×
Ad

ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ: ಸಿದ್ದರಾಮಯ್ಯ

ಡಿಕೆಶಿಗೂ ಆಸೆ ಇದ್ದರೆ ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಮಾಜಿ ಸಿಎಂ

Update: 2023-03-03 18:39 IST

ಬೆಳಗಾವಿ,: ‘ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಹೌದು, ಹಾಗೆಯೇ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೂ ಸಿಎಂ ಆಗುವ ಆಸೆ ಇದ್ದರೆ ಅದರಲ್ಲಿ ತಪ್ಪೇನು? ಅಂತಿಮವಾಗಿ ಗೆದ್ದ ಶಾಸಕರು ಸಿಎಂ ಆಯ್ಕೆ ಮಾಡುವುದು. ಮುಖ್ಯಮಂತ್ರಿ ಹುದ್ದೆಯ ಆಸೆಯನ್ನೆ ಪಡಬೇಡಿ ಎನ್ನಲು ಇದು ಸರ್ವಾಧಿಕಾರಿ ವ್ಯವಸ್ಥೆಯೇ?’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.

ಶುಕ್ರವಾರ ನಗರದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಪ್ರಜಾಪ್ರಭುತ್ವ ಸಿದ್ಧಾಂತದ ಬಗ್ಗೆ ಜ್ಞಾನವೇ ಇಲ್ಲ, ಕಾರಣ ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಇಲ್ಲ. ಯಡಿಯೂರಪ್ಪರನ್ನು ಕಿತ್ತು ಬೊಮ್ಮಾಯಿಯನ್ನು ತಂದು ಕೂರಿಸಿದರು. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ, ಕಾಂಗ್ರೆಸ್‍ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಜಾತ್ಯತೀತತೆ ಇದೆ ಎಂದು ತಿರುಗೇಟು ನೀಡಿದರು.

‘ಶಾಸಕಿ ಲಕ್ಷ್ಮಿ ಹೆಬ್ಬಾಳ್‍ಕರ್ ಅವರ ಅಧ್ಯಕ್ಷತೆಯಲ್ಲಿಯೇ ಸರಕಾರಿ ಕಾರ್ಯಕ್ರಮ ನಡೆಯಬೇಕಿತ್ತು. ಅವರನ್ನು ಸರಕಾರ ಗೌರವದಿಂದ ನಡೆಸಿಕೊಳ್ಳಬೇಕಿತ್ತು, ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದು ಸ್ಥಳೀಯ ಶಾಸಕರು, ಆದರೆ ಇಲ್ಲಿ ಸರಕಾರವೇ ಕಾರ್ಯಕ್ರಮ ಆಯೋಜನೆ ಮಾಡಿ ನೀವು ಬನ್ನಿ ಎಂದು ಕರೆದರೆ ಇದು ಶಿಷ್ಟಾಚಾರದ ಪ್ರಕಾರ ಸರಿಯಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಅಭೂತಪೂರ್ವ ಬೆಂಬಲ: 2ನೆ ಹಂತದ ಪ್ರಜಾಧ್ವನಿ ಯಾತ್ರೆ ಆರಂಭ ಮಾಡಿ ಇಂದಿಗೆ ತಿಂಗಳಾಗಿದೆ. ಫೆ.3ಕ್ಕೆ ಬಸವಕಲ್ಯಾಣದಿಂದ ಪ್ರಾರಂಭಿಸಿದ್ದೆ, ಈಗ 40ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ನಮ್ಮ ನಿರೀಕ್ಷೆಗೂ ಮೀರಿ ನಮ್ಮ ಯಾತ್ರೆಗೆ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಬಾರಿ ಮಹಿಳೆಯರು ಮತ್ತು ಯುವಕರು ಹೆಚ್ಚು ಜನ ನಮ್ಮ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಭೂತಪೂರ್ವವಾದ ಯಶಸ್ಸು ಕಾಣುತ್ತಿದೆ ಎಂದು ಹೇಳಿದರು.

ಪ್ರತೀ ಕ್ಷೇತ್ರದಲ್ಲಿ 10 ರಿಂದ 25 ಸಾವಿರದ ವರೆಗೆ ಜನ ಸೇರುತ್ತಿದ್ದಾರೆ. ಜನ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಯಾತ್ರೆಯ ಯಶಸ್ಸಿನಿಂದ ಬಿಜೆಪಿ ಪಕ್ಷ ಮುಂದಿನ ಚುನಾವಣೆಯಲ್ಲಿ ಧೂಳಿಪಟವಾಗುತ್ತದೆ, ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ಬಂದಿದೆ. ಇಂದು ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಬಿರುಗಾಳಿ ಬೀಸಲು ಆರಂಭವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಎಲ್ಲ ಸಚಿವರಿಗೆ, ನಿಗಮ ಮಂಡಳಿ ಅಧ್ಯಕ್ಷರಿಗೆ ಇಷ್ಟಿಷ್ಟು ಲಂಚ ಕಲೆಕ್ಷನ್ ಮಾಡಿಕೊಡಬೇಕೆಂದು ನಿಗದಿ ಮಾಡಿದ್ದಾರೆ. ಇದರ ಭಾಗವೇ ಮಾಡಾಳ್ ವಿರೂಪಾಕ್ಷಪ್ಪ ಪುತ್ರ 40ಲಕ್ಷ ರೂ.ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿರುವುದು. 6 ಕೋಟಿ ರೂ.ಹಣ ಬೇರೆ ಸಿಕ್ಕಿದೆ. ಎಲ್ಲಿಂದ ಬಂತು ಇಷ್ಟು ಹಣ? ಈ ಹಣ ಯಾರದ್ದು? ನನ್ನ ಪ್ರಕಾರ ಇದು ಲೂಟಿ ಮಾಡಿದ ಹಣ, ಲಂಚ ಪಡೆದಿರುವ ಹಣ. ವಿರೂಪಾಕ್ಷಪ್ಪ ಹಿರಿಯ ಶಾಸಕ, ಬಿಎಸ್‍ವೈ ಆಪ್ತ ವಲಯದಲ್ಲಿರುವ ವ್ಯಕ್ತಿ. ಚುನಾವಣೆಯನ್ನು ಹಣದಲ್ಲಿ ಗೆಲ್ಲಲು ಹೊರಟಿದ್ದಾರೆ’
-ಸಿದ್ದರಾಮಯ್ಯ, ವಿಪಕ್ಷ ನಾಯಕ

ಇದನ್ನೂ ಓದಿ: ಸ್ವಘೋಷಿತ ದೇವಮಾನವ ನಿತ್ಯಾನಂದನ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸದ ಸ್ಥಾನಮಾನವೇನು?

Similar News