ಉನ್ನತ ನ್ಯಾಯಾಂಗಕ್ಕೆ ನೇಮಕ ಹಗ್ಗಜಗ್ಗಾಟ: ಕೇಂದ್ರಕ್ಕೆ ನ್ಯಾಯಾಂಗ ಕ್ರಮದ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್

Update: 2023-02-04 15:00 GMT

ಹೊಸದಿಲ್ಲಿ, ಫೆ.4: ಉನ್ನತ ನ್ಯಾಯಾಂಗಕ್ಕೆ ನೇಮಕಗಳಿಗಾಗಿ ಕೊಲಿಜಿಯಂ (collegium) ಮಾಡಿರುವ ಶಿಫಾರಸುಗಳನ್ನು ವಿಳಂಬಿಸುತ್ತಿರುವುದಕ್ಕಾಗಿ ಶುಕ್ರವಾರ ಕೇಂದ್ರವನ್ನು ತೀವ್ರ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು (Supreme Court), ಅದರ ವಿರುದ್ಧ ಅತ್ಯಂತ ಕಠಿಣ ಆಡಳಿತಾತ್ಮಕ ಮತ್ತು ನ್ಯಾಯಾಂಗ ಕ್ರಮವನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿತು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ಐವರು ಹೈಕೋರ್ಟ್ (High Court) ನ್ಯಾಯಾಧೀಶರ ಪದೋನ್ನತಿಗಾಗಿ ಕೊಲಿಜಿಯಂ ಡಿಸೆಂಬರ್ನಲ್ಲಿ ಮಾಡಿರುವ ಶಿಫಾರಸುಗಳನ್ನು ಶೀಘ್ರವೇ ಅನುಮೋದಿಸುವುದಾಗಿ ಭರವಸೆ ನೀಡಿತು. ನ್ಯಾಯಾಧೀಶರ ನೇಮಕಾತಿ ಆದೇಶಗಳನ್ನು ರವಿವಾರದೊಳಗೆ ಹೊರಡಿಸಬಹುದು ಎಂದೂ ಅದು ತಿಳಿಸಿತು.

ನ್ಯಾಯಾಧೀಶರ ನೇಮಕಾತಿ ವಿಷಯವು ಸರ್ವೋಚ್ಚ ನ್ಯಾಯಾಲಯ ಮತ್ತು ಕೇಂದ್ರ ಸರಕಾರದ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಹಲವಾರು ನೇಮಕಾತಿ ಶಿಫಾರಸುಗಳನ್ನು ಕೇಂದ್ರವು ವಿಳಂಬಿಸಿದ್ದರೆ,ಶಿಫಾರಸು ಮಾಡಲಾಗಿದ್ದ ಹೆಸರುಗಳನ್ನು ತಳ್ಳಿ ಹಾಕುವುದಕ್ಕೆ ಅದು ಉಲ್ಲೇಖಿಸಿದ್ದ ಕಾರಣಗಳನ್ನು ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ಪ್ರಕಟಿಸಿದೆ.

ಶುಕ್ರವಾರ ಬಾಕಿಯುಳಿದಿರುವ ಶಿಫಾರಸುಗಳ ಸ್ಥಿತಿಗತಿ ಕುರಿತು ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆಗುತ್ತರಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು,ಈ ನ್ಯಾಯಾಧೀಶರ ನೇಮಕಾತಿಗಳಿಗೆ ಆದೇಶಗಳನ್ನು ಗರಿಷ್ಠ ಐದು ದಿನಗಳೊಳಗೆ, ಅತ್ಯಂತ ಶೀಘ್ರ ಹೊರಡಿಸಲಾಗುವುದು ಎಂದು ತಿಳಿಸಿದರು.

ವಿವಿಧ ಹೈಕೋರ್ಟ್ಗಳ ನ್ಯಾಯಾಧೀಶರಾದ ನ್ಯಾ.ಪಂಕಜ ಮಿತ್ತಲ್,ನ್ಯಾ.ಸಂಜಯ ಕರೋಲ್,ನ್ಯಾ.ಪಿ.ವಿ.ಸಂಜಯಕುಮಾರ, ನ್ಯಾ.ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ನ್ಯಾ.ಮನೋಜ ಮಿಶ್ರಾ ಅವರ ಹೆಸರುಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂ 2022,ಡಿ.13ರಂದು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈ ಪೈಕಿ ರಾಜಸ್ಥಾನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿರುವ ನ್ಯಾ.ಪಂಕಜ ಮಿತ್ತಲ್ ಅತ್ಯಂತ ಹಿರಿಯರಾಗಿದ್ದಾರೆ. ಜ.31ರಂದು ಇನ್ನೂ ಎರಡು ಹೆಸರುಗಳನ್ನು ಶಿಫಾರಸು ಮಾಡಿದ್ದ ಕೊಲಿಜಿಯಂ,ಹಿಂದೆ ಶಿಫಾರಸು ಮಾಡಿದ್ದ ಐದು ಹೆಸರುಗಳು ಆದ್ಯತೆಯದ್ದಾಗಿವೆ ಎಂದು ತಿಳಿಸಿತ್ತು.

