ಕಳಿಗೆ ಜಾತಿ ಅಸ್ಪೃಶ್ಯತೆ ಬಗ್ಗೆ ಅರಿವು ಮೂಡಿಸುವ ಪಠ್ಯ ಬೇಕಾಗಿದೆ. ಜಾತಿ, ಅಸ್ಪೃಶ್ಯತೆ ವ್ಯವಸ್ಥೆ ಕೆಟ್ಟದು ಎಂದು ಹೇಳುವ ಪಠ್ಯ ಇದುವರೆಗೆ ಬಂದಿಲ್ಲ. ಇಂದಿನ ಪೀಳಿಗೆಗೆ ಅಂಬೇಡ್ಕರ್ ಬಗೆಗೆ ತಿಳಿಸುವ ನಿಟ್ಟಿನಲ್ಲಿ ದಲಿತ ಸಂಘಟನೆಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಲೇಖಕ ಪ್ರೊ.ಸಿದ್ದು ಯಾಪಲಪರವಿ ಮಾತನಾಡಿ, ದಲಿತ ಪ್ರಜ್ಞೆ ಸಮೂಹ ಪ್ರಜ್ಞೆಯಾಗುವುದಕ್ಕೆ ಕಾರಣ ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮಿಗಳು. ಅವರಿಗೆ ದಲಿತ ಸ್ಪರ್ಶ, ಕಾಳಜಿ ಅನನ್ಯವಾಗಿತ್ತು. ದಲಿತ ಲೇಖಕರಿಗೆ ಹೆಚ್ಚಿನ ಮನ್ನಣೆ ನೀಡಿದ್ದರು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 25 ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪತ್ರಕರ್ತ ದೇವು ಪತ್ತಾರ, ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಉಪಸ್ಥಿತರಿದ್ದರು. 

Similar News