ವೃತ್ತಿಪರ ಶಿಕ್ಷಣದಲ್ಲಿ ಬ್ಯಾರಿ ಭಾಷಿಕರಿಗೂ ಅವಕಾಶ: ಸರಕಾರದ ಆದೇಶ

ಅನುಕೂಲಗಳೇನು?

Update: 2023-03-30 11:00 GMT

ಬೆಂಗಳೂರು, ಮಾ.30: ರಾಜ್ಯದ ವೃತ್ತಿಪರ ಶಿಕ್ಷಣದಲ್ಲಿ ಬ್ಯಾರಿ ಭಾಷಿಕರಿಗೂ ಅವಕಾಶ ಕಲ್ಪಿಸಿ ರಾಜ್ಯ ಸರಕಾರವು ಮಾ.23ರಂದು ಆದೇಶ ಹೊರಡಿಸಿದೆ.

ವೃತ್ತಿಪರ ಶಿಕ್ಷಣದಲ್ಲಿ ಸರಕಾರಿ ಸೀಟುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ 2006ನೆ ಸಾಲಿನ ನಿಯಮಗಳಿಗೆ ತಿದ್ದುಪಡಿ ತಂದು ಬ್ಯಾರಿ ಭಾಷಿಕರಿಗೂ ಅವಕಾಶ ಕಲ್ಪಿಸಲಾಗಿದೆ. ವೃತ್ತಿಪರ ಶಿಕ್ಷಣದಲ್ಲಿ ಕನ್ನಡ, ತುಳು ಮತ್ತು ಕೊಡವ ಮಾತೃ ಭಾಷೆಯನ್ನು ಗಡಿನಾಡ ಮತ್ತು ಹೊರನಾಡ ಕನ್ನಡಿಗರೆಂದು ಪರಿಗಣಿಸಿದ ರೀತಿಯಲ್ಲಿ ಬ್ಯಾರಿ ಭಾಷಿಕರನ್ನು ಪರಿಗಣಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಸರಕಾರದ ಮುಂದಿತ್ತು.

ಅನುಕೂಲಗಳೇನು?:

ಗಡಿನಾಡು ಅಂದರೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ, ಮಂಜೇಶ್ವರ ತಾಲೂಕು, ಮಹಾರಾಷ್ಟ್ರದ ಕೋಲ್ಹಾಪುರ ತಾಲೂಕು, ಆಂಧ್ರಪ್ರದೇಶದ ಅದೋಣಿ ತಾಲೂಕು. ಇಲ್ಲಿ ವಾಸಿಸುವ ಬ್ಯಾರಿ ಭಾಷಿಕರು ಯಾವುದೇ ಷರತ್ತು ಇಲ್ಲದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ನಡೆಸುವ ವೃತ್ತಿಪರ ಶಿಕ್ಷಣದ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದು ಸರಕಾರಿ ಸೀಟು ಪಡೆಯಬಹುದು.

ಹೊರನಾಡು ಅಂದರೆ ಜಗತ್ತಿನ ಉಳಿದ ಭಾಗದಲ್ಲಿ ವಾಸಿಸುವ ಭ್ಯಾರಿ ಭಾಷಿಕರು( ತಂದೆ ಅಥವಾ ತಾಯಿ ಬ್ಯಾರಿ ಆಗಿದ್ದರೆ ಸಾಕು) ನೇರವಾಗಿ ಯಾವುದೇ ಷರತ್ತು ಇಲ್ಲದೆ ಪರೀಕ್ಷೆಗೆ ಹಾಜರಾಗಿ ಸೀಟು ಪಡೆಯಬಹುದು. 2023ನೇ ಸಾಲಿನ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಎ.5 ಕಡೆಯ ದಿನವಾಗಿದೆ.

ಹಿನ್ನೆಲೆ: 2019ರ ಫೆ.13ರಂದು ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರು ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ವೃತ್ತಿಪರ ಶಿಕ್ಷಣ ಕೋರ್ಸುಗಳಿಗೆ ನಡೆಸುವ ಪರೀಕ್ಷೆಯಲ್ಲಿ ಕರ್ನಾಟಕ ಮೂಲದ ಬ್ಯಾರಿ ಭಾಷೆಯನ್ನು ಮಾತನಾಡುವ ಹೊರನಾಡು, ಗಡಿನಾಡಿನಲ್ಲಿ ವಾಸಿಸುವ ಅರ್ಹ ವಿದ್ಯಾರ್ಥಿಗಳನ್ನು ಹೊರನಾಡು, ಗಡಿನಾಡು ಕನ್ನಡಿಗರೆಂದು ಪರಿಗಣಿಸುವಂತೆ’ ಕೋರಿದ್ದರು.

