ಸರಕಾರದ ಉದ್ಯೋಗದಲ್ಲಿ ಮೇಲ್ಜಾತಿಯ ಆರ್ಥಿಕ ಹಿಂದುಳಿದ ವರ್ಗಗಳಿಗೆ ಶೇ. 10 ಮೀಸಲಾತಿ ತಡೆ ಹಿಡಿಯಿಲು ಅಸ್ಸಾಂ ನಿರ್ಧಾರ

Update: 2022-12-24 15:24 GMT

ಗುವಾಹತಿ: ಮೇಲ್ಜಾತಿಯ ಆರ್ಥಿಕ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರಾಜ್ಯ ಸರಕಾರದ ಉದ್ಯೋಗದಲ್ಲಿ ಶೇ. 10 ಮೀಸಲಾತಿಯನ್ನು ತಡೆ ಹಿಡಿಯಲು ಅಸ್ಸಾಂ(Assam) ಸರಕಾರ ನಿರ್ಧರಿಸಿದೆ.

ಮೇಲ್ಜಾತಿಯ ಆರ್ಥಿಕ ದುರ್ಬಲ ವರ್ಗದವರಿಗೆ ಉದ್ಯೋಗದಲ್ಲಿ ಮೀಸಲಾತಿ ತಡೆ ಈಗಾಗಲೇ ಜಾಹೀರಾತು ಪ್ರಕಟಿಸಲಾದ ಹುದ್ದೆಗಳಿಗೆ ಅನ್ವಯವಾಗುವುದಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಈ ವರ್ಗದವರಿಗೆ ಪ್ರವೇಶಾತಿಯಲ್ಲಿ ಮೀಸಲಾತಿ ಮುಂದುವರಿಯಲಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿ ಪಡೆಯಲು ಸಾಧ್ಯವಾಗದ, ಆದರೆ, ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗಿಂತ ಕಡಿಮೆ ಇರುವವ ಮೇಲ್ಜಾತಿಗಳಿಗೆ ಕೇಂದ್ರ ಸರಕಾರ 2019ರಲ್ಲಿ ಈ ಮೀಸಲಾತಿ ಜಾರಿಗೆ ತಂದಿತ್ತು. ಆದರೆ, ಕುಟುಂಬಕ್ಕೆ 5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಅಥವಾ 1,000 ಚದರ ಅಡಿ ವಸತಿ ನಿವೇಶನ ಇದ್ದರೆ ಈ ಮೀಸಲಾತಿಗೆ ಅರ್ಹರಲ್ಲ ಎಂದು ಹೇಳಿತ್ತು.

ಈ ಕಾನೂನಿನ ಸಾಂವಿಧಾನಿಕತೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ, ನವೆಂಬರ್ 7ರಂದು ಐವರು ಸದಸ್ಯರ ಸುಪ್ರೀಂ ಕೋರ್ಟ್ ನ ನ್ಯಾಯ ಪೀಠ ಮೇಲ್ಜಾತಿಯ ಆರ್ಥಿಕ ಹಿಂದುಳಿದ ವರ್ಗದವರಿಗೆ ಶೇ. 10 ಮೀಸಲಾತಿಯನ್ನು 3:2 ಬಹುಮತದಲ್ಲಿ ಎತ್ತಿ ಹಿಡಿದಿತ್ತು.

ಮೇಲ್ಜಾತಿಯ ಆರ್ಥಿಕ ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಶೇ. 10 ಮೀಸಲಾತಿ ಅನುಷ್ಠಾನಗೊಳಿಸಿದ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಸ್ಸಾಂ ಕೂಡಾ ಇದೆ. ಇತರ ರಾಜ್ಯಗಳೆಂದರೆ ಆಂಧ್ರಪ್ರದೇಶ, ದಿಲ್ಲಿ, ಗೋವಾ, ಗುಜರಾತ್, ಜಮ್ಮು ಹಾಗೂ ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ಮಿಝೊರಾಂ, ತೆಲಂಗಾಣ ಹಾಗೂ ಉತ್ತರಾಖಂಡ.

ಮೀಸಲಾತಿಗೆ ಸಂಬಂಧಿಸಿದ ಸರಕಾರದ ಈ ನಡೆಯನ್ನು ಅಸ್ಸಾಂನ ಪ್ರತಿಪಕ್ಷಗಳು ಶುಕ್ರವಾರ ಟೀಕಿಸಿವೆ. ಈ ನಿರ್ಧಾರ ಸುಪ್ರೀಂ ಕೋರ್ಟ್ ನ ತೀರ್ಪಿಗೆ ವಿರುದ್ಧವಾದುದು ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.

‘‘ಮೇಲ್ಜಾತಿಯ ಆರ್ಥಿಕ ಹಿಂದುಳಿದ ವರ್ಗದವರಿಗೆ ಉದ್ಯೋಗದಲ್ಲಿ ಶೇ. 10 ಮೀಸಲಾತಿ ನೀಡುವುದನ್ನು ತಡೆ ಹಿಡಿದಿರುವ ಸರಕಾರದ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ’’ ಎಂದು ತೃಣಮೂಲ ಕಾಂಗ್ರೆಸ್ ನ ಅಸ್ಸಾಂ ಅಧ್ಯಕ್ಷ ರಿಪುನ್ ಬೋರಾ ಅವರು ಹೇಳಿದ್ದಾರೆ.

ಈ ನಿರ್ಧಾರ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಅಸ್ಸಾಂ ಸರಕಾರದ ವೆಚ್ಚ ಕಡಿತಗೊಳಿಸುವ ಕ್ರಮವಾಗಿದೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಪ್ರತಿಪಕ್ಷದ ನಾಯಕ ದೇಬವೃತ ಸೈಕಿಯಾ ಅವರು ತಿಳಿಸಿದ್ದಾರೆ.

Similar News