ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ಎಲ್ಗಾರ್ ಪರಿಷದ್ ಕಾರ್ಯಕ್ರಮದ ಪಾತ್ರವಿರಲಿಲ್ಲ: ಹಿರಿಯ ತನಿಖಾಧಿಕಾರಿ

Update: 2022-12-27 14:00 GMT

ಮುಂಬೈ: ಮಾನವ ಹಕ್ಕು ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿದಂತೆ 16 ಜನರು ಆರೋಪಿಗಳಾಗಿರುವ ಎಲ್ಗಾರ್ ಪರಿಷದ್ ಪ್ರಕರಣ ಮಹತ್ವದ ತಿರುವನ್ನು ಪಡೆದುಕೊಂಡಿದೆ. 2018, ಜ.1ರಂದು ಭೀಮಾ ಕೋರೆಗಾಂವ್ ಗ್ರಾಮದಲ್ಲಿ ದಲಿತ ಸಮುದಾಯದ ಸದಸ್ಯರ ಮೇಲೆ ನಡೆದಿದ್ದ ಜಾತಿ ಹಿಂಸಾಚಾರದ ತನಿಖೆ ನಡೆಸಿದ್ದ ಹಿರಿಯ ಪೊಲೀಸ್ ಅಧಿಕಾರಿಯೋರ್ವರು,‌ ಹಿಂಸಾಚಾರದಲ್ಲಿ ಪುಣೆ ನಗರದಲ್ಲಿ ನಡೆದಿದ್ದ ಎಲ್ಗಾರ್ ಪರಿಷದ್ ಕಾರ್ಯಕ್ರಮದ ಪಾತ್ರವಿರಲಿಲ್ಲ ಎಂದು ಪ್ರಮಾಣಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ ಎಂದು thewire.in ವರದಿ ಮಾಡಿದೆ.

ಹಿಂಸಾಚಾರದ ಕುರಿತು ವಿಚಾರಣೆ ನಡೆಸುತ್ತಿರುವ ಇಬ್ಬರು ಸದಸ್ಯರ ನ್ಯಾಯಾಂಗ ಆಯೋಗದ ಮುಂದೆ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಗಣೇಶ ಮೋರೆಯವರು ನೀಡಿರುವ ಈ ನಿರ್ಣಾಯಕ ಹೇಳಿಕೆಯು ಪ್ರತ್ಯೇಕ ಪ್ರಕರಣದಲ್ಲಿ ಬಂಧಿತರಾದ 16 ಮಾನವ ಹಕ್ಕುಗಳ ಹೋರಾಟಗಾರರ ವಿರುದ್ಧ ಪುಣೆ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಾಡಿದ್ದ ಆರೋಪಗಳನ್ನು ತಳ್ಳಿಹಾಕಿದೆ.

ಬಹುಶಃ, ಇದೇ ಮೊದಲ ಬಾರಿಗೆ ರಾಜ್ಯ ಸರಕಾರದ ಓರ್ವ ಪ್ರತಿನಿಧಿ ಹಿಂಸಾಚಾರದಲ್ಲಿ ಎಲ್ಗಾರ್ ಪರಿಷದ್ ಕಾರ್ಯಕ್ರಮದ ಪಾತ್ರವಿರಲಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಕೋಲ್ಕತಾ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಜೆ.ಎನ್.ಪಟೇಲ್ ನೇತೃತ್ವದ ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿ ಸುಮಿತ್ ಮಲಿಕ್ ಅವರು ಸದಸ್ಯರಾಗಿರುವ ನ್ಯಾಯಾಂಗ ಆಯೋಗವು 2018ರಲ್ಲಿ ತನ್ನ ವಿಚಾರಣೆಯನ್ನು ಆರಂಭಿಸಿತ್ತು. ಆಗಿನಿಂದ ಹಲವಾರು ಅವಧಿ ವಿಸ್ತರಣೆಗಳನ್ನು ಪಡೆದುಕೊಂಡಿರುವ ಆಯೋಗವು ಪುಣೆ ಮತ್ತು ಮುಂಬೈಗಳಲ್ಲಿ ನಿಯಮಿತ ವಿಚಾರಣೆಗಳನ್ನು ನಡೆಸಿದೆ. ಸಂತ್ರಸ್ತರ ಜೊತೆಗೆ ಪೊಲೀಸರು ಮತ್ತು ಗುಪ್ತಚರ ಘಟಕ ಸೇರಿದಂತೆ ರಾಜ್ಯ ಆಡಳಿತ ವ್ಯವಸ್ಥೆ ಅಫಿಡವಿಟ್ ಗಳನ್ನು ಸಲ್ಲಿಸಿದ್ದಾರೆ.