ಸುಪ್ರೀಂ ಕೋರ್ಟ್ ಕೊಲಿಜಿಯಂ ಮರುಶಿಫಾರಸು ಮಾಡಿದ್ದ 11 ಹೆಸರುಗಳನ್ನು ಅನುಮೋದಿಸದಿರುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಬೆಂಗಳೂರು ವಕೀಲರ ಸಂಘವು 2021ರಲ್ಲಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎ.ಎಸ್.ಓಕಾ ಅವರ ಪೀಠವು ಕೈಗೆತ್ತಿಕೊಂಡಿತ್ತು.

‘ಐದು ಹೆಸರುಗಳನ್ನು ಡಿಸೆಂಬರ್ನಲ್ಲಿ ಪ್ರಸ್ತಾವಿಸಲಾಗಿತ್ತು ಮತ್ತು ನಾವು ಈಗ ಫೆಬ್ರವರಿಯಲ್ಲಿದ್ದೇವೆ ’ಎಂದು ನ್ಯಾ.ಕೌಲ್ ಅಟಾರ್ನಿ ಜನರಲ್ಗೆ ತಿಳಿಸಿದರು.

ಅವುಗಳಿಗೆ ಅನುಮೋದನೆ ದೊರೆಯಲಿದೆ ಎಂದು ವೆಂಕಟರಮಣಿ ತಿಳಿಸಿದಾಗ,ಅದನ್ನು ನಾವು ದಾಖಲಿಸಿಕೊಳ್ಳಬಹುದೇ ಎಂದು ನ್ಯಾ.ಕೌಲ್ ಪ್ರಶ್ನಿಸಿದರು. ಉತ್ತರಿಸಲು ಕೆಲ ಕಾಲ ಹಿಂದೆಮುಂದೆ ನೋಡಿದ ವೆಂಕಟರಮಣಿ,ನೇಮಕಾತಿ ಆದೇಶಗಳನ್ನು ಫೆ.5ರೊಳಗೆ ಹೊರಡಿಸಲಾಗುವುದು ಎಂದು ತಿಳಿಸಿದರು. ಆದರೂ ಐದು ದಿನಗಳಲ್ಲಿ ನೇಮಕಾತಿ ಆದೇಶಗಳು ಹೊರಬೀಳುತ್ತವೆ ಎಂಬ ಷರತ್ತನ್ನು ದಾಖಲಿಸಿಕೊಳ್ಳದಂತೆ ಅವರು ಸರ್ವೋಚ್ಚ ನ್ಯಾಯಾಲಯವನ್ನು ಕೋರಿಕೊಂಡಾಗ,ಅಟಾರ್ನಿ ಜನರಲ್ ಕೇವಲ ಮೂರು ದಿನಗಳ ಕಾಲಾವಕಾಶ ಕೋರಿದ್ದರೂ ಐದು ದಿನಗಳ ಗಡುವನ್ನು ಮಂಜೂರು ಮಾಡಲಾಗಿದೆ ಎಂದು ನ್ಯಾ.ಕೌಲ್ ಬೆಟ್ಟು ಮಾಡಿದರು.

ನ್ಯಾಯಾಧೀಶರ ವರ್ಗಾವಣೆ ಆದೇಶಗಳೂ ಬಾಕಿಯಿವೆ ಎಂದು ಹೇಳಿದ ನ್ಯಾ.ಕೌಲ್,‘ಇದು ನಿಜಕ್ಕೂ ನಮಗೆ ತೊಂದರೆಯನ್ನುಂಟು ಮಾಡುತ್ತಿದೆ. ನಾವು ಅಹಿತಕರ ನಿಲುವನ್ನು ತಳೆಯುವಂತೆ ಮಾಡಬೇಡಿ’ ಎಂದರು.

