ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿ 8 ಲಕ್ಷ ಕೋಟಿ ರೂ.ಹೂಡಿಕೆಗೆ ಅವಕಾಶ: ಪ್ರಧಾನಿ ನರೇಂದ್ರ ಮೋದಿ

Update: 2023-02-06 14:24 GMT

ಬೆಂಗಳೂರು, ಫೆ.6: ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ 21ನೆ ಶತಮಾನದಲ್ಲಿ ಭಾರತಕ್ಕೆ ಹೊಸ ದಿಕ್ಕನ್ನು ನೀಡಲಿದೆ. ಈ ದಶಕದ ಅಂತ್ಯದ ವೇಳೆಗೆ ನಾವು 5ಎಂಎಂಟಿಪಿಎ ಹಸಿರು ಹೈಡ್ರೋಜನ್ ಉತ್ಪಾದನೆಯ ಗುರಿಯನ್ನು ಹೊಂದಿದ್ದೇವೆ. ಇದರಲ್ಲಿ 8 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆಯ ಅವಕಾಶಗಳು ಇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸೋಮವಾರ ನಗರದ ಬೆಂಗಳೂರಿನ ತುಮಕೂರು ರಸ್ತೆಯಲ್ಲಿನ ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(ಬಿಐಇಸಿ)ದಲ್ಲಿ ‘ಇಂಡಿಯಾ ಎನರ್ಜಿ ಸಪ್ತಾಹ-2023’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಮುಂದಿನ ಐದು ವರ್ಷಗಳಲ್ಲಿ ಗ್ರೇ-ಹೈಡ್ರೋಜನ್ ಬದಲಿಗೆ ಗ್ರೀನ್ ಹೈಡ್ರೋಜನ್‍ನ ಪಾಲು ಶೇ.25ರಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಿದೆ ಎಂದರು.

ಇದರ ಜೊತೆಗೆ, ಇಲೆಕ್ಟ್ರಿಕ್ ವಾಹನಗಳ ಬ್ಯಾಟರಿಯ ಮೌಲ್ಯ ಶೇ.40 ರಿಂದ 50ರಷ್ಟಿದೆ. ಆದುದರಿಂದ, ನಾವು 50 ಗಿಗಾ ವ್ಯಾಟ್ ಗಂಟೆಗಳ ನವೀನ ರಾಸಾಯನಿಕ ಸೆಲ್ಸ್ ನಿರ್ಮಿಸಲು 18 ಸಾವಿರ ಕೋಟಿ ರೂ.ಗಳ ಪಿಎಲ್‍ಐ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು. 

ಭಾರತವು ಜಿ20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಎನರ್ಜಿ ಸಮ್ಮೇಳನ ಇದಾಗಿದೆ. 21ನೇ ಶತಮಾನದಲ್ಲಿ ವಿಶ್ವದ ಭವಿಷ್ಯ ನಿರ್ಧರಿಸುವಲ್ಲಿ, ಇಂಧನ ವಲಯವು ಪ್ರಧಾನಪಾತ್ರ ವಹಿಸಲಿದೆ. ಇಂಧನದ ಹೊಸ ಮೂಲಗಳನ್ನು ಅಭಿವೃದ್ಧಿಪಡಿಸಲು, ಇಂಧನ ಪರಿವರ್ತನೆಯಲ್ಲಿ ಭಾರತವು ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಮೋದಿ ಹೇಳಿದರು. 

