ಬೆಂಗಳೂರು: ಎಫ್‍ಐಆರ್ ದಾಖಲಿಸದೆ ಪೊಲೀಸ್ ಠಾಣೆಯಲ್ಲಿ ಇರಿಸಿದ್ದ ವ್ಯಕ್ತಿಯ ರಕ್ಷಣೆ

Update: 2023-01-20 17:24 GMT

ಬೆಂಗಳೂರು, ಜ.20: ದೂರು, ಎಫ್‍ಐಆರ್ ದಾಖಲು ಮಾಡದೆ, ಕಾನೂನು ಬಾಹಿರವಾಗಿ ಠಾಣೆಯಲ್ಲಿ ಇರಿಸಿಕೊಂಡಿದ್ದ ಆರೋಪ ಬೆನ್ನಲ್ಲೇ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ದಾಳಿ ನಡೆಸಿ ಓರ್ವನನ್ನು ರಕ್ಷಣೆ ಮಾಡಿದೆ.

ಆಯೋಗದ ಡಿವೈಎಸ್ಪಿ ಕೇಶವ ನೇತೃತ್ವದಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ ಮೇಲೆ ಶುಕ್ರವಾರ ದಾಳಿ ನಡೆಸಲಾಗಿದ್ದು, ಶ್ರೀಧರ್ ಎಂಬುವರನ್ನು ರಕ್ಷಣೆ ಮಾಡಲಾಗಿದೆ.

ಗುರುವಾರ ಬೆಳಗ್ಗೆಯಿಂದ ಇನ್ಸ್‍ಪೆಕ್ಟರ್ ಹೇಮಂತ್ ಕುಮಾರ್ ದೂರು ಮತ್ತು ಎಫ್‍ಐಆರ್ ಇಲ್ಲದೆ ಶ್ರೀಧರ್ ಅವರನ್ನು ಅಕ್ರಮವಾಗಿ ಬಂಧಿಸಿರುವ ಕುರಿತು ಸಂತ್ರಸ್ತರು ದೂರು ನೀಡಿದ್ದರು. ಇದರ ಅನ್ವಯ ಆಯೋಗ ಅಧ್ಯಕ್ಷರ ಅನ್ವಯ ಕಾರ್ಯಾಚರಣೆ ನಡೆಸಿದ ತಂಡ ದಾಳಿ ನಡೆಸಿ, ರಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಮಾನವ ಹಕ್ಕು ಕಾರ್ಯಕರ್ತ ಟಿ. ನರಸಿಂಹ ಮೂರ್ತಿ ಇದ್ದರು.

ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯವಾದಿ ಉಮಾಪತಿ, ಕಾನೂನು ಬಾಹಿರವಾಗಿ ಇರಿಸಿಕೊಂಡಿದ್ದ ಪ್ರಕರಣವನ್ನು ಭೇದಿಸಲಾಗಿದೆ. ಆಯೋಗವು ತ್ವರಿತವಾಗಿ ಕಾರ್ಯಾಚರಣೆ ಕೈಗೊಂಡು ನ್ಯಾಯ ಒದಗಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Similar News