ಗುತ್ತಿಗೆದಾರ ಸಂಘದ ಕೆಂಪಣ್ಣನ ಬಂಧನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2022-12-26 12:12 GMT

ಬೆಂಗಳೂರು, ಡಿ.26: ರಾಜ್ಯ ಭ್ರಷ್ಟ ಬಿಜೆಪಿ ಸರಕಾರದ ವಿರುದ್ಧ ಶೇ.40 ಆರೋಪ ಮಾಡಿದ್ದ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ನಡುರಾತ್ರಿಯಲ್ಲಿ ಪೊಲೀಸ್ ಇಲಾಖೆ ಬಂಧಿಸಿರುವುದು ಅತ್ಯಂತ ಅಮಾನವೀಯ ಕೃತ್ಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸೋಮವಾರ ಇಲ್ಲಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಬಿಜೆಪಿ ಶಾಸಕರು, ಸಂಸದರು, ಬಿಜೆಪಿ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ. ಆರೋಪಿಗಳನ್ನು ತನಿಖೆಗೆ ಒಳಪಡಿಸದೆ, ಪೊಲೀಸ್ ಇಲಾಖೆ ಏಕಾಏಕಿ ನ್ಯಾಯಾಲಯದ ಹೆಸರಿನಲ್ಲಿ ಕೆಂಪಣ್ಣನವರನ್ನು ನಡುರಾತ್ರಿಯಲ್ಲಿ ಬಂಧಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ ಎಂದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ಶ್ರೀನಿವಾಸ್ ಪ್ರಸಾದ್, ಬಿಜೆಪಿ ಪಕ್ಷದ ಶಾಸಕರ ವಿರುದ್ಧ ಕೋಟಿಗಟ್ಟಲೆ ಹಣ ಪಡೆದಿರುವ ಬಗ್ಗೆ ನೇರವಾಗಿ ಆರೋಪ  ಮಾಡಿದ್ದಾರೆ. ಅದರ ಬಗ್ಗೆ ದೂರು ದಾಖಲಾಗಿದ್ದರೂ, ಇದುವರೆಗೂ ಪೊಲೀಸ್ ಇಲಾಖೆ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಧ್ವನಿ ಎತ್ತಿದರೆ, ಅಂತವರನ್ನು ಬಂಧಿಸಿ ಧ್ವನಿ ಅಡಗಿಸುವ ಕೃತ್ಯದಲ್ಲಿ ಬಿಜೆಪಿ ಸರಕಾರ ಭಾಗಿಯಾಗಿರುವುದು ಬಿಜೆಪಿಯ ನೀಚತನವನ್ನು ಎತ್ತಿ ತೋರುತ್ತದೆ. ಕೆಂಪಣ್ಣನವರು ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದಾರೆ. ಅವರ ಧ್ವನಿಗೆ ನಾವು ಧ್ವನಿಯಾಗಿ ನಿಲ್ಲುತ್ತೇವೆ, ಅವರ ಸಂಕಷ್ಟಕ್ಕೆ ನಾವು ಸ್ಪಂದಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ಬಿಜೆಪಿ ಸರಕಾರವು ಪೊಲೀಸ್ ಇಲಾಖೆ ಮೂಲಕ ಕೆಂಪಣ್ಣನವರನ್ನು ಬಂಧಿಸುವ ಪ್ರಯತ್ನ ನಡೆಸಿದೆ. ಆದರೆ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರನ್ನು ಈ ರೀತಿ ಬಂಧಿಸುವ ಮೂಲಕ ಬೆದರಿಸುವ ತಂತ್ರವನ್ನು ಬಿಜೆಪಿ ಸರಕಾರ ಅನುಸರಿಸುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಬೆಂಗಳೂರು ನಗರ ಪ್ರಚಾರ ಸಮಿತಿಯ ಪದಾಧಿಕಾರಿ ಜಿ. ಜನಾರ್ಧನ್, ಎ. ಆನಂದ್ ಪುಟ್ಟಸ್ವಾಮಿ ಗೌಡ್ರು, ಬಿ.ಮಂಜುನಾಥ್, ಚಂದ್ರಶೇಖರ್, ಕೆ.ಟಿ. ನವೀನ್ ಚಂದ್ರ, ಸುರೇಶ್ ಹಾಗೂ ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.

Similar News