ವಿಕ್ಟೋರಿಯ ಗೌರಿ ಶಿಫಾರಸ್ಸಿನಲ್ಲಿ ಎಲ್ಲಾ ಸಾಂದರ್ಭಿಕ ಅಂಶಗಳನ್ನು ಕೊಲೀಜಿಯಮ್ ಪರಿಗಣಿಸಿತ್ತು: ಸುಪ್ರೀಂ

Update: 2023-02-11 18:15 GMT

ಹೊಸದಿಲ್ಲಿ, ಫೆ. 11: ವಕೀಲೆ ಲಕ್ಷ್ಮಣ ಚಂದ್ರ( Lakshman Chandra) ವಿಕ್ಟೋರಿಯ ಗೌರಿಯನ್ನು ಮದ್ರಾಸ್ ಹೈಕೋರ್ಟ್(Madras High Court) ನ್ಯಾಯಾಧೀಶೆಯಾಗಿ ಶಿಫಾರಸು ಮಾಡುವಾಗ ಸುಪ್ರೀಂ ಕೋರ್ಟ್(Supreme Court) ಕೊಲೀಜಿಯಮ್ ಎಲ್ಲಾ ಸಾಂದರ್ಭಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿತ್ತು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಗೌರಿಯನ್ನು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶೆಯಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 7ರಂದು ವಜಾಗೊಳಿಸಿತ್ತು. ಆ ವಿಚಾರಣೆಗೆ ಸಂಬಂಧಿಸಿದ ವಿವರವಾದ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿದೆ.

ಸುಪ್ರೀಂ ಕೋರ್ಟ್ ಎರಡು ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವಂತೆಯೇ, ಫೆಬ್ರವರಿ 7ರಂದು ವಕೀಲೆ ಗೌರಿ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಭಾರತೀಯ ಜನತಾ ಪಕ್ಷದ ಸದಸ್ಯೆಯಾಗಿರುವ ಹಾಗೂ ಕ್ರೈಸ್ತರು ಮತ್ತು ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿರುವ ವಿಕ್ಟೋರಿಯ ಗೌರಿಯನ್ನು ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಿಸುವ ಸುಪ್ರೀಂ ಕೋರ್ಟ್ ನಿರ್ಧಾರವನ್ನು ವಕೀಲರು ಮತ್ತು ಕಾನೂನು ಪರಿಣತರು ಟೀಕಿಸಿದ್ದಾರೆ.

ಕೊಲೀಜಿಯಮ್‌ನ ಶಿಫಾರಸನ್ನು ರದ್ದುಪಡಿಸಲು ಅಥವಾ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೊಲೀಜಿಯಮ್‌ಗೆ ಸೂಚನೆ ನೀಡಲು ನಮ್ಮ ನ್ಯಾಯಾಂಗ ಪರಾಮರ್ಶೆಯ ಅಧಿಕಾರವನ್ನು ಬಳಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ(Sanjiv Khanna) ಮತ್ತು ಬಿ.ಆರ್. ಗವಾಯಿ(B.R. Gavai) ಅವರನ್ನೊಳಗೊಂಡ ನ್ಯಾಯಪೀಠವೊಂದು ಶುಕ್ರವಾರ ಹೇಳಿತು. ‘‘ಇದು ಕಾನೂನಿನ ಉಲ್ಲಂಘನೆಯಾಗುತ್ತದೆ. ಯಾಕೆಂದರೆ ಇದು ಕೊಲೀಜಿಯಮ್‌ನ ನಿರ್ಧಾರವನ್ನು ಮೌಲ್ಯಮಾಪನಕ್ಕೆ ಒಳಪಡಿಸಿ ಆ ನಿರ್ಧಾರದ ಜಾಗಕ್ಕೆ ವೈಯಕ್ತಿಕ ಅಥವಾ ಖಾಸಗಿ ಅಭಿಪ್ರಾಯವನ್ನು ತಂದಂತಾಗುತ್ತದೆ’’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಗೌರಿ ನೇಮಕಾತಿಯನ್ನು ವಿರೋಧಿಸಿ ಕೊಲೀಜಿಯಮ್‌ಗೆ ಮನವಿಗಳನ್ನು ಸಲ್ಲಿಸಲಾಗಿತ್ತಾದರೂ, ತನ್ನ ಶಿಫಾರಸನ್ನು ಹಿಂದೆ ಪಡೆಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯಕ್ಕೆ ಕೊಲೀಜಿಯಮ್ ಬಂದಿತ್ತು ಎನ್ನುವ ಅಂಶವನ್ನೂ ಸುಪ್ರೀಂ ಕೋರ್ಟ್ ಗಮನಿಸಿತು.

‘‘ನ್ಯಾಯಾಧೀಶರ ವರ್ತನೆಯು ಸ್ವಾತಂತ್ರವನ್ನು ಪ್ರತಿಫಲಿಸಬೇಕು ಹಾಗೂ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿರಬೇಕು. ಪ್ರಜಾಪ್ರಭುತ್ವವನ್ನು ರಕ್ಷಿಸುವ ಮತ್ತು ಬಲಗೊಳಿಸುವ ಹಾಗೂ ಮಾನವಹಕ್ಕುಗಳು ಮತ್ತು ಕಾನೂನಿನ ಆಡಳಿತವನ್ನು ಎತ್ತಿಹಿಡಿಯವು ಕೆಲಸದಲ್ಲಿ ನ್ಯಾಯಾಂಗವು ಪ್ರಮುಖ ಪಾತ್ರವಹಿಸುವುದರಿಂದ ಇದು ಅಗತ್ಯವಾಗಿದೆ’’ ಎಂಬುದಾಗಿಯೂ ಸುಪ್ರೀಂ ಕೋರ್ಟ್ ಹೇಳಿತು.

Similar News