‘ರಕ್ಷಣಾ ಕಾಯ್ದೆ’ಗೆ ಆಗ್ರಹಿಸಿ ವಕೀಲರ ಪ್ರತಿಭಟನೆ; ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ

Update: 2023-02-13 15:14 GMT

ಬೆಂಗಳೂರು, ಫೆ.13: ರಕ್ಷಣಾ ಕಾಯ್ದೆಗೆ ಆಗ್ರಹಿಸಿ ರಾಜ್ಯ ವಕೀಲರ ಸಂಘದ ಪ್ರತಿಭಟನೆ ಮತ್ತೊಮ್ಮೆ ಭುಗಿಲೆದ್ದಿದೆ. ವಕೀಲರ ರಕ್ಷಣೆಗಾಗಿ ಕಾನೂನು ಜಾರಿಗೆ ತರಲು ಆಗ್ರಹಿಸಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಕೀಲರು ಪ್ರತಿಭಟಿಸಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ವಿಧಾನಸೌಧ ಮುತ್ತಿಗೆ ಹಾಕಲು ವಕೀಲರು ಯತ್ನಿಸುತ್ತಿದ್ದಂತೆ ಕೆ.ಆರ್.ಸರ್ಕಲ್ ಬಳಿ ಪೊಲೀಸರು ಬ್ಯಾರಿಕೇಟ್ ಹಾಕಿ ಪ್ರತಿಭಟನಾಕಾರರನ್ನು ತಡೆದರು. 

ಕೋರ್ಟ್ ಆವರಣದ ಮುಂಭಾಗ ಹಾಗೂ ಕೆ.ಆರ್.ಸರ್ಕಲ್ ಬಳಿ ಪೊಲೀಸರು ಬಿಗಿ ಭದ್ರತೆ ವಹಿಸಿದ್ದರು. ಸ್ಥಳದಲ್ಲಿ ಮೂವರು ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತರು, ಕೆಎಸ್‍ಆರ್‍ಪಿ ತುಕಡಿಗಳು ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆ ವಹಿಸಿದ್ದರು.

ವೈದ್ಯರಿಗೆ ಹೇಗೆ ರಕ್ಷಣಾ ಕಾನೂನು ತರಲಾಗಿದೆಯೋ ಅದೇ ರೀತಿ ವಕೀಲರಿಗೂ ಪ್ರತ್ಯೇಕ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕೆಂದು ವಕೀಲರು ಒತ್ತಾಯಿಸಿದರು. ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ, ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿರುವುದನ್ನ ತಡೆಗಟ್ಟಲು ಪ್ರತ್ಯೇಕ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ವಕೀಲರ ಸಂಘ ಈ ಹಿಂದೆಯೂ ಪ್ರತಿಭಟನೆ ನಡೆಸಿತ್ತು.

Similar News