ಕೊಳವೆ ಬಾವಿ, ಆರ್ ಓ ಘಟಕ ಕಾಮಗಾರಿಯಲ್ಲಿ ಅವ್ಯವಹಾರ: BBMP ಮುಖ್ಯ ಆಯುಕ್ತರಿಗೆ ಈ.ಡಿ ನೋಟಿಸ್

Update: 2022-12-28 17:41 GMT

ಬೆಂಗಳೂರು, ಡಿ.28: ಬಿಬಿಎಂಪಿ ವ್ಯಾಪ್ತಿಯ ಐದು ವಲಯಗಳಲ್ಲಿ ಕೊಳವೆ ಬಾವಿ, ಆರ್‍ಓ ಘಟಕ ಸ್ಥಾಪನೆ ಕಾಮಗಾರಿಯಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮ ಆರೋಪ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‍ಗೆ ಜಾರಿ ನಿರ್ದೇಶನಾಲಯವು(ಈ.ಡಿ) ನೋಟಿಸ್ ಜಾರಿ ಮಾಡಿದೆ.

ರಾಜರಾಜೇಶ್ವರಿನಗರ, ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳ ವ್ಯಾಪ್ತಿಯಲ್ಲಿ ಕೊಳವೆಬಾವಿ ಹಾಗೂ ಆರ್‍ಓ ಪ್ಲಾಂಟ್‍ನ ಯೋಜನೆಯಲ್ಲಿ ಸುಮಾರು 949 ಕೋಟಿ ರೂಪಾಯಿ ಖರ್ಚಾಗಿರುವ ಕುರಿತು ಈ.ಡಿ ಅಧಿಕಾರಿಗಳು ನೋಟಿಸ್ ನೀಡಿ, ಮಾಹಿತಿಯನ್ನು ಕೇಳಿದ್ದಾರೆ. 

ಬಿಬಿಎಂಪಿ 2019ರಲ್ಲಿ ಕೊಳವೆ ಬಾವಿ ಮತ್ತು ಆರ್.ಓ. ಪ್ಲಾಂಟ್ ಆರಂಭಕ್ಕಾಗಿ 949 ಕೋಟಿ 64 ರೂ. ಲಕ್ಷ ಹಣ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಕೊಳವೆ ಬಾವಿಗೆ 621 ಕೋಟಿ ರೂ., ಆರ್.ಓ. ಪ್ಲಾಂಟ್ ನಿರ್ಮಾಣಕ್ಕೆ 156 ಕೋಟಿ ರೂ. ಅನುದಾನವನ್ನು ಪ್ರತ್ಯೇಕವಾಗಿ ನೀಡಲಾಗಿತ್ತು. ಆದರೆ ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಶೇ.75ರಷ್ಟು ಸುಳ್ಳು ಅಂಕಿ-ಅಂಶಗಳನ್ನು ನೀಡಿರುವ ಕುರಿತು ಬೆಳಕಿಗೆ ಬಂದಿದೆ. 

ಈ ಹಗರಣದ ಕುರಿತಂತೆ ಎಸಿಬಿಯಲ್ಲಿ 2019ರಲ್ಲೇ ದೂರು ದಾಖಲಾಗಿತ್ತು. ದೂರನ್ನು ಪರಿಶೀಲಿನೆ ನಡೆಸಿ, ಈಡಿಗೆ ಪ್ರಕರಣವನ್ನು ವರ್ಗಾಹಿಸಲಾಗಿತ್ತು. ಪ್ರಕರಣವನ್ನು ಪರಿಶೀಲನೆ ನಡೆಸಿದ ಜಾರಿ ನಿರ್ದೇಶನಾಲಯವು ಮುಖ್ಯ ಆಯುಕ್ತರಿಗೆ ನ.25ರಂದು ನೋಟಿಸ್ ಜಾರಿಮಾಡಿದ್ದಾರೆ.

Similar News