ಕೊಡಗು: ಹುಲಿ ದಾಳಿಯಿಂದ ಮತ್ತೋರ್ವ ಮೃತ್ಯು

ಕಳೆದ 24 ಗಂಟೆಗಳಲ್ಲಿ ಇಬ್ಬರನ್ನು ಬಲಿ ಪಡೆದ ವ್ಯಾಘ್ರ

Update: 2023-02-13 05:02 GMT

ಕೊಡಗು, ಫೆ.13: ಹುಲಿ ದಾಳಿಗೈದು ಕಾರ್ಮಿಕನೋರ್ವನನ್ನು ಕೊಂದ ಘಟನೆ ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಬಾಡಗ ಗ್ರಾಮದ ಲೈನ್ ಮನೆ ಬಳಿ ನಡೆದಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಇಬ್ಬರು ಹುಲಿ ದಾಳಿಗೆ ಬಲಿಯಾಗಿದ್ದು, ಗ್ರಾಮಸ್ಥರು ತೀವ್ರ ಭಯಭೀತರಾಗಿದ್ದಾರೆ.

ರವಿವಾರ ಸಂಜೆ 12 ವರ್ಷದ ಬಾಲಕನೊಬ್ಬನನ್ನು ಹುಲಿ ಬಲಿ ಪಡೆದಿತ್ತು.

ಇದನ್ನೂ ಓದಿ: ಹುಲಿ ದಾಳಿಗೆ ಬಾಲಕ ಬಲಿ: ದಕ್ಷಿಣ ಕೊಡಗಿನಲ್ಲಿ ಘಟನೆ

ಕೃಷಿ ಕಾರ್ಮಿಕ ರಾಜು (75) ಮೃತಪಟ್ಟವರು. ಅವರಿಂದು ಬೆಳಗ್ಗೆ ತನ್ನ ಮನೆಯಿಂದ ಹೊರ ಬಂದಾಗ ಕಾಫಿ ತೋಟದಲ್ಲಿ ಅಡಗಿದ್ದ ಹುಲಿ ದಿಢೀರನೇ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿದೆ. ಇದರಿಂದ ರಾಜು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ರವಿವಾರ ಸಂಜೆ ದಕ್ಷಿಣ ಕೊಡಗಿನ ಕುಟ್ಟದ ಪಾಲೇರಿ ಎಂಬಲ್ಲಿ ಕಾಫಿ ತೋಟದಲ್ಲಿದ್ದ ಪಂಚವಳ್ಳಿ ಮೂಲದ ಚೇತನ್ (12) ಎಂಬ ಬಾಲಕನ  ಮೇಲೆ ಹುಲಿ ಎರಗಿ ಕೊಂದು ಹಾಕಿತ್ತು. ಇದೀಗ ಇನ್ನೋರ್ವನನ್ನು ಹುಲಿ ಕೊಂದು ಹಾಕಿದೆ.

ಹುಲಿ ಮನುಷ್ಯರನ್ನು ಬಲಿ ಪಡೆಯುತ್ತಿರುವ ಹಿನ್ನಲೆ ಆಕ್ರೋಶಗೊಂಡಿರುವ ಗ್ರಾಮಸ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ

ಇಂದು ಶಾಸಕ ಕೆ ಜಿ. ಬೋಪಯ್ಯ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಭೇಟಿಯಾಗಿ ನರಭಕ್ಷಕ ಹುಲಿ ಭೇಟೆಗೆ ಅರಣ್ಯ ಇಲಾಖೆಗೆ ಅನುಮತಿ ನೀಡುವಂತೆ ಕೋರಲಿದ್ದಾರೆ.

Similar News