ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಗೆ ಚಾಲನೆ

Update: 2023-02-05 10:13 GMT

ಉಡುಪಿ, ಫೆ.5: ಉಡುಪಿ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ವಿ ಓನ್ ಅಕ್ವ ಮತ್ತು ಮಣಿಪಾಲ ಮಾಹೆಯ ಸಹಯೋಗದೊಂದಿಗೆ ಉಡುಪಿ ಅಜ್ಜರಕಾಡು ವಿನಲ್ಲಿರುವ ಈಜುಕೊಳದಲ್ಲಿ ರವಿವಾರ ಏರ್ಪಡಿಸಲಾದ ಉಡುಪಿ ಜಿಲ್ಲಾ ಮಟ್ಟದ ಎರಡನೇ ಈಜು ಸ್ಪರ್ಧೆಗೆ ಮಾಹೆ ಪ್ರೊಚಾನ್ಸೆಲರ್ ಡಾ.ಎಚ್.ಎಸ್. ಬಲ್ಲಾಳ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಯುವಜನತೆ ಕ್ರೀಡೆಯತ್ತ ಹೆಚ್ಚು ಆಕರ್ಷಕ ಆಗುತ್ತಿದ್ದಾರೆ. ಈಜು ಇತರ ಕ್ರೀಡೆಗಳಿಗಿಂತ ವಿಭಿನ್ನವಾಗಿದೆ. ಇದು ನಮ್ಮಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಅಜ್ಜರಕಾಡಿನಲ್ಲಿ ಎಲ್ಲ ಕ್ರೀಡೆಗೆ ಸಂಬಂಧಿಸಿ ಎಲ್ಲ ರೀತಿಯ ವ್ಯವಸ್ಥೆಯನ್ನು ಸರಕಾರ ಒದಗಿಸಿದೆ. ಆದುದರಿಂದ ಯುವಜನತೆ ಹಾಗೂ ಕ್ರೀಡಾಪಟುಗಳು ಇದನ್ನು ಸದುಪಯೋಗಪಡಿಸಿಕೊಂಡು ಕ್ರೀಡಾ ಕ್ಷೇತ್ರ ದಲ್ಲಿ ಸಾಧನೆ ಮಾಡಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ಮಾಹೆ ನೀಡಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮಾತನಾಡಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಉಡುಪಿ ಜಿಲ್ಲೆಯಲ್ಲಿ ಒದಗಿಸಲಾಗಿದೆ. ಕ್ರೀಡಾ ಪಟುಗಳು ಇದರ ಪ್ರಯೋಜನ ಪಡೆದು ಇನ್ನಷ್ಟು ಸಾಧನೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಧನೆ ಮಾಡಿದ ಈಜುಪಟುಗಳಾದ ಅರ್ಚನಾ, ಅನನ್ಯ ಹಾಗೂ ರಾಜಶೇಖರ್ ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಉಡುಪಿ ಸ್ವಿಮ್ಮಿಂಗ್ ಕ್ಲಬ್ ಅಧ್ಯಕ್ಷ ರವೀಂದ್ರ ಎಸ್. ವಹಿಸಿದ್ದರು. ಕಾರ್ಯದರ್ಶಿ ಕೃಪಾ ಪ್ರಸಿದ್ಧ್, ಕೋಶಾಧಿಕಾರಿ ಸುಚಿತಾ ಶೆಟ್ಟಿ ಉಪಸ್ಥಿತರಿದ್ದರು. ಶಿವಕುಮಾರ್ ವಂದಿಸಿದರು. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ಜಿಲ್ಲೆಯ ಸುಮಾರು 150 ಈಜುಪಟುಗಳು ಪಾಲ್ಗೊಂಡಿದ್ದರು.

Similar News