ಕೊರೋನ ಮಹಾಮಾರಿ ಹಾಗೂ ಯುದ್ಧದ ಪ್ರಭಾವದ ನಡುವೆಯೂ 2022ರಲ್ಲಿ ಭಾರತವು ಜಾಗತಿಕ ಉಜ್ವಲ ತಾಣವಾಗಿದೆ. ಬಾಹ್ಯ ಸಮಸ್ಯೆಗಳು ಏನೇ ಇದ್ದರೂ ಆಂತರಿಕವಾಗಿ ಭಾರತವು ಪ್ರತಿಯೊಂದು ಸವಾಲುಗಳನ್ನು ಮೆಟ್ಟಿ ನಿಂತಿದೆ. ಕೈಗಾರಿಕೆಗಳಿಂದ ಹಿಡಿದು ಕಚೇರಿವರೆಗೆ, ಕಾರ್ಖಾನೆಗಳಿಂದ ಮನೆಯವರೆಗೆ ಭಾರತದಲ್ಲಿ ಇಂಧನದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಆಗುತ್ತಿರುವ ಅಭಿವೃದ್ಧಿಯನ್ನು ನೋಡುತ್ತಿದ್ದರೆ, ಮುಂಬರುವ ವರ್ಷಗಳಲ್ಲಿ ಅನೇಕ ಹೊಸ ನಗರಗಳು ನಿರ್ಮಾಣವಾಗಲಿವೆ. ಅಂತರ್‍ರಾಷ್ಟ್ರೀಯ ಎನರ್ಜಿ ಅಸೋಸಿಯೇಷನ್ ಪ್ರಕಾರ ಈ ದಶಕದಲ್ಲಿ ಭಾರತದ ಇಂಧನ ಬೇಡಿಕೆಯೂ ವಿಶ್ವದಲ್ಲೆ ಅತಿ ಹೆಚ್ಚಿದೆ. ಹೂಡಿಕೆದಾರರಿಗೆ, ಇಂಧನ ವಲಯದ ಸ್ಟೇಕ್‍ಹೋಲ್ಡರ್ಸ್‍ಗಳಿಗೆ ಭಾರತವು ಹೊಸ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಪ್ರಧಾನಿ ಹೇಳಿದರು.

ಇಂಧನ ವಲಯವು ಭಾರತದಲ್ಲಿ ಹೂಡಿಕೆ ಹಾಗೂ ಸಂಯೋಜನೆಯ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಇಂಧನ ವಲಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪರಿಶೋಧನೆ ಹಾಗೂ ಉತ್ಪಾದನೆ ಹೆಚ್ಚಳ, ಸರಬರಾಜಿನ ವಿಧಾನಗಳ ಹೆಚ್ಚಳ, ಜೈವಿಕ ಅನಿಲಗಳು, ಎಥನಾಲ್, ಕಂಪ್ರೆಸ್ಡ್ ಬಯೋಗ್ಯಾಸ್ ಹಾಗೂ ಸೌರಶಕ್ತಿಯಂತಹ ಪರ್ಯಾಯ ಇಂಧನ ಮೂಲಗಳನ್ನು ವಿಸ್ತರಿಸುವುದು ಹಾಗೂ ಎಲೆಕ್ಟ್ರಿಕ್ ವಾಹನಗಳು, ಹೈಡ್ರೋಜನ್ ಮೂಲಕ ಇಂಗಾಲ ಹೊರಸೂಸುವಿಕೆಯನ್ನು ತಡೆಗಟ್ಟಲು ಭಾರತ ಆದ್ಯತೆ ನೀಡಿದೆ ಎಂದು ಅವರು ಹೇಳಿದರು. 

2030ರ ವೇಳೆಗೆ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲ ಬಳಕೆಯ ಪ್ರಮಾಣವನ್ನು ಶೇ.6ರಿಂದ ಶೇ.15ಕ್ಕೆ ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಒಂದು ದೇಶ ಒಂದು ಗ್ರಿಡ್ ಮೂಲಕ ಇದಕ್ಕಾಗಿ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲಾಗುವುದು. ಭಾರತದಲ್ಲಿ ಅನಿಲ ಪೈಪ್ ಲೈನ್ ವಿಸ್ತೀರ್ಣ ಮುಂದಿನ 4-5 ವರ್ಷಗಳಲ್ಲಿ 35 ಸಾವಿರ ಕಿ.ಮೀ.ವರೆಗೆ ತಲುಪಿಸಲಾಗುವುದು ಎಂದು ನರೇಂದ್ರ ಮೋದಿ ತಿಳಿಸಿದರು.

