2ನೇ ದಿನಕ್ಕೆ ಕಾಲಿಟ್ಟ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಧರಣಿ: ತಲೆ ಬೋಳಿಸಿಕೊಂಡು ವಿನೂತನ ಪ್ರತಿಭಟನೆ

Update: 2023-03-14 16:47 GMT

ಬೆಂಗಳೂರು, ಮಾ.14: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರರನ್ನು ನೇರಪಾವತಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟವಧಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹದಿನಾರು ಮಂದಿ ಹೊರಗುತ್ತಿಗೆ ನೌಕರರು ಮಂಗಳವಾರದಂದು ತಲೆ ಬೋಳಿಸಿಕೊಂಡು ತಮ್ಮ ಪಾಲಿಗೆ ರಾಜ್ಯ ಸರಕಾರ ಸತ್ತಿದೆಯೆಂದು ಘೋಷಿಸಿದರು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿರುವ ಸರಕಾರ ಪೌರಕಾರ್ಮಿಕರೊಂದಿಗೆ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು, ನೀರುಸರಬರಾಜು ಸಹಾಯಕರು ಲೋಡರ್ಸ್ ಕ್ಲೀನರ್ಸ್, ಹೆಲ್ಪರ್ಸ್‍ಗಳು, ಡಾಟ ಆಪರೇಟರುಗಳು ಸ್ಯಾನಿಟರಿ ಸೂಪರ್ ವೈಸರುಗಳು ಸೇರಿದಂತೆ 15ಸಾವಿರಕ್ಕು ಹೆಚ್ಚು ನೌಕರರನ್ನು ಗುತ್ತಿಗೆಯಲ್ಲಿ ಉಳಿಸಿ ತಾರತಮ್ಯ ಎಸಗಿದೆ ಎಂದು ಪ್ರತಿಭನಾಕಾರರು ಆಗ್ರಹಿಸಿದರು. 
2022ರಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಸಭೆಯ ತೀರ್ಮಾನದಂತೆ ಘನ ತ್ಯಾಜ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲರನ್ನು ಏಕಕಾಲಕ್ಕೆ ಗುತ್ತಿಗೆ ಪದ್ದತಿ ಬದಲು ನೇರಪಾವತಿಗೆ ತರಬೇಕು. 1964ರ ಪೌರಾಡಳಿತ ಕಾಯ್ದೆ ಪ್ರಕಾರ ಇವರನ್ಮು ಪೌರಕಾರ್ಮಿಕರೆಂದು ಒಪ್ಪಿರುವುದರಿಂದ ನೇಮಕಾತಿಯಲ್ಲಿ ಇವರಿಗೂ ಅವಕಾಶ ಕಲ್ಪಿಸಬೇಕು ಎಂದು ಪ್ರತಿಭನಾಕಾರರು ಮನವಿ ಮಾಡಿದರು.

ಮಾಸಿಕವಾಗಿ 2 ಸಾವಿರ ರೂ. ಸಂಕಷ್ಟ ಭತ್ಯೆಯನ್ನು ಈ ಎಲ್ಲ ಹೊರಗುತ್ತಿಗೆ ನೌಕರರಿಗೂ ವಿಸ್ತರಿಸಬೇಕು. 7ನೆ ವೇತನ ಆಯೋಗದ ಮಧ್ಯಂತರ ಆದೇಶವನ್ನು ನೇರಪಾವತಿ ಹಾಗೂ ಹೊರಗುತ್ತಿಗೆ ನೌಕರರಿಗೂ ಅನ್ವಯಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಕಲ್ಬುರ್ಗಿ ವಿಭಾಗ ಸಂಚಾಲಕ ಸಿದ್ರಾಮ ಪಾಟೀಲ, ಪುಟ್ಟಸ್ವಾಮಿ, ಅಣ್ಣಪ್ಪ ಕಾರೇಕಾಡು, ಧರ್ಮರಾಜ್, ನವೀನ್, ಎಂ.ಎನ್. ಚಂದ್ರು ಸೇರಿದಂತೆ ಸಾವಿರಾರು ಹೊರಗುತ್ತಿಗೆ ನೌಕರರು ಭಾಗಿಯಾಗಿದ್ದರು.

Similar News