ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಪುರುಷರಿಗಿಂತ ಮಹಿಳೆಯರು ಹೆಚ್ಚು ದಾಖಲು: ಎಐಎಸ್ಎಚ್ಇ ವರದಿ

Update: 2023-02-01 15:36 GMT

ಹೊಸದಿಲ್ಲಿ, ಫೆ. 1: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಪುರುಷರಿಗಿಂತ ಹೆಚ್ಚು ಮುಸ್ಲಿಂ ಮಹಿಳೆಯರು ದಾಖಲಾಗಿರುವುದು ಕಂಡು ಬಂದಿದೆ ಎಂದು ಉನ್ನತ ಶಿಕ್ಷಣದ ಕುರಿತ ಅಖಿಲ ಭಾರತ ಸಮೀಕ್ಷೆ (ಎಐಎಸ್ಎಚ್ಇ)-2020-21 ಹೇಳಿದೆ. ನಿರ್ದಿಷ್ಟವಾಗಿ, ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರತಿ 1,000 ಮುಸ್ಲಿಂ ವಿದ್ಯಾರ್ಥಿಗಳಲ್ಲಿ 503 ಮಹಿಳೆಯರು. ಇಲ್ಲಿ ಉನ್ನತ ಶಿಕ್ಷಣವನ್ನು ಪದವಿಪೂರ್ವ ಕೋರ್ಸ್, ಇತರ ಪದವಿ ಕೋರ್ಸ್, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳು ಎಂದು ವ್ಯಾಖ್ಯಾನಿಸಬಹುದು. 

ತರಗತಿಗಳಲ್ಲಿ ಹಿಜಾಬ್ ನಿಷೇಧಿಸಲು ಕರ್ನಾಟಕ ಸರಕಾರ ನಿರ್ಧರಿಸಿದ ಕುರಿತು ದೇಶದಲ್ಲಿ ತೀವ್ರ ವಿರೋಧ ಕಂಡುಬಂದ ಹಾಗೂ ಅನೇಕ ಯುವ ಮುಸ್ಲಿಂ ಯುವತಿಯರು ಶಿಕ್ಷಣ ಸಂಸ್ಥೆಯಿಂದ ಹೊರ ಹೋಗುವ ಬಲವಂತಕ್ಕೆ ಒಳಗಾದ ತಿಂಗಳುಗಳ ಬಳಿಕ ಈ ಅಂಕಿ-ಅಂಶ ಬಹಿರಂಗಗೊಂಡಿದೆ. ಅಂತಿಮವಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿತ್ತು. ಈ ಆದೇಶದ ವಿರುದ್ಧ ಸಲ್ಲಿಸಲಾದ ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ನ್ಯಾಯಪೀಠದ ನ್ಯಾಯಾಧೀಶರು ಭಿನ್ನ ತೀರ್ಪು ನೀಡಿದ್ದರು. 

ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ಸಂಖ್ಯೆ ಒಟ್ಟು ಕುಸಿತದ ನಡುವೆ ಎಐಎಸ್ಎಚ್ಇ ವರದಿ ಬಿಡುಗಡೆಯಾಗಿದೆ. 2020-21ರಲ್ಲಿ ಉನ್ನತ ಶಿಕ್ಷಣದ ಒಟ್ಟು ವಿದ್ಯಾರ್ಥಿಗಳಲ್ಲಿ ಸುಮಾರು ಶೇ. 4.6 ಮುಸ್ಲಿಮರು. ಇದು ಹಿಂದಿನ ವರ್ಷ ಶೇ. 5.5 ಇತ್ತು. ರಾಜ್ಯವಾರು ಅಂಕಿ-ಅಂಶಗಳನ್ನು ಗಮನಿಸಿದರೆ, ಉತ್ತರಪ್ರದೇಶದಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾದ ಮುಸ್ಲಿಮರಲ್ಲಿ ಶೇ. 54 ಮಹಿಳೆಯರು ಎಂದು ಕಂಡು ಕೊಳ್ಳಬಹುದು. ಇದು ಉನ್ನತ ಶಿಕ್ಷಣದಲ್ಲಿ ಮುಸ್ಲಿಂ ಪುರುಷರಿಗಿಂತ ಮುಸ್ಲಿಂ ಮಹಿಳೆಯರು ಅತಿ ಹೆಚ್ಚು ದಾಖಲಾದ 6 ರಾಜ್ಯಗಳಲ್ಲಿ ಉತ್ತರಪ್ರದೇಶ ಮೊದಲ ಸ್ಥಾನ ಪಡೆದುಕೊಳ್ಳುವಂತೆ ಮಾಡಿದೆ. 

ಇದೇ ರೀತಿ ಅಂಕಿ-ಅಂಶಗಳು ಕಂಡು ಬಂದಿರುವ ಇತರ ರಾಜ್ಯಗಳೆಂದರೆ ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ರಾಜಸ್ತಾನ. ಈ ಎಲ್ಲ ರಾಜ್ಯಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಶೇ. 43 ಹಾಗೂ ಶೇ. 49.5 ಇದೆ. ಉನ್ನತ ಶಿಕ್ಷಣದಲ್ಲಿ ಪುರುಷರಿಗಿಂತ ಹೆಚ್ಚು ಮುಸ್ಲಿಂ ಮಹಿಳೆಯರು ದಾಖಲಾಗಿರುವುದಕ್ಕೆ ಒಂದು ಕಾರಣವೆಂದರೆ, ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ಪುರುಷರ ದಾಖಲಾತಿಯಲ್ಲಿ ಹೆಚ್ಚು ಕುಸಿತವಾಗಿರುವುದು ಹಾಗೂ ಮಹಿಳೆಯರ ದಾಖಲಾತಿಯಲ್ಲಿ ಕಡಿಮೆ ಕುಸಿತವಾಗಿರುವುದು. 2020-21ರ ಅವಧಿಯಲ್ಲಿ ಮುಸ್ಲಿಂ ಪುರುಷರ ದಾಖಲಾತಿ ಶೇ. 8.8 ಇಳಿದಿತ್ತು. ಆದರೆ, ಮುಸ್ಲಿಂ ಮಹಿಳೆಯರ ದಾಖಲಾತಿ ಶೇ. 8.3ಕ್ಕೆ ಇಳಿಕೆಯಾಗಿತ್ತು. 

Similar News