ಉಡುಪಿ ನಗರಸಭೆ: ಆಸ್ತಿಗಳ ಡಿಜಿಟಲೀಕರಣಕ್ಕೆ ನಾಗರಿಕರ ನಿರಾಸಕ್ತಿ

68ಸಾವಿರ ಆಸ್ತಿಗಳ ಪೈಕಿ 35000 ಇ-ಖಾತೆ: ದಾಖಲೆ ಸಲ್ಲಿಕೆಗೆ ಹಿಂದೇಟು

Update: 2023-02-05 12:53 GMT

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸರಕಾರ ಮುಂದಾಗಿರುವ  ಎಲ್ಲ ರೀತಿಯ ಆಸ್ತಿಗಳ ಡಿಜಿಟಲೀಕರಣಕ್ಕೆ ನಾಗರಿಕರು ನಿರಾಸಕ್ತಿ ತೋರಿಸುತ್ತಿ ದ್ದಾರೆ. ತಮ್ಮ ಆಸ್ತಿಗಳನ್ನು ಡಿಜಿಟಲೀಕರಣಳಿಸಿ ಇ-ಖಾತೆ ಮಾಡಿಕೊಳ್ಳಲು ದಾಖಲೆಗಳನ್ನು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ, ಖಾಲಿ ನಿವೇಶನಗಳನ್ನು ಗಣಕೀಕರಣ ಮಾಡಲು ಪೌರಾಡಳಿತ ನಿರ್ದೇಶನಾಲಯ ಆಸ್ತಿ ಕಣಜ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಸ್ಥಳೀಯ ಸಂಸ್ಥೆಯ ಎಲ್ಲ ಕಟ್ಟಡಗಳನ್ನು ಆನ್‌ಲೈನ್ ವ್ಯಾಪ್ತಿಯೊಳಗೆ ತರುವುದು ಸರಕಾರದ ಉದ್ದೇಶವಾಗಿದೆ. ಹಾಗಾಗಿ ಆಸ್ತಿ ಕಣಜ ತಂತ್ರಾಂಶದಲ್ಲಿ ಆಸ್ತಿ ದಾಖಲೆಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದೆ.

ಆದರೆ ಕಟ್ಟಡ ಮಾಲಕರು ಮತ್ತು ಅನುಭೋಗದಾರರು ತಮ್ಮ ಆಸ್ತಿಗಳನ್ನು ಡಿಜಿಟಲೀಕರಣಳಿಸಿ ಇ-ಖಾತೆ ಮಾಡಿಕೊಳ್ಳಲು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಮತ್ತು ನಗರಸಭೆ ನೇಮಿಸಿದ ಸರ್ವೇಯರ್‌ಗಳು ಮನೆಮನೆಗೆ ಹೋದರೂ ನಾಗರಿಕರು ತಮ್ಮ ಆಸ್ತಿ ದಾಖಲೆಗಳನ್ನು ನೀಡಲು ಹಿಂಜರಿಯುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.
ನಕಲಿ ದಾಖಲೆಗಳಿಗೆ ಕಡಿವಾಣ

