ತೆಲಂಗಾಣ:‌ ತರಗತಿ ಕೊಠಡಿಯಲ್ಲಿ ಇನ್ನೋರ್ವ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Update: 2023-03-01 18:31 GMT

ಹೈದರಾಬಾದ್, ಮಾ. 1: ಇಲ್ಲಿನ ಖಾಸಗಿ ಕಾಲೇಜೊಂದರ 16 ವರ್ಷದ ವಿದ್ಯಾರ್ಥಿ ತರಗತಿ ಕೊಠಡಿಯಲ್ಲಿ ಮಂಗಳವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ತೆಲಂಗಾಣದಲ್ಲಿ ಕಳೆದ ಕೆಲವು ದಿನಗಳಲ್ಲಿ ವರದಿಯಾಗುತ್ತಿರುವ ಮೂರನೇ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಇದಾಗಿದೆ. ಕಾಲೇಜಿನ ಆಡಳಿತ ಮಂಡಳಿ ಹಾಗೂ ಬೋಧಕ ವರ್ಗ ಕಿರುಕುಳ ನೀಡಿರುವುದೇ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಕುಟುಂಬ ಆರೋಪಿಸಿದ ಹೊರತಾಗಿಯೂ ಪೊಲೀಸರು ಇದು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. 

ಈತ ತೆಲಂಗಾಣದ ರಾಜಧಾನಿಯ ಸಮೀಪದ ನರ್ಸಿಂಗಿಯಲ್ಲಿರುವ ಖಾಸಗಿ ಕಾಲೇಜಿನ 11ನೇ ತರಗತಿ ವಿದ್ಯಾರ್ಥಿ. ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯನ್ನು  ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆತ  ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. 
ಬಾಲಕನ ತಂದೆ ಮಂಗಳವಾರ ಸಂಜೆ ಪೊಲೀಸರಿಗೆ ದೂರು ಸಲ್ಲಿಸಿ, ಕಲಿಕೆಯಲ್ಲಿ ಹಿಂದುಳಿದಿರುವ ಕಾರಣಕ್ಕೆ ಇಬ್ಬರು ಅಧ್ಯಾಪಕರು ಹಾಗೂ ವಾರ್ಡನ್ ತನ್ನ ಪುತ್ರನಿಗೆ ನಿಂದಿಸಿದ್ದಾರೆ ಹಾಗೂ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿ ಮಾನಸಿಕ ಕಿರುಕುಳ ನೀಡುತ್ತಿದೆ ಹಾಗೂ ವಿದ್ಯಾರ್ಥಿಯ ಸಾವಿಗೆ ಅದು ಜವಾಬ್ದಾರಿ ಎಂದು ಆರೋಪಿಸಿ ವಿದ್ಯಾರ್ಥಿಯ  ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ಹಲವು ವಿದ್ಯಾರ್ಥಿ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದವು.

Similar News