 ಪ್ರಕರಣವನ್ನು ಎನ್ಐಎ ಹಸ್ತಾಂತರಿಸುವ ಮುನ್ನ ಪುಣೆ ಪೊಲೀಸರು ಎಲ್ಗಾರ್ ಪರಿಷದ್ ಸಮಾವೇಶವು ಮಾವೋವಾದಿಗಳ ಬೆಂಬಲವನ್ನು ಹೊಂದಿತ್ತು ಎಂದು ಪ್ರತಿಪಾದಿಸಿದ್ದರು.

ಸುಧೀರ ಧಾವಳೆ, ಮಹೇಶ ರಾವುತ್, ಶೋಮಾ ಸೇನ್ ,ಅರುಣ ಫೆರೀರಾ, ಸುಧಾ ಭಾರದ್ವಾಜ, ವರವರ ರಾವ್, ವೆರ್ನನ್ ಗೊನ್ಸಾಲ್ವಿಸ್, ರೋನಾ ವಿಲ್ಸನ್, ಸುರೇಂದ್ರ ಗಡ್ಲಿಂಗ್, ಫಾ.ಸ್ಟಾನ್ ಸ್ವಾಮಿ, ಹನಿ ಬಾಬು, ಆನಂದ ತೇಲ್ತುಂಬ್ಡೆ, ಗೌತಮ ನವ್ಲಾಖಾ, ಸಾಗರ ಗೋರ್ಖೆ, ರಮೇಶ ಘಾಯಿಚೋರ್ ಮತ್ತು ಜ್ಯೋತಿ ಜಗತಾಪ್ ಅವರು ಪ್ರಕರಣದಲ್ಲಿ ಬಂಧಿತ ಆರೋಪಿಗಳಾಗಿದ್ದಾರೆ.

ತೇಲ್ತುಂಬ್ಡೆ, ಭಾರದ್ವಾಜ ಮತ್ತು ವರವರ ರಾವ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರೆ, ಸಾಕಷ್ಟು ವೈದ್ಯಕೀಯ ಆರೈಕೆಯನ್ನು ಒದಗಿಸುವಲ್ಲಿ ರಾಜ್ಯ ಸರಕಾರದ ನಿರ್ಲಕ್ಷ ಮತ್ತು ವೈಫಲ್ಯದಿಂದಾಗಿ ಸ್ವಾಮಿ ಕಳೆದ ವರ್ಷ ಜೈಲಿನಲ್ಲಿ ನಿಧನರಾಗಿದ್ದಾರೆ. ಉಳಿದ 12 ಜನರು ಈಗಲೂ ಮುಂಬೈ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.

ಈ 16 ಜನರು ತಮ್ಮ ಭಾಷಣಗಳ ಮೂಲಕ 2018, ಜ.1ರಂದು ಭೀಮಾ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆ ಸಂದರ್ಭದಲ್ಲಿ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಸಮಾವೇಶಗೊಂಡಿದ್ದ ಜನರನ್ನು ಪ್ರಚೋದಿಸುವಲ್ಲಿ ಮತ್ತು ಹಿಂಸಾಚಾರದ ಕಿಡಿಯನ್ನು ಹೊತ್ತಿಸುವಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು ಎನ್ನುವುದು ಎನ್ಐಎ ಆರೋಪವಾಗಿದೆ. ಎಲ್ಗಾರ್ ಪರಿಷದ್ ಕಾರ್ಯಕ್ರಮವನ್ನು 2017, ಡಿ.31ರಂದು ಪುಣೆಯ ಶನಿವಾರವಾಡಾದಲ್ಲಿ ಆಯೋಜಿಸಲಾಗಿತ್ತು.

