ಅಂಗಾಂಗ ದಾನ ಅತ್ಯಂತ ಪವಿತ್ರ ಕಾರ್ಯ: ನ್ಯಾ. ಸಂತೋಷ್ ಹೆಗ್ಡೆ

Update: 2023-03-17 16:45 GMT

ಬೆಂಗಳೂರು: ‘ಅಂಗಾಂಗ ದಾನವು ಪ್ರಪಂಚದ ಯಾವುದೇ ಕಾರ್ಯಕ್ಕಿಂತ ಅತ್ಯಂತ ಪವಿತ್ರವಾದದ್ದು’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನೆಫ್ರಾಲಜಿ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಜಂಟಿ ಆಶ್ರಯದಲ್ಲಿ ಅಂಗದಾನದ ಮಿಥ್ಯೆಗಳು ಮತ್ತು ಮೂಢನಂಬಿಕೆಗಳು ಕುರಿತು ‘ಎ ಗಿಫ್ಟ್ ಲೈಕ್ ನೋ ಅದರ್’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಜೀವನದಲ್ಲಿ ಏನು ಬೇಕೋ ಅದನ್ನು ಮಾಡಿಕೊಳ್ಳಿ, ಆದರೆ, ಎಲ್ಲಕ್ಕಿಂತ ಮೊದಲು ಮಾನವನಾಗಿ. ಮಾನವತಾವಾದವನ್ನು ಮೈಗೂಡಿಸಿಕೊಂಡರೆ ಮಾತ್ರ ಮಾನವನಾಗುವಿರಿ’ ಎಂದರು.

‘ಮಾನವತಾವಾದದ ಪ್ರಮುಖ ಗುಣವೆಂದರೆ ಅಂಗಾಂಗಗಳನ್ನು ದಾನ ಮಾಡುವ ಮನಸ್ಸು. ಅಂಗಾಂಗಗಳನ್ನು ಪಡೆದ ಕುಟುಂಬಗಳನ್ನು ನಾನು ನೋಡಿದ್ದೇನೆ. ಅವರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಹೀಗಾಗಿ ಎಲ್ಲರೂ ಅಂಗಾಂಗ ದಾನ ಮಾಡಲು ಮುಂದಾಗಬೇಕು’ ಎಂದು ಸಂತೋಷ್ ಹೆಗ್ಡೆ ಕರೆ ನೀಡಿದರು.

ಸಂಕಿರಣದಲ್ಲಿ ಭಾಗವಹಿಸಿದ್ದ ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮಿ ಮಾತನಾಡಿ, ‘ಪ್ರಾಚೀನ ಕಾಲದಿಂದಲೂ ಅಂಗಾಂಗ ದಾನದ ಇತಿಹಾಸವಿದೆ. ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ ಮತ್ತು ಯಾವುದೇ ಧರ್ಮವು ಅಂಗಾಂಗ ದಾನವನ್ನು ಪ್ರತಿಬಂಧಿಸುವುದಿಲ್ಲ ಎಂಬುದಕ್ಕೆ ಆ ಕಥೆಗಳು ಉದಾಹರಣೆ. ಶೀಘ್ರದಲ್ಲೇ ಅಗತ್ಯವಿರುವ ಎಲ್ಲರಿಗೂ ಅಂಗಾಂಗ ಸಿಗುವಂತಾಗುತ್ತದೆ ಎಂದು ನಾನು ಆಶಿಸುತ್ತೇನೆ. ಅಂಗವನ್ನು ಸ್ವೀಕರಿಸುವವರಿಗೆ ಪುನರ್ ಜೀವನ ದೊರೆಯುತ್ತದೆ’ ಎಂದು ಹೇಳಿದರು.

ಖ್ಯಾತ ವೈದ್ಯ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ‘ಒಬ್ಬ ಬ್ರೇನ್ ಡೆಡ್ ವ್ಯಕ್ತಿ 8 ಜನರಿಗೆ ಜೀವ ನೀಡಬಹುದು. ಇದು ಅಂತಹ ವ್ಯಕ್ತಿ ನೀಡಬಹುದಾದ ಅದ್ಭುತ ಕೊಡುಗೆ. ದುರದೃಷ್ಟವಶಾತ್ 1.5 ಶತಕೋಟಿ ಇರುವ ದೇಶದಲ್ಲಿ ಅಂಗಾಂಗ ದಾನ ಪ್ರಮಾಣವು ತುಂಬಾ ಕಡಿಮೆ ಇದೆ. ಅಂಗಾಂಗ ಸ್ವೀಕರಿಸುವ ಹೆಚ್ಚಿನವರು ಯುವಕರೇ ಆಗಿದ್ದಾರೆ. ಪ್ರತಿಯೊಬ್ಬರಿಗೂ ಸಂದೇಶವನ್ನು ಹರಡಲು ನಾನು ಮುಂದಾಗುತ್ತೇನೆ ಮತ್ತು ಈ ಕುರಿತು ಇರುವ ಮೂಢ ನಂಬಿಕೆಗಳು ಕೊನೆಗೊಳ್ಳಲಿ’ ಎಂದರು.

