ಉಚಿತ ಶಿಕ್ಷಣ ಸೌಲಭ್ಯದ ಪ್ರವೇಶ ಪರೀಕ್ಷೆ: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ದಾಖಲಾತಿಗೆ ವಿದ್ಯಾರ್ಥಿ ಸಾಗರ

ಪರೀಕ್ಷೆ ಬರೆದ 13,617 ವಿದ್ಯಾರ್ಥಿಗಳು

Update: 2023-03-05 13:45 GMT

ಮೂಡುಬಿದಿರೆ, ಮಾ.5: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ರಾಜ್ಯದ ನಂ.1 ಕನ್ನಡ ಮಾಧ್ಯಮ ಶಾಲೆಯಾಗಿ ಗುರುತಿಸಿಕೊಂಡಿ ರುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2023-24ನೇ ಸಾಲಿನ 6ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆಯು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ರವಿವಾರ ನಡೆಯಿತು.

ರಾಜ್ಯಾದ್ಯಂತ 32 ಜಿಲ್ಲೆಗಳ 14,158 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ರವಿವಾರ 13,617 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 6ನೇ ತರಗತಿಗೆ 9,357, 7ನೇ ತರಗತಿಗೆ 1,553, 8ನೇ ತರಗತಿಗೆ 1,964 ಹಾಗೂ 9ನೇ ತರಗತಿಗೆ 743 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದರು. ಬೆಳಗಾವಿಯಿಂದ 4,941, ಬಾಗಲಕೋಟೆ 2,210, ವಿಜಯಪುರದಿಂದ 1,255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.

ಪ್ರವೇಶ ಪರೀಕ್ಷೆಯು ವಿದ್ಯಾರ್ಥಿಗಳು ಪ್ರಸ್ತುತ ಓದುತ್ತಿರುವ ಪಠ್ಯ ವಿಷಯಗಳಿಗೆ ಸಂಬಂಧಿಸಿದ ಹಾಗೂ ತಾರ್ಕಿಕ ಸಾಮಾರ್ಥ್ಯ ಆಧಾರಿತ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿತ್ತು. ಪರೀಕ್ಷೆಯಲ್ಲಿ ನಕಲು ತಡೆಗಟ್ಟುವ ಉದ್ದೇಶದಿಂದ  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಮಾದರಿಯಲ್ಲೇ ಎಬಿಸಿಡಿ ಸೀರಿಸ್ ಪ್ರಶ್ನೆ ಪತ್ರಿಕೆಗಳು ಹಾಗೂ ಉತ್ತರ ನಮೂದಿಸಲು ಒಎಂಆರ್ ಶೀಟ್ ಒದಗಿಸಲಾಗಿತ್ತು.

26,000ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಳ್ವಾಸ್ ಕ್ಯಾಂಪಸ್‌ನಲ್ಲಿ ಕಾಣಿಸಿದ್ದರೂ ತುಂಬಾ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆಯ ವತಿಯಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸತತ 6 ವರ್ಷಗಳಿಂದ ರಾಜ್ಯದಲ್ಲಿರುವ 15,000ಕ್ಕೂ ಅಧಿಕ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳ ಪೈಕಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಶಾಲಾ ವಿಶ್ಲೇಷಣೆ ಮತ್ತು ಮೌಲ್ಯಾಂಕನದ ಆಧಾರದ ಮೇಲೆ ನಂ. 1 ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕಳೆದ ಸಾಲಿನಲ್ಲಿ 11,500 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು, ಆಯ್ದ 310 ವಿದ್ಯಾರ್ಥಿಗಳಿಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆಯಲು ಅವಕಾಶ ಲಭಿಸಿತ್ತು.

ಕನ್ನಡ ಮಾಧ್ಯಮದ ಉಚಿತ ಶಿಕ್ಷಣ ಸೌಲಭ್ಯದಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ, ವಿದ್ಯಾರ್ಥಿ ನಿಲಯ, ಪಠ್ಯಪುಸ್ತಕ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಶಾಲಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಸ್ಪರ್ಧಾತ್ಮಕವಾದ ಬುದ್ಧಿಮತ್ತೆ ಜತೆಗೆ ಸುಸಂಸ್ಕೃತವಾದ ಮನಸ್ಸನ್ನು ಕಟ್ಟುವ ವಿವಿಧ ಚಟುವಟಿಕೆಗಳನ್ನು ಕಲಿಸಲಾಗುತ್ತದೆ.