ಇತ್ತೀಚಿಗಷ್ಟೇ ಸೇವೆಯಿಂದ ನಿವೃತ್ತರಾಗಿರುವ ಮೋರೆ ಈ ವರ್ಷದ ಎಪ್ರಿಲ್ ನಲ್ಲಿ ಆರಂಭಗೊಂಡ ನ್ಯಾಯಾಂಗ ಆಯೋಗದ ವಿಚಾರಣೆಯಲ್ಲಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಮತ್ತು ತಾನು ತನಿಖೆ ನಡೆಸಿದ್ದ ಒಂಭತ್ತು ದೌರ್ಜನ್ಯ ಪ್ರಕರಣಗಳಲ್ಲಿ ಎಲ್ಗಾರ್ ಪರಿಷದ್ ಕಾರ್ಯಕ್ರಮದ ಯಾವುದೇ ಪಾತ್ರವಿರಲಿಲ್ಲ ಎಂದು ಹಿಂಚಾಚಾರದ ಸಾಕ್ಷಿಗಳಲ್ಲೋರ್ವರ ಪರವಾಗಿ ಹಾಜರಿದ್ದ ವಕೀಲ ರಾಹುಲ್ ಮಾಖರೆಯವರ ಪ್ರಶ್ನೆಗೆ ನೀಡಿದ್ದ ಉತ್ತರದಲ್ಲಿ ಒಪ್ಪಿಕೊಂಡಿದ್ದಾರೆ.

ಇನ್ನೋರ್ವ ಸಾಕ್ಷಿ,ಇತ್ತೀಚಿಗಷ್ಟೇ ನಿವೃತ್ತರಾಗಿರುವ ಐಪಿಎಸ್ ಅಧಿಕಾರಿ ಹಾಗೂ ಹಿಂಸಾಚಾರದ ಸಂದರ್ಭದಲ್ಲಿ ಪುಣೆ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ (ದಕ್ಷಿಣ)ರಾಗಿದ್ದ ರವೀಂದ್ರ ಸೇನಗಾಂವಕರ್ ಅವರನ್ನೂ ಉಲ್ಲೇಖಿಸಿರುವ ವರದಿಯು, ಇತ್ತೀಚಿನ ವಾರಗಳಲ್ಲಿ ಆಯೋಗವು ಅವರನ್ನು ಪ್ರಶ್ನಿಸಿತ್ತು ಎಂದು ಹೇಳಿದೆ.

2017,ಡಿ.31ರಂದು ಎಲ್ಗಾರ್ ಪರಿಷದ್ ಕಾರ್ಯಕ್ರಮದಲ್ಲಿ ಮಾಡಲಾಗಿದ್ದ ಭಾಷಣಗಳ ಸ್ವರೂಪ ಕುರಿತು ಪ್ರಶ್ನೆಗೆ ಸೇನಗಾಂವಕರ್, ಅವು ಪ್ರಚೋದನಾಕಾರಿಯಾಗಿದ್ದವು ಮತ್ತು ಭಾಷಣಕಾರರ, ವಿಶೇಷವಾಗಿ ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ದೋಂತಾ ಪ್ರಶಾಂತ್, ಗುಜರಾತಿನ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಪತ್ರಕರ್ತ ಹಾಗೂ ಜಾತಿ ವಿರೋಧಿ ಕಾರ್ಯಕರ್ತ ಸುಧೀರ ಧಾವಳೆ (ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿದ್ದಾರೆ) ಅವರ ವಿರುದ್ಧ ಕ್ರಮವನ್ನು ಅಗತ್ಯವಾಗಿಸಿದ್ದವು ಎಂದು ಉತ್ತರಿಸಿದರು.‌