ಎಚ್‍ಬಿಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಮುಹಮ್ಮದ್ ತಾಹಾ ಮತೀನ್ ಮಾತನಾಡಿ, ಅಂಗಾಂಗವನ್ನು ಪಡೆಯಬಹುದಾಗಿದ್ದರೆ, ದಾನವೂ ಮಾಡಬಹುದು. ಅಂಗಾಂಗ ದಾನವನ್ನು ಮುಸ್ಲಿಮ್ ಸಮುದಾಯದಲ್ಲಿನ ಬಹುಪಾಲು ವಿದ್ವಾಂಸರು, ಧಾರ್ಮಿಕ ಮುಖಂಡರು ಸಮರ್ಥಿಸಿಕೊಂಡಿದ್ದಾರೆ. ಸೌದಿ ಅರೇಬಿಯಾ, ಉತ್ತರ ಅಮೆರಿಕಾ ಫಿಕ್ ಕೌನ್ಸಿಲ್, ಭಾರತದ ಫಿಕ್ಸ್ ಕೌನ್ಸಿಲ್ ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದೆ ಎಂದರು.

ಆದರೆ, ಅಂಗಾಂಗವನ್ನು ದಾನವಾಗಿ ನೀಡಬೇಕೆ ಹೊರತು ಮಾರಾಟ ಮಾಡುವಂತಿಲ್ಲ. ಏಕೆಂದರೆ ಮಾನವನು ತನ್ನ ದೇಹದ ಮಾಲಕನಲ್ಲ. ಅದು ಅಲ್ಲಾಹ್‍ನ ಕಡೆಯಿಂದ ಆತನಿಗೆ ನೀಡಿರುವಂತದ್ದು. ಅಂಗಾಂಗ ದಾನದ ಬಗ್ಗೆ ಇರುವ ಅಪನಂಬಿಕೆಗಳನ್ನು ದೂರ ಮಾಡುವಲ್ಲಿ ಈ ವಿಚಾರ ಸಂಕಿರಣ ಸಹಕಾರಿಯಾಗಿದೆ ಎಂದು ಅವರು ಹೇಳಿದರು. 

ರೆ.ಫಾ.ವಿಕ್ಟರ್ ಲೋಬೋ, ಮೌಲಾನ ಸೈಯದ್ ಶಬ್ಬೀರ್ ನದ್ವಿ, ಐಎಎಸ್ ಅಧಿಕಾರಿ ರಣದೀಪ್, ಎನ್‍ಎಕೆ ಸಂಚಾಲಕ ಡಾ.ಇಶ್ತಿಯಾಕ್ ಅಹ್ಮದ್, ಸಹ ಸಂಚಾಲಕ ಡಾ. ಲಿಮೇಶ್ ಎಂ., ಎಸ್‍ಒಟಿಒ ಸದಸ್ಯ ಕಾರ್ಯದರ್ಶಿ ಡಾ.ಎಂ.ಕಿರಣ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಅಂಗಾಂಗ ದಾನದ ವಿಷಯದಲ್ಲಿ ಇರುವ ಮಿಥ್ಯೆಗಳು ಮತ್ತು ಮೂಢನಂಬಿಕೆಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದ್ದು, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಂಗಾಂಗ ದಾನದ ಪ್ರಮಾಣ ಕಡಿಮೆಯಾಗಿದೆ. ಮೆದುಳಿನ ಸಾವಿನ(ಬ್ರೈನ್ ಡೆಡ್) ನಂತರ ಹೃದಯ, ಶ್ವಾಸಕೋಶ, ಯಕೃತ್, ಮೂತ್ರಪಿಂಡಗಳು, ಮೇದೋಜ್ಜೀರಕ ಗ್ರಂಥಿ, ಕರುಳು, ಕಾರ್ನಿಯಾ, ಚರ್ಮ, ಸ್ನಾಯುರಜ್ಜುಗಳು, ಕಾರ್ಟಿಲೆಜ್‍ಗಳು, ಹೃದಯ ಕವಾಟಗಳು ಮತ್ತು ಮೂಳೆಗಳಂತಹ ಪ್ರಮುಖ ಅಂಗಗಳ ದಾನವು ಇನ್ನೊಬ್ಬರ ಜೀವ ಉಳಿಸಲಿವೆ. ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಅನುಸರಿಸಿ ವೈದ್ಯಕೀಯ ವೃತ್ತಿಪರರು ಒಬ್ಬ ವ್ಯಕ್ತಿಯನ್ನು ಬ್ರೇನ್‍ಡೆಡ್ ಎಂದು ಘೋಷಿಸಿದ ನಂತರ ಅಂಗಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸಿ ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಲಾಗುತ್ತದೆ.

-ಡಾ.ಇಶ್ತಿಯಾಕ್ ಅಹ್ಮದ್, ಸಂಚಾಲಕ, ನೆಫ್ರಾಲಜಿ ಅಸೋಸಿಯೇಷನ್ ಆಫ್ ಕರ್ನಾಟಕ

Similar News