ನವೀಕರಿಸಬಹುದಾದ ಇಂಧನ ಕ್ಷೇತ್ರದ ಮೇಲೆ ಹೂಡಿಕೆ ಅಗತ್ಯ: ಕೇಂದ್ರ ಸಚಿವ ಆರ್.ಕೆ.ಸಿಂಗ್

Update: 2023-02-05 17:44 GMT

ಬೆಂಗಳೂರು, ಫೆ.5: ಇಂಧನ ಸಂಗ್ರಹಣೆಯ ವೆಚ್ಚವನ್ನು ಕಡಿಮೆ ಮಾಡುವವರೆಗೆ ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ ಇಂಧನ ಮೂಲಗಳಿಂದ ನವೀಕರಿಸಬಹುದಾದ ಇಂಧನಕ್ಕೆ ಸಂಪೂರ್ಣ ಪರಿವರ್ತನೆಯು ಸಂಭವಿಸುವುದಿಲ್ಲ ಎಂದು ಕೇಂದ್ರ ಇಂಧನ, ನವೀನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಹೇಳಿದರು.

ರವಿವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಜಿ20 ರಾಷ್ಟ್ರಗಳ ಮೊದಲ ಎನರ್ಜಿ ಟ್ರಾನ್ಸಿಶನ್ಸ್ ವಕಿರ್ಂಗ್ ಗ್ರೂಪ್ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಇಂಧನ ಶೇಖರಣೆಯ ಮೌಲ್ಯವು ಇಂಧನ ಉತ್ಪಾದನೆಯ ವೆಚ್ಚಕ್ಕಿಂತ ನಾಲ್ಕು ಪಟ್ಟು ಹೆಚ್ಚಿದೆ. ಅಂತಹ ಹೆಚ್ಚಿನ ವೆಚ್ಚಗಳು ನವೀಕರಿಸಬಹುದಾದ ಇಂಧನ ಮೂಲಗಳ ತ್ವರಿತ ಅಳವಡಿಕೆಯನ್ನು ಕಾರ್ಯಸಾಧ್ಯವಾಗದಂತೆ ಮಾಡಿದೆ ಎಂದು ತಿಳಿಸಿದರು.

ವಿಶ್ವವು ಇಂಧನ ಪರಿವರ್ತನೆಯ ಬಗ್ಗೆ ಮಾತನಾಡುತ್ತಿದೆ. ಆದರೆ ಅದರಲ್ಲಿ ಹೂಡಿಕೆ ಮಾಡುತ್ತಿಲ್ಲ. ಸಂಗ್ರಹಣೆಯಿಲ್ಲದೆ, ನವೀಕರಿಸಬಹುದಾದ ಇಂಧನ ಮೂಲಗಳು ನಿರಂತರವಾಗಿ ವಿದ್ಯುತ್ ಪೂರೈಕೆಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಭಾರತವು ಇಂಧನ ಸಂಗ್ರಹವನ್ನು ಸುಧಾರಿಸಲು ಕೆಲಸ ಮಾಡುತ್ತಿದೆ. ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದ್ದರೂ, ಕಡಿಮೆ ಇಂಗಾಲ ಹೊರಸೂಸುವಿಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಆರ್.ಕೆ.ಸಿಂಗ್ ತಿಳಿಸಿದರು.

ಜಾಗತಿಕ ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಅಗ್ರ ಐದು ರಾಷ್ಟ್ರಗಳಲ್ಲಿ ಸ್ಥಾನ ಪಡೆದಿರುವ ಭಾರತವು, 2030ರ ವೇಳೆಗೆ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಶೇ.40ರಷ್ಟು ತಗ್ಗಿಸಲು ಉದ್ದೇಶಿಸಿತ್ತು. ಆದರೆ, 2021ರ ವೇಳೆಗೆ ನಾವು ಶೇ.42ರಷ್ಟು ಗುರಿಯನ್ನು ಸಾಧಿಸಿದ್ದೇವೆ ಎಂದು ಅವರು ಹೇಳಿದರು.