ನಗರದಲ್ಲಿ 68 ಸಾವಿರ ಮನೆ ಮತ್ತು ಖಾಲಿ ನಿವೇಶನಗಳಿದ್ದು, ಇಲ್ಲಿಯವರೆಗೆ 35 ಸಾವಿರ ಆಸ್ತಿ ಮಾತ್ರ ಇ-ಖಾತೆ ಹೊಂದಿದೆ. ಉಳಿದ ಆಸ್ತಿಯನ್ನು ಇ-ಖಾತೆಗೆ ಸೇರಿಸುವುದೇ ನಗರಸಭೆಗೆ ಸವಾಲಾಗಿ ಪರಿಣಮಿಸಿದೆ. ಬಹುತೇಕ ಮಂದಿ ದಾಖಲೆ ನೀಡಲು ಹಿಂದೇಟು ಹಾಕಿದರೆ, ಕೆಲವು ಆಸ್ತಿ ಮಾಲಕರು ದೂರದ ಮುಂಬಯಿ, ಬೆಂಗಳೂರು, ದುಬಾ ಸಹಿತ ಹೊರರಾಜ್ಯ ಹಾಗೂ ಹೊರದೇಶ ದಲ್ಲಿ ನೆಲೆಸಿದ್ದಾರೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಆಸ್ತಿ ಡಿಜಿಟಲೀಕರಣಗೊಂಡು ಇ-ಖಾತೆಯಾಗಿ, ಸಂಪೂರ್ಣ ದತ್ತಾಂಶ ಸರಕಾರದ ಬಳಿ ಇರುತ್ತದೆ. ಪ್ರಸ್ತುತ ಮ್ಯಾನುವಲ್ ವ್ಯವಸ್ಥೆ ಅಡಿಯಲ್ಲಿ ಆಸ್ತಿಗಳ ತೆರಿಗೆ ಪಾವತಿ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ತೆರಿಗೆ ಪಾವತಿ ಯನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ವ್ಯವಸ್ಥೆಗೆ ಇದು ಪೂರಕವಾಗಿ ಕಾರ್ಯನಿರ್ವಹಿಸಲಿದೆ.

ಆಸ್ತಿ ವರ್ಗಾವಣೆ ಪ್ರಕ್ರಿಯೆ ಪಾರದರ್ಶಕವಾಗಲಿದ್ದು, ಸರಕಾರ ಇದನ್ನು ನೋಂದಣಿ ಇಲಾಖೆಯಲ್ಲಿರುವ ಕಾವೇರಿ ದತ್ತಾಂಶದೊಂದಿಗೆ ಸೇರ್ಪಡೆಗೊಳಿಸ ಲಿದೆ. ಇದರಿಂದ ಆಸ್ತಿಗಳ ಅಕ್ರಮ ಮಾರಾಟ, ದಾಖಲೆಗಳನ್ನು ನಕಲುಗೊಳಿಸಿ ವಂಚಿಸುವ ಪ್ರಕರಣಗಳಿಗೆ ಕಡಿವಾಣ ಹಾಕಲು ಸಹಾಯವಾಗುತ್ತದೆ ಎಂದು ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಇ-ಖಾತೆಗೆ ಸಲ್ಲಿಸಬೇಕಾದ ದಾಖಲೆಗಳು

