ಸ್ಟಾರ್ಟ್‌ಅಪ್ ಫಂಡಿಂಗ್: 2022ರಲ್ಲಿ 10.8 ಬಿ.ಡಾ.ನೊಂದಿಗೆ ಬೆಂಗಳೂರು ನಗರಕ್ಕೆ ಅಗ್ರಸ್ಥಾನ

Update: 2023-01-10 19:10 GMT

 ಹೊಸದಿಲ್ಲಿ, ಜ.10: ಸ್ಟಾರ್ಟ್‌ಅಪ್ ಫಂಡಿಂಗ್ (ನವೋದ್ಯಮಗಳ ಬಂಡವಾಳ ಕ್ರೋಡೀಕರಣ)ನಲ್ಲಿ ಬೆಂಗಳೂರು ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. 2022ರಲ್ಲಿ ಬೆಂಗಳೂರಿನ ಸ್ಟಾರ್ಟ್‌ಅಪ್ ಕಂಪೆನಿಗಳು 10.8 ಶತಕೋಟಿ ಡಾ.(ಸುಮಾರು 88,280.6 ಕೋ.ರೂ.) ಗಳನ್ನು ಆಕರ್ಷಿಸಿವೆ. ಮುಂಬೈ (3.9 ಶತಕೋಟಿ ಡಾ.) ಮತ್ತು ಗುರುಗ್ರಾಮ (2.6 ಶತಕೋಟಿ ಡಾ.) ನಂತರದ ಸ್ಥಾನಗಳಲ್ಲಿವೆ. ಪ್ರಮುಖ ಜಾಗತಿಕ ಮಾರುಕಟ್ಟೆ ಬೇಹು ವೇದಿಕೆ Tracxn ಒದಗಿಸಿರುವ ಮಾಹಿತಿಯಂತೆ ದಿಲ್ಲಿ ಮತ್ತು ಚೆನ್ನೈ ನಗರಗಳಲ್ಲಿನ ಸ್ಟಾರ್ಟ್‌ಅಪ್‌ಗಳು ತಲಾ 1.2 ಶತಕೋಟಿ ಡಾ.ಗಳ ಬಂಡವಾಳವನ್ನು ಆಕರ್ಷಿಸಿದ್ದರೆ,ಪುಣೆ ಒಂದು ಶತಕೋಟಿ ಡಾ.ಗಳಿಗೆ ತೃಪ್ತಿಪಟ್ಟುಕೊಂಡಿದೆ.

2021ರಲ್ಲಿ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ಗಳು 20.8 ಶತಕೋಟಿ ಡಾ.ಗಳನ್ನು ಮತ್ತು ಮುಂಬೈ ಮೂಲದ ಕಂಪನಿಗಳು 5.2 ಶತಕೋಟಿ ಡಾ.ಗಳನ್ನು ಕ್ರೋಡೀಕರಿಸಿದ್ದವು. 2021ರಲ್ಲಿಯ 46ಕ್ಕೆ ಹೋಲಿಸಿದರೆ 2022ರಲ್ಲಿ ಯುನಿಕಾರ್ನ್‌ಗಳ ಸಂಖ್ಯೆ 22ರಷ್ಟಿತ್ತು. ಶೇರು ಮಾರುಕಟ್ಟೆಗಳಲ್ಲಿ ಲಿಸ್ಟ್ ಆಗದೆ ಕನಿಷ್ಠ ಒಂದು ಶತಕೋಟಿ ಡಾ.ವೌಲ್ಯ ಹೊಂದಿರುವ ಕಂಪೆನಿಗಳು ಯುನಿಕಾರ್ನ್‌ಗಳ ಸಾಲಿಗೆ ಸೇರುತ್ತವೆ.

ಭಾರತೀಯ ಸ್ಟಾರ್ಟ್‌ಅಪ್‌ಗಳು ಸಿರೀಸ್ ಎ ಫಂಡಿಂಗ್‌ನಿಂದ ಯುನಿಕಾರ್ನ್ ಹಂತವನ್ನು ತಲುಪಲು ಈಗ ಸರಾಸರಿ 5.1 ವರ್ಷಗಳು ಬೇಕಾಗುತ್ತವೆ.

 ಭಾರತದ ಸ್ಟಾರ್ಟ್‌ಅಪ್ ಕಂಪೆನಿಗಳಿಗೆ 2021ನೇ ಸಾಲಿನ ನಾಲ್ಕನೇ ತ್ರೈಮಾಸಿಕದಿಂದ ಫಂಡಿಂಗ್ ಕೊರತೆ ಆರಂಭವಾಗಿತ್ತು ಮತ್ತು ಆಗಿನಿಂದ ಅದು ಇಳಿಕೆಯ ಹಾದಿಯಲ್ಲಿಯೇ ಇದೆ. ಹೆಚ್ಚುತ್ತಿರುವ ಬಡ್ಡಿದರಗಳು ಮತ್ತು ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಎಲ್ಲ ಕ್ಷೇತ್ರಗಳಲ್ಲಿ ಹೂಡಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ ಎಂದು Tracxn ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

2022ರ ಎಪ್ರಿಲ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಹೊಸ ಯುನಿಕಾರ್ನ್‌ಗಳು ದಾಖಲಾಗಿರಲಿಲ್ಲ. 2021 ಮತ್ತು 2022ರಲ್ಲಿ ತಲಾ 11 ಟೆಕ್ ಕಂಪೆನಿಗಳ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ)ಗಳಿಗೆ ಚಾಲನೆ ನೀಡಲಾಗಿತ್ತು. ಲೆಟ್ಸ್‌ವೆಂಚರ್, ಏಂಜೆಲಿಸ್ಟ್ ಮತ್ತು ವೈ ಕಾಂಬಿನೇಟರ್ ಇವು 2022ರಲ್ಲಿ ಅತ್ಯಂತ ಕ್ರಿಯಾಶೀಲ ಹೂಡಿಕೆದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದವು.

ಶಿಕ್ಷಣ ಕೇತ್ರದ ತಂತ್ರಜ್ಞಾನ ಕಂಪೆನಿ ಬೈಜುಸ್‌ನ ಫಂಡಿಂಗ್ ಮೇಲೆ ಪ್ರತಿಕೂಲ ಪರಿಣಾಮದ ಹೊರತಾಗಿಯೂ ಅದು 2022ರಲ್ಲಿ ಅತ್ಯಂತ ಹೆಚ್ಚು ಬಂಡವಾಳವನ್ನು ಸಂಗ್ರಹಿಸಿರುವ ಕಂಪೆನಿಗಳಲ್ಲಿ ಅಗ್ರಸ್ಥಾನದಲ್ಲಿದೆ. ಅದು 2022ರಲ್ಲಿ ಹಾಲಿ ಹೂಡಿಕೆದಾರರಿಂದ 1.2 ಶತಕೋಟಿ ಡಾ.ಗೂ ಅಧಿಕ ಮೊತ್ತವನ್ನು ಸಂಗ್ರಹಿಸಿದ್ದು,ಇದು ಶಿಕ್ಷಣ ಕ್ಷೇತ್ರದಲ್ಲಿನ ತಂತ್ರಜ್ಞಾನ ಕಂಪೆನಿಗಳ ಒಟ್ಟು ಬಂಡವಾಳ ಕ್ರೋಡೀಕರಣದ ಶೇ.50ರಷ್ಟಿದೆ.

Similar News