ಲಂಚ ಪ್ರಕರಣ: ಮಂಡೆಕೋಲು ಗ್ರಾಮಕರಣಿಕ ಮಹೇಶ್‌ನಿಗೆ 4 ವರ್ಷ ಜೈಲು ಶಿಕ್ಷೆ

Update: 2023-03-03 17:34 GMT

ಸುಳ್ಯ: ಅಕ್ರಮ-ಸಕ್ರಮ ಸಂಬಂಧಿಸಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಗ್ರಾಮಕರಣಿಕರೊಬ್ಬರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿ ಮಂಡೆಕೋಲು ಗ್ರಾಮದ ಗ್ರಾಮ ಕರಣಿಕರಾಗಿದ್ದ ಎಸ್. ಮಹೇಶ್ ಗೆ 4 ವರ್ಷಗಳ ಸಾದಾ ಸಜೆ ಹಾಗೂ 70 ಸಾವಿರ ರೂ. ದಂಡ ವಿಧಿಸಿದೆ.

ಪ್ರಕರಣದ ಹಿನ್ನಲೆ

ಗೋಪಾಲಕೃಷ್ಣ ಮಂಡೆಕೋಲು ಎಂಬವರು ಅಕ್ರಮ-ಸಕ್ರಮದ ಆರ್ಜಿ ಸಲ್ಲಿಸಿದ್ದರು. ಅದರ ವಿಲೇವಾರಿಗೆ ಆರೋಪಿ ಗ್ರಾಮಕರಣಿಕ ಎಸ್.ಮಹೇಶ್ 60 ಸಾವಿರ ರೂ. ಲಂಚ ನೀಡಬೇಕು ಎಂದು ಒತ್ತಾಯಿಸಿದ್ದರು. 2016 ರಲ್ಲಿ 45 ಸಾವಿರ ರೂ. ಲಂಚದ ರೂಪದಲ್ಲಿ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹದಳ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಗುರುವಾರ ತೀರ್ಪು ನೀಡಿದ್ದಾರೆ. ಆರೋಪಿ ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 8 ತಿಂಗಳ ಕಾಲ ಸಾದಾ ಸಜೆಗೆ ಆದೇಶಿಸಿದ್ದಾರೆ.

ಪೊಲೀಸ್ ನಿರೀಕ್ಷಕ ದಿನಕರ ಶೆಟ್ಟಿ ಆರಂಭಿಸಿದ್ದ ತನಿಖೆಯನ್ನು ಬಳಕ ಯೋಗೀಶ್ ಕುಮಾರ್ ಮುಂದುವರಿಸಿ, ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನಿಪಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದರು.

Similar News