ಕಟ್ಟಡ ಮಾಲಕರ ಭಾವಚಿತ್ರ, ಆಧಾರ್ ಹೊರತುಪಡಿಸಿ ಒಂದು ಗುರುತಿನ ದಾಖಲೆ, ಮೊಬೈಲ್ ನಂಬರ್, ಇ-ಮೇಲ್, ಅನುಭೋಗದಾರರು (ಬಾಡಿಗೆ ದಾರರು) ಹೊರತುಪಡಿಸಿ ನಾಮಿನಿ, ನಾಮಿನಿ ಭಾವಚಿತ್ರ, ಗುರುತಿನ ದಾಖಲೆ, ಮೊಬೈಲ್ ನಂಬರ್ ಮತ್ತು ಇ-ಮೇಲ್, ಚಾಲ್ತಿ ಸಾಲಿನ ತೆರಿಗೆ ಪಾವತಿ ನಮೂನೆ-2 ಬ್ಯಾಂಕ್ ಚಲನ್, ವಿದ್ಯುತ್ ಮೀಟರ್ ಆರ್‌ಆರ್ ಬಿಲ್, ನೀರಿನ ಸಂಪರ್ಕದ ನಂಬರ್, ಕಟ್ಟಡದ ಫೋಟೋ, 2000ನೇ ಸಾಲಿನ ಅನಂತರದಾಗಿ ದ್ದಲ್ಲಿ ಕಟ್ಟಡ ಪರವಾನಿಗೆ ಆದೇಶ, ಕಟ್ಟಡ ಪ್ರವೇಶಕ್ಕೆ ಅನುಮತಿ ಪತ್ರ ಮತ್ತು ಅನುಮೋದಿತ ನಕ್ಷೆ, ಕ್ರಯಪತ್ರ, ದಾನಪತ್ರ, ಹಕ್ಕು ಖುಲಾಸೆ ಪತ್ರ ಹಾಗೂ 2000 ಪೂರ್ವದ ಕಟ್ಟಡವಾಗಿದ್ದಲ್ಲಿ ಕಟ್ಟಡ ಪರವಾನಿಗೆ ಆದೇಶ ಮತ್ತು ನಕ್ಷೆ ಹಾಗೂ ಆರ್‌ಟಿಸಿ, ಪಹಣಿ ಪತ್ರಿಕೆ, ಅಪಾರ್ಟ್‌ಮೆಂಟ್ ಫ್ಲ್ಯಾಟ್ ಕಟ್ಟಡವಾಗಿದ್ದಲ್ಲಿ ಕ್ರಯಪತ್ರ ಹಾಗೂ ದಾನಹಕ್ಕು ಖುಲಾಸೆ ಪತ್ರ, ಸರಕಾರ, ಸ್ಥಳೀಯ ಸಂಸ್ಥೆ, ಕರ್ನಾಟಕ ಗೃಹ ಮಂಡಳಿ ಇತ್ಯಾದಿ ಇಲಾಖೆಯಿಂದ ಜಾಗ ಮಂಜೂರಾತಿ ಆದೇಶ, ಹಕ್ಕುಪತ್ರ, 94ಸಿ/94ಸಿಸಿ ಹಾಗೂ ಕ್ರಯಪತ್ರ. ಖಾಲಿ ನಿವೇಶನಕ್ಕೆ ಸಂಬಂಧಿಸಿದವರು ಆರ್‌ಟಿಸಿ, ಮ್ಯೂಟೇಶನ್ ಎಂಟ್ರಿ, ಕ್ರಯಸಾಧನ, ದಾನಪತ್ರ, ಹಕ್ಕು ಬಿಡುಗಡೆ ಪತ್ರ, ಮರಣ ಶಾಸನ, ಭೂ ಪರಿವರ್ತನೆ ಆದೇಶ, ತಹಶೀಲ್ದಾರ್ ಹಿಂಬರಹ ಆದೇಶ, ಸಹಾಯಕ ಆಯುಕ್ತರ ಆದೇಶ, ವಿನ್ಯಾಸ ಆದೇಶದ ಪ್ರತಿ, ಪ್ರಾಧಿಕಾರದ ಅನುಮೋದಿತ ನಕ್ಷೆ, ನಿವೇಶನದ ಮಾಲಕರ ಭಾವಚಿತ್ರ, ಗುರುತಿನ ದಾಖಲೆ ಮತ್ತು ಚಾಲ್ತಿ ಸಾಲಿನ ಖಾಲಿ ನಿವೇಶನ ತೆರಿಗೆ ಪಾವತಿ ನೀಡಬೇಕು.

ಆಸ್ತಿಗಳ ಡಿಜಿಟಲೀಕರಣಕ್ಕಾಗಿ ನಗರಸಭೆಯಿಂದ ನೇಮಕ ಮಾಡಲಾಗಿರುವ ಸರ್ವೇಯರ್‌ಗಳಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ. ಇವರು ಮನೆಗಳಿಗೆ ಭೇಟಿ ನೀಡಿದ ಸಂದರ್ಭ ಹಲವು ಮನೆಯವರು ಆಸ್ತಿಗೆ ಸಂಬಂಧಿಸಿ ದಾಖಲೆ ಗಳನ್ನು ನೀಡಲು ಹಿಂದೇಟು ಹಾಕಿರುವುದು ಗಮನಕ್ಕೆ ಬಂದಿದೆ. ಆದುದರಿಂದ ನಾಗರಿಕರು ಆಸ್ತಿಯನ್ನು ಡಿಜಿಟಲೀಕರಣಗೊಳಿಸಿ ಇ-ಖಾತೆಗೆ ಸೇರ್ಪಡೆಗೊಳಿ ಸಲು ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಸಹಕರಿಸಬೇಕು.
-ಡಾ.ಉದಯ ಕುಮಾರ್ ಶೆಟ್ಟಿ, ಪೌರಾಯುಕ್ತರು

Similar News