ಸದ್ಯ ಕನ್ನಡ ಮಾಧ್ಯಮ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ 600ಕ್ಕೂ ಅಧಿಕ ಮಕ್ಕಳಿದ್ದು, ಉಚಿತ ವಸತಿ, ಊಟ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ವಾರ್ಷಿಕ ಓರ್ವ ವಿದ್ಯಾರ್ಥಿಗೆ ಸಂಸ್ಥೆಯ ವತಿಯಿಂದ 1 ಲಕ್ಷ ರೂ. ವ್ಯಯಿಸಲಾಗುತ್ತಿದ್ದು, 6ರಿಂದ 7 ಕೋ.ರೂ.ನಷ್ಟು ಹಣವನ್ನು ಸಂಸ್ಥೆಯು ಖರ್ಚು ಮಾಡುತ್ತಿದೆ.

ಪರೀಕ್ಷೆಗಳನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದ ಪರೀಕ್ಷೆಯಲ್ಲಿ ಆಯ್ಕೆ ಆದವರಿಗೆ ಮಾತ್ರವೇ ಎರಡನೇ ಹಂತದಲ್ಲಿ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ದಾಖಲಾತಿ ಪ್ರಕ್ರಿಯೆ ಮಾಡಲಾಗುತ್ತದೆ. ಶೈಕ್ಷಣಿಕ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಾಗೂ ಸಮಾಜದಲ್ಲಿ ಹಿಂದುಳಿದ ವರ್ಗ, ಸಿದ್ಧಿ, ಕೊರಗ, ಹಕ್ಕಿ-ಪಿಕ್ಕಿ ಮಲೆ ಕುಡಿಯ, ಜನಾಂಗದವರಿಗೆ, ಗಡಿನಾಡು, ಮಲ್ಲಕಂಬ ಪಟುಗಳಿಗೆ ಹಾಗೂ ಇತರ ಕ್ರೀಡಾ ಸಾಧಕರಿಗೆ ಆದ್ಯತೆ ನೀಡಲಾಗುತ್ತದೆ.

ಒಂದು ಆದರ್ಶವಾದ ಕನ್ನಡ ಮಾಧ್ಯಮ ಶಾಲೆಯನ್ನು ಕಟ್ಟಿ ಬೆಳೆಸಿದರೆ ಹೇಗೆ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆಯಬಹುದು ಎಂಬುದಕ್ಕೆ ಆಳ್ವಾಸ್ ಪ್ರತ್ಯಕ್ಷ ಸಾಕ್ಷಿಯಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯು ಕನ್ನಡ ಮಾಧ್ಯಮ ಶಾಲೆಯ ಗುಣಮಟ್ಟವನ್ನು ಹೆಚ್ಚಿಸಿ ಪ್ರೋತ್ಸಾಹಿಸುವ ಕೈಂಕರ್ಯವನ್ನು ಕಳೆದ ಹಲವು ವರ್ಷಗಳಿಂದ ನಡೆಸುತ್ತ ಬಂದಿವೆ. ಆಳ್ವಾಸ್‌ನ ಈ ಮಹಾತ್ಕಾರ‌್ಯದಲ್ಲಿ ಸಮಾಜದ ಶ್ರೀಮಂತ ವರ್ಗ, ಉದ್ಯಮಿಗಳು, ಸಂಘ ಸಂಸ್ಥೆಗಳು, ವಾಣಿಜ್ಯೋದ್ಯಮಿಗಳು, ಆಳ್ವಾಸ್‌ನೊಂದಿಗೆ ಕೈಜೋಡಿಸಬೇಕು. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ದಿನದಿಂದ ದಿನಕ್ಕೆ ನಶಿಸುತ್ತಿದ್ದರೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪ್ರವೇಶಾತಿಗೆ ಸಾಗರೋಪದಿಯಲ್ಲಿ ಆಕಾಂಕ್ಷಿಗಳು ಹರಿದು ಬರುತ್ತಿರುವುದು ಗಮನಾರ್ಹವಾಗಿದೆ. ಆ ಹಿನ್ನಲೆಯಲ್ಲಿ ಸರಕಾರ ಕನ್ನಡ ಮಾಧ್ಯಮ ಶಾಲೆಯನ್ನು ಹೇಗೆ ಮಾದರಿಯಾಗಿ ಕಟ್ಟಬೇಕು ಎಂಬುದನ್ನು ಆಳ್ವಾಸ್‌ನ ಕ್ರಮವನ್ನು ಪಾಲಿಸಿದರೆ ಉತ್ತಮ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅಭಿಪ್ರಾಯಪಟ್ಟಿದ್ದಾರೆ.

Similar News