ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿಯನ್ನು ಸಿಎಂ ಮಾಡಲು ಆರೆಸ್ಸೆಸ್ ತೀರ್ಮಾನ: ಕುಮಾರಸ್ವಾಮಿ

Update: 2023-02-05 14:04 GMT

ಬೆಂಗಳೂರು, ಫೆ. 5: ‘ವಿಧಾನಸಭೆ ಚುನಾವಣೆಯ ಬಳಿಕ ಆರೆಸ್ಸೆಸ್, ಸಂಘ ಪರಿವಾರದವರು ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿಯವರನ್ನು ಮುಖ್ಯಮಂತ್ರಿ ಮಾಡಲು ತೀರ್ಮಾನಿಸಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ರವಿವಾರ ಇಲ್ಲಿನ ದಾಸರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ‘ಪಂಚರತ್ನ’ ಯಾತ್ರೆ ಸಂದರ್ಭದಲ್ಲಿ ನಿನ್ನೆ ಜೋಶಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ಬ್ರಾಹ್ಮಣ ವರ್ಗಕ್ಕೆ ಪ್ರಹ್ಲಾದ್ ಜೋಶಿ ಸೇರಿದ್ದು, ಅವರು ಹಳೆಯ ಕಾಲದ ಬ್ರಾಹ್ಮಣರಂತಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಬ್ರಾಹ್ಮಣ ಸಮುದಾಯದಲ್ಲ್ಲಿ ಎರಡು-ಮೂರು ವಿಧಗಳಿವೆ. ಶೃಂಗೇರಿಯ ಮಠವನ್ನು ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು. ನಮ್ಮ ಭಾಗದ ಹಳೆಯ ಬ್ರಾಹ್ಮಣರಂತಲ್ಲ ಅವರು. ಜೋಶಿಯವರು ‘ಮರಾಠ ಪೇಶ್ವೆ’ ಸಮುದಾಯಕ್ಕೆ ಸೇರಿದವರು. ಆದರೆ, ಬ್ರಾಹ್ಮಣರು ಸರ್ವೇ ಜನಾಃ ಸುಖಿನೋ ಭವಂತು ಅನ್ನುವವರು. ಸರ್ವ ಜನರ ಕ್ಷೇಮ ಬಯಸುವವರು’ ಎಂದು ಕುಮಾರಸ್ವಾಮಿ ತಮ್ಮದೆ ದಾಟಿಯಲ್ಲಿ ವಿಶ್ಲೇಷಿಸಿದರು.

ಬಿಜೆಪಿ, ಆರೆಸೆಸ್ಸ್ ಕುತಂತ್ರಕ್ಕೆ ಯಾವುದೇ ಕಾರಣಕ್ಕೂ ಬಲಿಯಾಗಬೇಡಿ. ಇವರು ದೇಶವನ್ನು ಹಾಳು ಮಾಡುತ್ತಾರೆ. ಬ್ರಾಹ್ಮಣ ಸಮುದಾಯದ ಮುಖ್ಯಮಂತ್ರಿ ಜೊತೆಗೆ ಎಂಟು ಮಂದಿ ಉಪಮುಖ್ಯಮಂತ್ರಿ ಮಾಡಲು ಸಭೆ ನಡೆಸಿದ್ದು, ನನ್ನ ಗಮನಕ್ಕೆ ಬಂದಿದ್ದು, ಆ ಎಂಟು ಮಂದಿ ಯಾರ್ಯಾರು ಎಂದು ಹೆಸರನ್ನು ಬೇಕಾದರೂ ಹೇಳುತ್ತೇನೆ ಎಂದು ಅವರು ತಿಳಿಸಿದರು.

ಮಾರ್ಚ್‍ನಲ್ಲಿ ಸಮಾರೋಪ: ‘ಜೆಡಿಎಸ್ ಪಂಚರತ್ನ ಯಾತ್ರೆ ಶಿವರಾತ್ರಿ(ಫೆ.18) ಹಬ್ಬಕ್ಕೆ ಒಂದು ದಿನ ಬಿಡುವು ನೀಡಲಿದ್ದು, ಈ ತಿಂಗಳ 27ರ ವರೆಗೆ ನಡೆಯಲಿದೆ. ಮಾರ್ಚ್‍ನಲ್ಲಿ ಹಾಸನ, ಮೈಸೂರು, ಬೆಂಗಳೂರಿನಲ್ಲಿ ರಥಯಾತ್ರೆ. ಬೆಂಗಳೂರಿನಲ್ಲಿ 8ರಿಂದ 10 ಕ್ಷೇತ್ರಗಳನ್ನು ಪಕ್ಷ ಗೆಲ್ಲಬೇಕಿದೆ. ಮಾರ್ಚ್ 20 ಅಥವಾ 25ಕ್ಕೆ ಸಮಾರೋಪ ಕಾರ್ಯಕ್ರಮ ಮಾಡಲಾಗುವುದು ಎಂದು ಅವರು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡ ಕ್ಷೇತ್ರಗಳು ಜೆಡಿಎಸ್ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಕಂಡಿವೆ. ಆದರೆ, ಇದೀಗ ಅಭಿವೃದ್ಧಿ ನೆಪದಲ್ಲಿ ಬಿಜೆಪಿ ಲೂಟಿ ಮಾಡುತ್ತಿದೆ. ಜನರ ಬದುಕಿನಲ್ಲಿ ಚಲ್ಲಾಟ ಆಡುತ್ತಿದ್ದು, ಇದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ನಮ್ಮ ಸರಕಾರ ಅಧಿಕಾರಕ್ಕೆ ಬರಲಿದ್ದು, ಅಭಿವೃದ್ಧಿಗೆ ಆಸ್ಥೆ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಾಯಕನಿಗೆ ಜೆಡಿಎಸ್ ನಿಂದ ಟಿಕೆಟ್!

Similar News