ಭಾರತವು 177 ಗಿಗಾ ವ್ಯಾಟ್‍ಗಳ ನವೀಕರಿಸಬಹುದಾದ ಇಂಧನ ಸಾಮಥ್ರ್ಯವನ್ನು ಹೊಂದಿದ್ದು, 75 ಗಿಗಾ ವ್ಯಾಟ್ ಸ್ಥಾಪನೆ ಹಂತದಲ್ಲಿದೆ. ‘ನಾವು 2030ರ ವೇಳೆಗೆ 500 ಗಿಗಾ ವ್ಯಾಟ್ ಸಾಮಥ್ರ್ಯವನ್ನು ಹೊಂದುವ ಗುರಿಯನ್ನು ಹೊಂದಿದ್ದೇವೆ ಎಂದು ಆರ್.ಕೆ.ಸಿಂಗ್ ತಿಳಿಸಿದರು.

ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಸಂಶೋಧನೆ, ಅಭಿವೃದ್ಧಿ ಮತ್ತು ನಿಯೋಜನೆಯಲ್ಲಿ ಹೂಡಿಕೆಗಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯವನ್ನು ಬೆಂಬಲಿಸಬೇಕು. ಜೊತೆಗೆ ಅಭಿವೃದ್ಧಿಶೀಲ ರಾಷ್ಟ್ರಗಳು ಇದಕ್ಕೆ ಅಗತ್ಯವಿರುವ ಮೂಲಸೌಕರ್ಯ ಮತ್ತು ಸಂಸ್ಥೆಗಳನ್ನು ನಿರ್ಮಿಸಬೇಕು ಎಂದರು.

ಶುದ್ಧ ಇಂಧನವು ಸಾರ್ವತ್ರಿಕವಾಗಿ ಎಲ್ಲರಿಗೂ ಸಿಗುವಂತೆ ಪರಿವರ್ತನೆಯನ್ನು ಸಾಧಿಸಲು ಅಂತರರಾಷ್ಟ್ರೀಯ ಸಹಕಾರ ಮತ್ತು ಸಹಯೋಗದ ಅವಶ್ಯಕತೆಯಿದೆ. ಭಾರತವು ತನ್ನ ಇಂಧನ ಸಂಯೋಜನೆಯಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸುತ್ತಿದೆ ಮತ್ತು ನವೀಕರಿಸಬಹುದಾದ ಇಂಧನದ ಸಾಮಥ್ರ್ಯವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದೆ ಎಂದು ಅವರು ಹೇಳಿದರು.

ಭಾರತ ಸರಕಾರವು ಇಂಧನ ದಕ್ಷತೆಯನ್ನು ಉತ್ತೇಜಿಸುವ ಮತ್ತು ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಲವಾರು ನೀತಿ ಮತ್ತು ಉಪಕ್ರಮಗಳನ್ನು ಪ್ರಾರಂಭಿಸಿದೆ. ಉದಾಹರಣೆಗೆ ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ ಮತ್ತು ರಾಷ್ಟ್ರೀಯ ಸೌರ ಮಿಷನ್ ಎಂದು ಅವರು ಹೇಳಿದರು.

ಸಭೆಯಲ್ಲಿ ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಅಲೋಕ್ ಕುಮಾರ್, ನೀತಿ ಆಯೋಗದ ಸದಸ್ಯ ವಿ.ಕೆ.ಸಾರಸ್ವತ್, ಬ್ರೆಝಿಲ್ ದೇಶದ ಪ್ರತಿನಿಧಿ ರೆನಾಟೊ ದೊಮಿತ್ ಗೊಡಿನ್ಹೋ, ಇಂಡೋನೇಷಿಯಾದ ಪ್ರತಿನಿಧಿ ಯುಡೊದ್ವಿನಂದ ಪಿರಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Similar News