 ಭಾಷಣಗಳ ಸ್ವರೂಪವು ಪ್ರಚೋದನಾಕಾರಿಯಾಗಿತ್ತು ಮತ್ತು ಅದು ತಕ್ಷಣಕ್ಕೆ ಸ್ಪಷ್ಟವಾಗಿತ್ತು ಎಂದು ಸೇನಗಾಂವಕರ್ ಹೇಳಿದರಾದರೂ, ಪೊಲೀಸರು ತಕ್ಷಣವೇ ಎಫ್ಐಆರ್ ದಾಖಲಿಸಿಕೊಂಡಿರಲಿಲ್ಲ ಎಂದು ಒಪ್ಪಿಕೊಂಡರು. ಮಾನವ ಹಕ್ಕುಗಳ ಕಾರ್ಯಕರ್ತರ ವಿರುದ್ಧದ ಪ್ರಕರಣವು ಅವರನ್ನು ಸುಳ್ಳು ಆರೋಪಗಳಲ್ಲಿ ಸಿಲುಕಿಸಲೆಂದೇ ಮಾಡಿದ್ದ ‘ನಂತರದ ಚಿಂತನೆ ’ಯ ಫಲಿತಾಂಶವಾಗಿದೆ ಎಂದು ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಪ್ರತಿವಾದಿ ಪರ ವಕೀಲರು ಎಂದಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದ್ದಾರೆ.

ಆಯೋಗದೆದುರು ಮೋರೆಯವರ ಹೇಳಿಕೆಯು ಎರಡು ಕಾರಣಗಳಿಂದಾಗಿ ಮಹತ್ವಪೂರ್ಣವಾಗಿದೆ.

ಅದು ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರನ್ನು ಅಕ್ಷರಶಃ ಆರೋಪ ಮುಕ್ತಗೊಳಿಸುತ್ತದೆ ಮತ್ತು ‘ಭೀಮಾ ಕೋರೆಗಾಂವ್ ಹಿಂಸಾಚಾರಗಳ ಹಿಂದೆ ನಿಜಕ್ಕೂ ಯಾರಿದ್ದರು?’ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತರುತ್ತದೆ. ‘ಹಿಂಸಾಚಾರದಲ್ಲಿ ಮಿಲಿಂದ ಏಕಬೋಟೆ ಮತ್ತು ಮನೋಹರ ಕುಲಕರ್ಣಿ ಅಲಿಯಾಸ್ ಸಂಭಾಜಿ ಭಿಡೆ ಅವರ ನೇರ ಪಾತ್ರವನ್ನು ತೋರಿಸುವ ಸಾಕ್ಷಾಧಾರದತ್ತ ನಾವು ಬೆಟ್ಟು ಮಾಡುತ್ತಲೇ ಬಂದಿದ್ದೇವೆ. ಸಂತ್ರಸ್ತರು ದಾಖಲಿಸಿರುವ ಎಫ್ಐಆರ್ ಗಳೂ ಅವರನ್ನು ಮತ್ತು ಭೀಮಾ ಕೋರೆಗಾಂವ್ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವವರನ್ನೇ ಬೆಟ್ಟು ಮಾಡುತ್ತಿವೆ. ಆದರೆ ರಾಜ್ಯ ಸರ್ಕಾರವು ಈ ಸಾಕ್ಷಾಧಾರವನ್ನು ಮುಚ್ಚಿಟ್ಟಿದೆ ’ಎಂದು ಮಾಖರೆ ಹೇಳಿದರು.

ಎಫ್ಐಆರ್ ಗಳು ದಾಖಲಾದ ಬಳಿಕ ದಲಿತರ ಮೇಲೆ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ನೇರ ಪಾತ್ರಕ್ಕಾಗಿ ಬ್ರಾಹ್ಮಣ ಉಗ್ರವಾದಿ ನಾಯಕರಾದ ಏಕಬೋಟೆ ಮತ್ತು ಭಿಡೆ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. 2018ರಲ್ಲಿ ಏಕಬೋಟೆ ಕೆಲವು ದಿನಗಳ ಕಾಲ ಬಂಧನದಲ್ಲಿದ್ದರೆ ಭಿಡೆಯನ್ನು ಮುಟ್ಟುವ ಗೋಜಿಗೆ ಪೊಲೀಸರು ಹೋಗಿರಲಿಲ್ಲ ಎಂದು thewire.in ವರದಿ ಮಾಡಿದೆ.

Similar News