ಇಸ್ರೇಲ್: ಉನ್ನತ ಸಚಿವರ ರಾಜೀನಾಮೆ ಪಡೆದ ಪ್ರಧಾನಿ

Update: 2023-01-22 17:28 GMT

ಜೆರುಸಲೇಂ, ಜ.22: ಇಸ್ರೇಲ್ ನ ನೂತನ ಸಚಿವ ಅರ್ಯೇಹ್ ದೇರಿ(Aryeh Deri) ಅವರ ನೇಮಕ ಅಸಿಂಧು ಎಂದು ಅಲ್ಲಿನ ಸುಪ್ರೀಂಕೋರ್ಟ್  ಸೂಚಿಸಿದ ಹಿನ್ನೆಲೆಯಲ್ಲಿ ಅವರ ರಾಜೀನಾಮೆಯನ್ನು ಪಡೆಯಲಾಗಿದೆ ಎಂದು  ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಅವರ ಕಚೇರಿಯ ಹೇಳಿಕೆ ತಿಳಿಸಿದೆ.

`ಅತ್ಯಂತ ಭಾರವಾದ ಹೃದಯದೊಂದಿಗೆ, ಅತ್ಯಂತ ದುಃಖದಿಂದ ಮತ್ತು ಅತ್ಯಂತ ಕಷ್ಟದೊಂದಿಗೆ ನಿಮ್ಮನ್ನು ಸಚಿವ ಸಂಪುಟದ ಸಚಿವ ಸ್ಥಾನದಿಂದ ವರ್ಗಾಯಿಸಲಾಗಿದೆ' ಎಂದು ಸಚಿವ ಸಂಪುಟ ಸಭೆಯಲ್ಲಿ ಅರ್ಯೇಹ್ ದೇರಿಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದರು. ಈ ವಿದ್ಯಮಾನ ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದ ನೆತನ್ಯಾಹು ಸರಕಾರದ ಸ್ಥಿರತೆಗೆ ಧಕ್ಕೆ ತರಲಿದೆ ಎಂದು ವಿಶ್ಲೇಷಿಸಲಾಗಿದೆ.

 ಸಂಪ್ರದಾಯವಾದಿ  ಯೆಹೂದಿ ಪಕ್ಷ `ಶಾಸ್'ನ ಮುಖಂಡರಾಗಿರುವ ದೇರಿ ಕಳೆದ ತಿಂಗಳಷ್ಟೇ ಆರೋಗ್ಯ ಮತ್ತು  ಆಂತರಿಕ ಇಲಾಖೆಯ ಸಚಿವರಾಗಿ ನೇಮಕಗೊಂಡಿದ್ದರು. ನವೆಂಬರ್ 1ರಂದು ನಡೆದ ಸಾರ್ವತ್ರಿಕ ಚುನಾವಣೆಯ ಬಳಿಕ ಅಧಿಕಾರಕ್ಕೆ ಬಂದಿದ್ದ ನೆತನ್ಯಾಹು ನೇತೃತ್ವದ ಮೈತ್ರಿ ಸರಕಾರ ರಚನೆಯ ಸಂದರ್ಭ ಏರ್ಪಟ್ಟ ಒಪ್ಪಂದದ ಪ್ರಕಾರ ದೇರಿಗೆ ಪ್ರಮುಖ ಹುದ್ದೆ ನೀಡಲಾಗಿತ್ತು.

ಆದರೆ, ದೇರಿ ವಿರುದ್ಧ ಕಳೆದ ವರ್ಷ ದಾಖಲಾಗಿದ್ದ ತೆರಿಗೆ ವಂಚನೆ ಪ್ರಕರಣದಲ್ಲಿ ಅವರು ದೋಷಿ ಎಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ, ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿತ್ತು.‌

Similar News