ಬೆಂಗಳೂರು: ಮನೆಗೆ ನುಗ್ಗಿದ್ದ ದರೋಡೆಕೋರರನ್ನು ಕೋಣೆಯೊಳಗೆ ಕೂಡಿ ಹಾಕಿದ ಯುವಕ, ತಪ್ಪಿದ ಅನಾಹುತ

Update: 2023-01-13 18:17 GMT

ಬೆಂಗಳೂರು, ಜ.13: ಒಂಟಿ ಮನೆಗೆ ದರೋಡೆ ಮಾಡಲು ನುಗ್ಗಿದ್ದ ಗುಂಪನ್ನು ಮನೆಯ ಯುವಕನ ತೋರಿದ ಜಾಣ್ಮೆಯಿಂದ ಅನಾಹುತವೊಂದು ತಪ್ಪಿದ್ದು, ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ತಲಘಟ್ಟಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ಶಿಕಾರಿ ಪಾಳ್ಯದ ಶೇಕ್ ಕಲೀಂ(22)ಬಿಹಾರದ ಆಜಂನಗರದ ನಿಯಾಝ್(21) ಉತ್ತರಪ್ರದೇಶದ ಗೋಸ್‍ತಾಣದ ಇಮ್ರಾನ್ ಶೇಖ್ (24), ಲಕ್ನೋದ ಫೈಝಲ್(23), ರಾಜಸ್ಥಾನ ಮೂಲದ ಶಿಕಾರಿಪಾಳ್ಯದ ರಾಮ್ ಬಿಲಾಸ್(27), ಮದ್ಯಪ್ರದೇಶದ ರಾಣಾಪುರದ ಸುನಿಲ್ ಡಾಂಗಿ(20) ಹಾಗೂ ಒಡಿಶಾದ ಬಲೇಶ್ವರ್ ಜಿಲ್ಲೆಯ ರಜತ್ ಮಲ್ಲಿಕ್(21) ಬಂಧಿತ ದುಷ್ಕರ್ಮಿಗಳು ಎಂದು ಪೊಲೀಸರು ಹೇಳಿದ್ದಾರೆ.

ಅವಲಹಳ್ಳಿಯ ಕನಕಪುರ ರಸ್ತೆಯ ನಾರಾಯಣನಗರದ ಶಾಂತಿನಿವಾಸ ಲೇಔಟ್‍ನ ರಾಹುಲ್ ರಾಮಗೋಪಾಲ್ ಅವರ ಒಂಟಿ ಮನೆಯನ್ನೆ ಗುರಿಯಾಗಿಸಿಕೊಂಡು ದೋಚಲು ಹಲವು ದಿನಗಳ ಕಾಲ ಸಂಚು ರೂಪಿಸಿದ್ದ ಗುಂಪು ಮನೆಯಲ್ಲಿ ಮನೆ ಮಂದಿ ಇರುವುದು ಗೊತ್ತಿದ್ದು ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಮುಂದಾಗಿತ್ತು. 

ದರೋಡೆಕೋರರು ಮನೆಗೆ ನುಗ್ಗಿರುವ ಅರಿವಿಲ್ಲದೆ ಎಂದಿನಂತೆ 5 ಗಂಟೆಗೆ ಮನೆ ಮಂದಿ ನಿದ್ದೆಯಿಂದ ಎದ್ದಿದ್ದರು. ಈ ವೇಳೆ ತಂದೆಗೆ ಚಹಾ ಮಾಡಿಕೊಡಲು ಎದ್ದ ಮಗನ ಕಣ್ಣಿಗೆ ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳು ಕಂಡಿದೆ. ಏನಿದು ಮನೆಗೆ ಯಾರೋ ಬಂದಿದ್ದಾರೆ ಎಂದು ಮನೆಯ ಪರಿಸ್ಥಿತಿ ನೋಡಿ ಒಮ್ಮೆ ಗಾಬರಿ ಆಗಿದ್ದಾನೆ.

ಬಳಿಕ ಮನೆಯಲ್ಲಿರುವ ಮೂರು ಜನ ಯಾರು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದೆಂದು ನೋಡಲು ಅನುಮಾನದಿಂದ ಮೊಬೈಲ್‍ನಲ್ಲಿ ಸಿಸಿಟಿವಿ ಪರಿಶೀಲನೆ ಮಾಡಿದ್ದಾನೆ. ಸಿಸಿಟಿವಿ ನೋಡುತ್ತಿಂತೆ ಮನೆಯ ಮೂಲೆ ಮೂಲೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ದುಷ್ಕರ್ಮಿಗಳ ಗುಂಪು ನಿಂತಿತ್ತು. ಕೂಡಲೇ ಎಚ್ಚೆತ್ತ ರಾಹುಲ್  ದರೋಡೆಕೋರರು ಒಂದು ಕೋಣೆಗೆ ಹೋಗುವವರೆಗೂ ಕಾದು ಕುಳಿತು ಅವರು ಒಂದು ಕೋಣೆಗೆ ಹೋಗುತ್ತಿದ್ದಂತೆ ಕೊಠಡಿ ಬಾಗಿಲು ಬಂದ್ ಮಾಡಿ ಕೂಡಿ ಹಾಕಿದ್ದಾನೆ.

ಬಳಿಕ ಭೀತಿಯಲ್ಲಿ ಮತ್ತೊಂದು ಕೊಠಡಿಗೆ ತೆರಳಿ 112ಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ತಲಘಟ್ಟಪುರ ಪೊಲೀಸರು ಮನೆಯನ್ನು ಸುತ್ತುವರಿದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರು ವಿಚಾರಣೆಯಲ್ಲಿ ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಮತ್ತಿಬ್ಬರನ್ನು ಬಂಧಿಸಿ ಒಟ್ಟು 7 ಮಂದಿಯ ವಿಚಾರಣೆ ಮುಂದುವರೆಸಲಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ. 

Similar News