ಸಾಲಿಡಾರಿಟಿ ಕರ್ನಾಟಕದ ‘ಯುವ ಪ್ರಣಾಳಿಕೆ-2023’ ಯುವ ಸಮುದಾಯವನ್ನು ಸ್ವಾವಲಂಬಿಯಾಗಿಸುತ್ತದೆ: ಲಬೀದ್ ಶಾಫಿ

Update: 2023-03-16 17:31 GMT

ಬೆಂಗಳೂರು, ಮಾ.16: ಯುವ ಸಮುದಾಯವನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಯುವಜನತೆಯನ್ನು ಆರ್ಥಿಕ ಸಬಲೀಕರಣಗೊಳಿಸಲು ಶಿಕ್ಷಣ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತಹ ಯೋಜನೆಗಳನ್ನು ರೂಪಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್‍ಮೆಂಟ್ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಯ ಅಧ್ಯಕ್ಷ ಲಬೀದ್ ಶಾಫಿ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಯುವಜನತೆಯ ಸಬಲೀಕರಣಕ್ಕೆ ರಾಜಕೀಯ ಪಕ್ಷಗಳ ಗಮನ ಸೆಳೆಯಲು ಹಲವಾರು ಬೇಡಿಕೆಗಳ ‘ಯುವ ಪ್ರಣಾಳಿಕೆ-2023’ ಅನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಲಬೀದ್ ಶಾಫಿ, ಯುವ ಸಬಲೀಕರಣದಲ್ಲಿ ಉದ್ಯೋಗ ಪ್ರಮುಖವಾಗಿದ್ದು, ಪ್ರಸಕ್ತ ದಿನಗಳಲ್ಲಿ ಉದ್ಯೋಗವಿಲ್ಲದೆ ಯುವಜನತೆ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಅಲ್ಲದೆ ಸರಕಾರಿ ಹುದ್ದೆಗಳ ನೇಮಕಾತಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದಾಗಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರಕಾರಿ ಕಚೇರಿಗಳಲ್ಲಿ 2.52ಲಕ್ಷ ಉದ್ಯೋಗಗಳು, ಸರಕಾರಿ ಶಾಲಾ, ಕಾಲೇಜುಗಳಲ್ಲಿ 53,700 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿದ್ದು, ಸರಕಾರ ಪಾರದರ್ಶಕವಾಗಿ ಈ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದರು.

ಸರಕಾರ ಬಹುರಾಷ್ಟ್ರೀಯ ಹಾಗೂ ಕಾರ್ಪೋರೇಟ್ ಕಂಪೆನಿಗಳಲ್ಲಿ ಸ್ಥಳೀಯ ಯುವಕ, ಯುವತಿಯರಿಗೆ ಶೇ.50ರವರೆಗೆ ವಿವಿಧ ಹುದ್ದೆಗಳಲ್ಲಿ ಅವಕಾಶ ನೀಡುವಂತೆ ನೀತಿ ರೂಪಸಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಬೇಕು. ಜಿಲ್ಲೆಗಳಲ್ಲಿ ಕೌಶಲ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು. 

ಮಿಲಿಟರಿ, ಪೊಲೀಸ್ ಇಲಾಖೆಗಳಲ್ಲಿ ಅಲ್ಪಸಂಖ್ಯಾತ ಮತ್ತು ತಳ ಸಮುದಾಯಗಳ ಯುವಕರಿಗೆ ವಿಶೇಷ ಮೀಸಲಾತಿಯ ಮೂಲಕ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲ ಖಾಸಗಿ ಮತ್ತು ಸರಕಾರಿ ಕಂಪೆನಿಗಳಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳೊಂದಿಗೆ ಉದ್ಯೋಗ ಆಕಾಂಕ್ಷಿಗಳನ್ನು ಸಂಪರ್ಕಿಸಲು ರಾಜ್ಯ ಮಟ್ಟದ ಸರಕಾರಿ ಉದ್ಯೋಗ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ತಿಳಿಸಿದರು.

ಹಿಂದುಳಿದ ಸಮುದಾಯಗಳು ಮತ್ತು ಅಲ್ಪಸಂಖ್ಯಾತರ ಯುವಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು 3ರಿಂದ 5 ವರ್ಷದ ವರೆಗೆ 25ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವ ವಿಶೇಷ ಯೋಜನೆ ರೂಪಿಸಬೇಕು. ಎಲ್ಲ ಸರಕಾರಿ ಏಜೆನ್ಸಿಗಳಿಂದ ಬಾಕಿ ಉಳಿದಿರುವ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಮುಂದಿನ 6 ತಿಂಗಳೊಳಗೆ ನಡೆಸಬೇಕು. ಸರಕಾರಿ-ಖಾಸಗಿ ವಲಯದಲ್ಲಿನ ನೇಮಕಾತಿ ಹಗರಣಗಳನ್ನು ಪರಿಶೀಲಿಸಲು, ನ್ಯಾಯ ಒದಗಿಸಲು ವಿಶೇಷ ತ್ವರಿತ ನ್ಯಾಯಾಲಯಗಳನ್ನು ರಚಿಸಬೇಕು ಎಂದು ಲಬೀದ್ ಶಾಫಿ ಹೇಳಿದರು.

ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಿಹಾನ್ ಮಾತನಾಡಿ, ಯುವಜನತೆಗೆ ಕ್ರೀಡೆಯಲ್ಲಿ ಉತ್ತೇಜನ ನೀಡಲು ಪ್ರತಿಯೊಂದು ಕ್ಷೇತ್ರದಲ್ಲೂ ಸಾರ್ವಜನಿಕ ಕ್ರೀಡಾಂಗಣ, ಈಜುಕೊಳ, ಪಾರ್ಕ್‍ಗಳನ್ನು ನಿರ್ಮಿಸಬೇಕು. ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಹಾಗೂ ಪ್ರಾದೇಶಿಕ ಕ್ರೀಡೆಗಳನ್ನು ಉಳಿಸಲು ವಿಶೇಷ ನಿಗಮಗಳನ್ನು ಸ್ಥಾಪಿಸಬೇಕು. ಗ್ರಾಮಗಳಲ್ಲಿ ಯುವಕ ಮಂಡಲಗಳನ್ನು ಸ್ಥಾಪಿಸಬೇಕು. ವಿಕಲಚೇತನ ಕ್ರೀಡಾಪಟುಗಳಿಗೆ ಮಾಸಿಕ ವೇತನ ನೀಡಬೇಕು ಎಂದು ತಿಳಿಸಿದರು.

ಯುವಕ, ಯುವತಿಯರಿಗಾಗಿ ಪ್ರತಿಯೊಂದು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಕೌನ್ಸೆಲಿಂಗ್ ಸೆಂಟರ್ ತೆರೆಯಬೇಕು. ಮಾದಕ ವ್ಯಸನಕ್ಕೆ ತುತ್ತಾಗಿರುವರನ್ನು ಸರಿದಾರಿಗೆ ತರಲು ಪ್ರತಿಯೊಂದು ಕ್ಷೇತ್ರದಲ್ಲಿ ಪುನರ್ವಸತಿ ಕೇಂದ್ರಗಳನ್ನು ಡಿ-ಅಡಿಕ್ಷನ್ ಸೆಂಟರ್ ಮತ್ತು ಆಪ್ತ ಸಮಾಲೋಚನಾ ಕೇಂದ್ರಗಳನ್ನು ತೆರೆಯಬೇಕು. ಕೃಷಿಯ ಕಡೆಗೆ ಯುವಕರು ಹೆಚ್ಚಾಗಿ ಆಕರ್ಷಿಸಲು ವಿಶೇಷ ಅನುದಾನದ ಮೂಲಕ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು. 

ಮಣ್ಣಿನ ಗುಣಮಟ್ಟ, ನೀರಿನ ಪ್ರಮಾಣ, ಬಿತ್ತನೆ ಇತ್ಯಾದಿಗಳ ಬಗ್ಗೆ ವಿವರಿಸುವ ಮಾಹಿತಿ ಕೇಂದ್ರಗಳನ್ನು ತೆರೆಯಬೇಕು ಮತ್ತು ವಾರ್ಡ್ ಮಟ್ಟದಲ್ಲಿ ಕೃಷಿ ಕಾರ್ಯಾಗಾರವನ್ನು ಆಯೋಜಿಸಬೇಕು. ತೋಟಗಾರಿಕೆ ಇಲಾಖೆಯಲ್ಲಿ ಖಾಲಿಯಿರುವ 40ರಷ್ಟು ಉದ್ಯೋಗವನ್ನು ಆದಷ್ಟು ಬೇಗ ಭರ್ತಿ ಮಾಡಬೇಕು ಎಂದು ಅವರು ಹೇಳಿದರು.

ಯುವಕರನ್ನು ಕೋಮುವಾದಿ ಚಿಂತನೆಗಳು ಮತ್ತು ಭಯೋತ್ಪಾದನೆಗೆ ಪ್ರೇರೇಪಿಸುವ ಭಾಷಣ, ಹೇಳಿಕೆಯ ಬಗ್ಗೆ ತೀವ್ರ ನಿಗಾ ವಹಿಸಬೇಕು. ನೈತಿಕ ಪೊಲೀಸ್ ಗಿರಿಯ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಯುವ ಸಬಲೀಕರಣ ಮತ್ತು ಕ್ಷೇತ್ರಕ್ಕೆ ಬಜೆಟ್‍ನಲ್ಲಿ ಶೇ.18ರಷ್ಟು ಮೀಸಲಿಡಬೇಕು ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಬೆಂಗಳೂರು ನಗರ ಅಧ್ಯಕ್ಷ ಮಾಝ್ ಮನಿಯಾರ್, ಪ್ರಣಾಳಿಕೆ ಸಮಿತಿಯ ಸಂಚಾಲಕ ಅಶೀರುದ್ದೀನ್ ಹಾಗೂ ಕಲಾ ಸಾಹಿತ್ಯ ಸಂಘದ ಸಂಚಾಲಕ ಇಮ್ತಿಯಾಝ್ ಬೇಗ್ ಉಪಸ್ಥಿತರಿದ್ದರು.

Similar News