ದ್ವೇಷ ಭಾಷಣ ರಾಜಕೀಯ ಅಜೆಂಡಾ: ತೀಸ್ತಾ ಸೆಟಲ್ವಾಡ್

Update: 2023-01-29 17:51 GMT

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಪ್ರಚಾರದ ವೇಳೆ ದ್ವೇಷ ಭಾಷಣ ಮಾಡುವುದು ಒಂದು ಅಜೆಂಡಾವಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹೇಳಿದ್ದಾರೆ.

ರವಿವಾರ ಚಾಮರಾಜಪೇಟೆಯ ಕಲಾವಿದರ ಸಂಘದ ಸಭಾಂಗಣದಲ್ಲಿ ‘ಗೌರಿ ಸ್ಮಾರಕ ಟ್ರಸ್ಟ್’ ಆಯೋಜಿಸಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ 61ನೆ ಜನ್ಮ ದಿನದ ಅಂಗವಾಗಿ ‘ಮೌನವಾದ ದನಿಗಳು, ಹೊಸ ಭಾರತದಲ್ಲಿ ಪತ್ರಿಕೋದ್ಯಮಕ್ಕಿರುವ ಬೆದರಿಕೆಗಳು’ ಕುರಿತ ವಿಚಾರ ಸಂಕಿರಣ ಹಾಗೂ ಗೌರಿ ಸಿನೆಮಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ರೂರ ದ್ವೇಷ ಭಾಷಣಗಳಿಗೆ ಹಲವಾರು ಉದಾಹರಣೆಗಳಿವೆ. ದೇಶದ ವಾತಾವರಣವನ್ನು ಹಾಳುಮಾಡುವ ಎಲ್ಲ ವಿಭಜಕ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಈ ಹೊತ್ತಿನ ಅಗತ್ಯ. ಆದರೆ, ಚುನಾವಣೆ ಸಂದರ್ಭದಲ್ಲಿ ಆರೋಗ್ಯಕರ ಚರ್ಚೆ, ಅಭಿವೃದ್ಧಿ ಕುರಿತು ಮಾತನಾಡುವುದೇ ಇಲ್ಲ. ಬದಲಾಗಿ, ದ್ವೇಷ ಭಾಷಣಗಳಿಂದ ಚುನಾವಣೆ ಎದುರಿಸುತ್ತಿರುವ ಆತಂಕ ತಂದಿದೆ ಎಂದು ಅವರು ನುಡಿದರು.

‘ಸಂವಿಧಾನವನ್ನು ಬದಲಾಯಿಸಲು, ಸಂವಿಧಾನವನ್ನು ಮುಗಿಸಲು ಬಹಳಷ್ಟು ಸಂಚು ನಡೆಯುತ್ತಿದೆ. ಆದರೆ, ಎಲ್ಲರಿಗೂ ಸ್ವಾಭಿಮಾನದ, ಗೌರವವದ ಬದುಕಿನ ಅವಕಾಶವನ್ನು ನೀಡಿದ ಸಂವಿಧಾನವನ್ನು ಬದಲಾಯಿಸಲು ಬಿಡಬಾರದು. ಈ ನಿಟ್ಟಿನಲ್ಲಿ ನಾವು ತಳ ಮಟ್ಟದಿಂದಲೇ ಜಾಗೃತಿ ಮೂಡಿಸಿಕೊಂಡು ಬರಬೇಕು ಎಂದು ಅವರು ಕರೆ ನೀಡಿದರು.

ಹಿರಿಯ ಪತ್ರಕರ್ತ ಸಸಿ ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವೆಂದು ಸ್ಥಾನ ಪಡೆದ ಮಾಧ್ಯಮಕ್ಕೆ ಸಮಾಜವನ್ನು ತಿದ್ದುವ ಮಹತ್ವದ ಜವಾಬ್ದಾರಿ ಇದೆ. ಸಮಾಜದ ಮಹತ್ವದ ಅಂಗವಾದ ಪತ್ರಿಕೋದ್ಯಮ ತನ್ನ ವೃತ್ತಿಯ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ನುಡಿದರು.

ಖಡ್ಗಕ್ಕಿಂತ ಲೇಖನಿ ಹರಿತವಾದುದು. ಪತ್ರಿಕಾ ವೃತ್ತಿಗೆ ಅಧ್ಯಯನ ಶೀಲತೆ ಅಗತ್ಯವಿದೆ. ಹೀಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಚಲಾವಣೆಯ ಸಂದರ್ಭದಲ್ಲಿ ನಮ್ಮ ಅಂತರಂಗದ ಸ್ವಾತಂತ್ರ್ಯವನ್ನು ಒತ್ತೆ ಇಡಬಾರದು ಎಂದ ಅವರು, ಪ್ರಧಾನಿ ಮೋದಿ ಅವರ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತ ನಿಷೇಧಿಸಿರುವುದನ್ನು ಇದು ಪತ್ರಿಕಾ ಸ್ವಾತಂತ್ರ್ಯದ ವಿಷಯವಾಗಿದೆ. ಇದು ಅಘೋಷಿತ ತುರ್ತು ಪರಿಸ್ಥಿತಿಯ ಭಾಗವೆಂದೇ ಹೇಳಬಹುದಾಗಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಸಿನೆಮಾ ನಿರ್ದೇಶಕಿ ಕವಿತಾ ಲಂಕೇಶ್, ಹಿರಿಯ ಪತ್ರಕರ್ತ ಗುರುಮೂರ್ತಿ ಸೇರಿದಂತೆ ಪ್ರಮುಖರಿದ್ದರು.

Similar News