ಹೆಬ್ರಿ: ರಸ್ತೆ, ನೀರು ಸಹಿತ ಮೂಲಭೂತಸೌಕರ್ಯಕ್ಕಾಗಿ ಮತದಾನ ಬಹಿಷ್ಕರಿಸಲು ಕುಚ್ಚೂರು ಗ್ರಾಮಸ್ಥರ ನಿರ್ಧಾರ

Update: 2023-03-21 18:21 GMT

ಹೆಬ್ರಿ: ಹಲವು ವರ್ಷಗಳಿಂದ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ಹೆಬ್ರಿ ತಾಲ್ಲೂಕಿನ ಕುಚ್ಚೂರು ಗ್ರಾಮದ ಕುಚ್ಚೂರು ಮಾತ್ಕಲ್ಲು ಶಾಸ್ತ್ರಿನಗರ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಕುಚ್ಚೂರು ಗ್ರಾಮದ ಮಾತ್ಕಲ್ ರಸ್ತೆ ಬೇಡಿಕೆ ಸುಮಾರು 20 ವರ್ಷಗಳಾಗಿದ್ದು, 2019ರಲ್ಲಿ 1.5ಕೋಟಿ ಅನುದಾನ ಬಿಡುಗಡೆ, ಬಳಿಕ 2022ರಲ್ಲಿ 50ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಜನಪ್ರತಿನಿಧಿಗಳು ಸುಳ್ಳು ಹೇಳಿ ನಮ್ಮನ್ನು ಯಾಮಾರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕುಡಿಯುವ ನೀರಿನ ಯೋಜನೆಗೆ ಪೈಪ್ ಮಾತ್ರ ಅಳವಡಿಸಿದ್ದು ಅದರಲ್ಲಿ ನೀರು ಈವರೆಗೆ ಬಂದಿಲ್ಲ. ಕುಡಿಯುವ ನೀರಿನ ಯೋಜನೆಗೂ 2.17 ಕೋಟಿ ರೂ. ಹಣ ಬಿಡುಗಡೆ ಆಗಿದೆ ಎಂದು ಅವರೇ ಹೇಳುತ್ತಿದ್ದಾರೆ. ಆದರೆ ಕಾಮಗಾರಿ ನಡೆಸಿಲ್ಲ. ಇದರಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಗ್ರಾಮಸ್ಥ ರಾದ ಸುಧಾಕರ ಶೆಟ್ಟಿ ದೇವಳಬೈಲು ದೂರಿದ್ದಾರೆ.

ಸಚಿವ ಸುನಿಲ್ ಕುಮಾರ್ ಯಾವುದೇ ಅಭಿವೃದ್ಧಿ ಕೆಲಸ ಕುಚ್ಚೂರು ಪರಿಸರ ದಲ್ಲಿ ಮಾಡಿಲ್ಲ. 50 ಲಕ್ಷ ರೂ. ವೆಚ್ಚದಲ್ಲಿ ಡಾಂಬಾರು ರಸ್ತೆ ಮಾಡುತ್ತೇವೆ ಎಂದು ರಸ್ತೆ ಮಾಡಿಲ್ಲ. ಆದುದರಿಂದ ಕುಚ್ಚೂರು ಗ್ರಾಮಸ್ಥರೆಲ್ಲರೂ ಸೇರಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಸ್ಥಳೀಯ ಮುಖಂಡ ದೇವಳಬೈಲು ಸುಧಾಕರ ಶೆಟ್ಟಿ ಹೇಳಿದರು.

ಇದೇ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಸಾವುನೋವು ಹಲವು ಅವಘಡ ಕೂಡ ಸಂಭವಿಸಿದೆ. ನಿರಂತರವಾಗಿ ಶಾಸಕರು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ನಮ್ಮ ಕೆಲಸ ಮಾಡುತ್ತಿಲ್ಲ ಎಂದು ಸುಧಾಕರ ಶೆಟ್ಟಿ ದೇವಳಬೈಲು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 80 ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿದ್ದೇವೆ. ಕುಚ್ಚೂರು ಗ್ರಾಪಂ ನಲ್ಲಿ ಪಕ್ಷೇತರರ ಆಡಳಿತದಲ್ಲಿರುವುದರಿಂದ ಸಚಿವರು ಕುಚ್ಚೂರು ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು ಸಹಿತ ಯಾವೂದೇ ಅಭಿವೃದ್ಧಿ ಕೆಲಸಕ್ಕೂ ಅನುದಾನ ನೀಡದೆ ತಾರತಮ್ಯ ನಡೆಸುತ್ತಿದ್ದಾರೆ ಎಂದು ಹಿರಿಯರಾದ ಶಿವರಾಮ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ದೀಕ್ಷಿತ್ ನಾಯಕ್, ನಾಗರಾಜ ನಾಯ್ಕ್, ಸುಧೀರ ನಾಯಕ್, ವಿಶ್ವನಾಥ ದೇವಳಬೈಲು, ಮಹೇಶ ನಾಯ್ಕ್, ಪ್ರಸನ್ನ ಶೆಟ್ಟಿ, ಗ್ರಾಪಂ ಸದಸ್ಯೆ ಸುಜಾತ ಶೆಟ್ಟಿ, ಶ್ರೀಧರ ನಾಯ್ಕ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Similar News