ಜೈವಿಕ ಇಂಧನ ಕ್ಷೇತ್ರದಲ್ಲಿಯೂ ಭಾರತ ಮುನ್ನುಗ್ಗುತ್ತಿದೆ. ಕಳೆದ ಆಗಸ್ಟ್‍ನಲ್ಲಿ ಏಷ್ಯಾದಲ್ಲೆ ಮೊದಲ ಬಾರಿಗೆ 2ಜಿ ಎಥೆನಾಲ್ ಬಯೋ ರಿಫೈನರಿ ಸ್ಥಾಪನೆ ಮಾಡಿದೆವು. ಸುಮಾರು 12 ವಾಣಿಜ್ಯ 2ಜಿ ಎಥೆನಾಲ್ ಘಟಕಗಳನ್ನು ಸ್ಥಾಪಿಸಲು ಸಿದ್ಧತೆಗಳನ್ನು ಮಾಡುತ್ತಿದ್ದೇವೆ. ಕಳೆದ 9 ವರ್ಷಗಳಲ್ಲಿ ಪೆಟ್ರೋಲ್‍ನಲ್ಲಿ ಎಥೆನಾಲ್ ಬ್ಲೋಡಿಂಗ್ ಅನ್ನು ಶೇ.1.5ರಿಂದ ಶೇ.10ಕ್ಕೆ ಹೆಚ್ಚಿಸಿದ್ದೇವೆ. ಈಗ ಶೇ.20ರಷ್ಟು ಬ್ಲೋಡಿಂಗ್‍ನ ಲಕ್ಷ ಹೊಂದಿದ್ದೇವೆ ಎಂದು ಅವರು ಹೇಳಿದರು.

ಇವತ್ತು ಇ-20 ರೋಲ್‍ಔಟ್ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ದೇಶದ 15 ನಗರಗಳನ್ನು ಒಳಗೊಳ್ಳಲಿದೆ. ನಂತರ ಎರಡು ವರ್ಷಗಳಲ್ಲಿ ದೇಶದಾದ್ಯಂತ ಇದನ್ನು ವಿಸ್ತರಿಸಲಾಗುವುದು. ಇವತ್ತು ಸೋಲಾರ್ ಕುಕ್‍ಟಾಪ್ ಉದ್ಘಾಟಿಸಿದ್ದೇವೆ. ಇದು ಭಾರತದಲ್ಲಿ ಹಸಿರು ಹಾಗೂ ಸ್ವಚ್ಛ ಕುಕಿಂಗ್‍ಗೆ ಹೊಸ ಆಯಾಮ ನೀಡಲಿದೆ. ಮುಂದಿನ 2-3 ವರ್ಷಗಳಲ್ಲಿ 3 ಕೋಟಿಗಿಂತ ಅಧಿಕ ಮನೆಗಳಲ್ಲಿ ಸೋಲಾರ್ ಕುಕ್‍ಟಾಪ್ ತಲುಪಲಿದೆ ಎಂದು ಅವರು ಮಾಹಿತಿ ನೀಡಿದರು.

ಮನೆಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲಾಗುತ್ತಿದೆ. ದೊಡ್ಡಮಟ್ಟದಲ್ಲಿ ಸಿಎನ್‍ಜಿ ಹಾಗೂ ಎನ್‍ಎನ್‍ಜಿಯನ್ನು ಬಳಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಲೋಕಪ್ರಿಯತೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಬಾಟಲ್‍ಗಳ ಮರುಬಳಕೆಯಿಂದ ಸಮವಸ್ತ್ರಗಳನ್ನು ನಿರ್ಮಿಸಲಾಗುತ್ತಿದೆ. ಈ ವರ್ಷ 10 ಕೋಟಿ ಇಂತಹ ಬಾಟಲಿಗಳನ್ನು ಮರುಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಕೈ ಜೋಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಇಂಧನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

‘ಟರ್ಕಿ ದೇಶದಲ್ಲಿ ಸಂಭವಿಸಿರುವ ವಿನಾಶಕಾರಿ ಭೂಕಂಪದಿಂದಾಗಿ ಹಲವಾರು ಮಂದಿ ಮೃತಪಟ್ಟಿದ್ದು, ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಟರ್ಕಿಯ ಸುತ್ತಮುತ್ತಲಿನ ದೇಶದಲ್ಲಿಯೂ ನಷ್ಟ ಉಂಟಾಗಿದೆ. ಭಾರತದ 140 ಕೋಟಿ ಜನರ ಸಂವೇದನೆ, ಭೂಕಂಪ ಪೀಡಿತರೊಂದಿಗಿದೆ. ಭಾರತವು ಭೂಕಂಪ ಪೀಡಿತರಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ

-ನರೇಂದ್ರ ಮೋದಿ, ಪ್ರಧಾನಿ

Similar News