‘ವರ್ಗಾವಣೆ ಪ್ರಸ್ತಾವಗಳಲ್ಲಿ ಯಾವುದೇ ವಿಳಂಬವು ನ್ಯಾಯಾಂಗ ಮತ್ತು ಆಡಳಿತಾತ್ಮ ಕ್ರಮಗಳಿಗೆ ಕಾರಣವಾಗಬಹುದು ಮತ್ತು ಇವು ಹಿತಕರವಾಗಿರದಿರಬಹುದು ಎಂದು ನಾವು ಅಟಾರ್ನಿ ಜನರಲ್ಗೆ ಎಚ್ಚರಿಕೆಯನ್ನು ನೀಡಿದ್ದೇವೆ ’ಎಂದು ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕಾತಿಗಾಗಿ ಹೆಸರೊಂದನ್ನು ಕೊಲಿಜಿಯಂ ಶಿಫಾರಸು ಮಾಡಿತ್ತು ಎಂದು ನೆನಪಿಸಿದ ಪೀಠವು,19 ದಿನಗಳಲ್ಲಿ ಅವರು ನಿವೃತ್ತಿ ಪಡೆಯಲಿದ್ದಾರೆ. ಅವರು ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಳ್ಳದೆ ನಿವೃತ್ತರಾಗಬೇಕು ಎಂದು ನೀವು ಬಯಸಿದ್ದೀರಾ ಎಂದು ಪ್ರಶ್ನಿಸಿದಾಗ,ವೆಂಕಟರಮಣಿ ತನಗೆ ಅದರ ಅರಿವಿದೆ ಮತ್ತು ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಉತ್ತರಿಸಿದರು.

ಅರ್ಜಿದಾರರೋರ್ವರ ಪರ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ ಅವರು ಕೊಲಿಜಿಯಂ ಮರುಶಿಫಾರಸು ಮಾಡಿರುವ ಹೆಸರುಗಳನ್ನೂ ಸರಕಾರವು ಅನುಮೋದಿಸಿಲ್ಲ ಎಂದು ಬೆಟ್ಟು ಮಾಡಿದರು. ಕಾನೂನಿನಂತೆ ಕೊಲಿಜಿಯಂ ನ್ಯಾಯಾಂಗ ನೇಮಕಾತಿಗಾಗಿ ಹೆಸರುಗಳನ್ನು ಮರುಶಿಫಾರಸು ಮಾಡಿದಾಗ ಅದನ್ನು ಒಪ್ಪಿಕೊಳ್ಳವುದನ್ನು ಬಿಟ್ಟು ಸರಕಾರಕ್ಕೆ ಬೇರೆ ಆಯ್ಕೆಯಿಲ್ಲ ಎಂದರು.

ಮುಂದಿನ ವಿಚಾರಣೆಯನ್ನು ಫೆ.13ಕ್ಕೆ ನಿಗದಿಗೊಳಿಸಿದ ಪೀಠವು,ಅಷ್ಟರೊಳಗೆ ಐವರು ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆ ಹಾಗೂ ಮುಖ್ಯ ನ್ಯಾಯಾಧೀಶರ ನೇಮಕಾತಿ ಆದೇಶಗಳು ಹೊರಬೀಳಬೇಕು ಎಂದು ಅಟಾರ್ನಿ ಜನರಲ್ಗೆ ತಾಕೀತು ಮಾಡಿತು. 

ನಮಗೆ ಅಭ್ಯಾಸವಾಗಿದೆ

ನ್ಯಾಯಾಲಯದ ಹೊರಗೆ ನ್ಯಾಯಾಂಗದ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಇನ್ನೋರ್ವ ಅರ್ಜಿದಾರರ ಪರ ವಕೀಲರು ಹೇಳಿದಾಗ,‘ಇವೆಲ್ಲ ನಮಗೆ ಅಭ್ಯಾಸವಾಗಿದೆ,ಇದನ್ನು ನಿಭಾಯಿಸುವುದೂ ನಮಗೆ ಅಭ್ಯಾಸವಾಗಿದೆ. ನೀವು ಭರವಸೆಯಿಡಿ. ಅದು ಒಂದು ಹಂತದ ನಂತರ ನಮಗೆ ಬಾಧಿಸುವುದಿಲ್ಲ. ಯಾವುದು ಸೂಕ್ತ ಮತ್ತು ಯಾವುದು ಸೂಕ್ತವಲ್ಲ ಎನ್ನುವುದನ್ನು ನೋಡುವುದು ಬೇರೆ ಪ್ರಾಧಿಕಾರಗಳ ಕೆಲಸವಾಗಿದೆ ಎಂದು ಪೀಠವು ಪ್ರತಿಕ್ರಿಯಿಸಿತು.

Similar News