ಅದಕ್ಕೆ 2019ರ ಜೂ.13ರಂದು ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ, 2006ನೆ ಸಾಲಿನ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರಿ ಸೀಟುಗಳ ಮೂಲಕ ದಾಖಲಾತಿ ಪಡೆಯುವ ಅಭ್ಯರ್ಥಿಗಳ ಆಯ್ಕೆ ನಿಯಮಗಳ ಅನ್ವಯ ಗಡಿನಾಡು ಮತ್ತು ಹೊರನಾಡು ಭಾಗದಲ್ಲಿ ವಾಸಿಸುವ ತುಳು, ಕೊಡವ ಮತ್ತು ಕನ್ನಡ ಭಾಷೆ ಮಾತನಾಡುವ ಮತ್ತು ಕನ್ನಡ ಬರೆಯುವ ಜ್ಞಾನ ಹೊಂದಿರುವವರನ್ನು ಹೊರನಾಡು, ಗಡಿನಾಡು ಕನ್ನಡಿಗರೆಂದು ಪರಿಗಣಿಸಲು ಅವಕಾಶವಿದೆ. ಇಂತಹ ಅಭ್ಯರ್ಥಿಗಳು ಕರ್ನಾಟಕದ ಕೋಟಾದ ಅಡಿ ಸೀಟುಗಳನ್ನು ಪಡೆಯಲು ಅರ್ಹರಿರುತ್ತಾರೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಕರ್ನಾಟಕದಲ್ಲಿ ಉಳಿದ ಎಲ್ಲ ಭಾಷೆ ಮಾತನಾಡುವ ಅಭ್ಯರ್ಥಿಗಳು ಕರ್ನಾಟಕದಲ್ಲಿ 7 ವರ್ಷಗಳು ಅಭ್ಯಸಿಸಿದ್ದಲ್ಲಿ(ಎಸೆಸೆಲ್ಸಿ ಅಥವಾ ಪಿಯುಸಿ) ಅಂತಹ ಅಭ್ಯರ್ಥಿಗಳು ಕರ್ನಾಟಕದ ಕೋಟಾದ ಅಡಿ ಸೀಟು ಪಡೆಯಲು ಅರ್ಹರಿರುತ್ತಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಆಡಳಿತಾಧಿಕಾರಿ ತಿಳಿಸಿದ್ದಾರೆ.

2021ರ ಫೆ.4ರಂದು ದಿ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ಪರವಾಗಿ ಸಿದ್ದಿಕ್ ಬ್ಯಾರಿ, ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ವೃತ್ತಿಪರ ಶಿಕ್ಷಣದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹೊರನಾಡಿನ ಮತ್ತು ಗಡಿನಾಡಿನ ತುಳು, ಕೊಡವ ಭಾಷೆಗಳನ್ನು ಮಾತನಾಡುವ ಜನರನ್ನು ಹೊರನಾಡು, ಗಡಿನಾಡು ಕನ್ನಡಿಗರು ಎಂದು ಪರಿಗಣಿಸಿ ವಿಶೇಷ ಕೋಟ ನಿಗದಿ ಮಾಡಲಾಗಿದೆ. ಹೊರನಾಡು, ಗಡಿನಾಡಿನಲ್ಲಿ ಬ್ಯಾರಿ ಭಾಷೆ ಮಾತನಾಡುವ ಮಂದಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಗಮನ ಸೆಳೆದಿದ್ದರು.

ಬ್ಯಾರಿ ಭಾಷೆ ಕರ್ನಾಟಕದ ಪ್ರಮುಖ ಭಾಷೆಯಾಗಿದ್ದು, ರಾಜ್ಯ ಸರಕಾರವು ಈಗಾಗಲೆ ಬ್ಯಾರಿ ಸಾಹಿತ್ಯ ಅಕಾಡಮಿಯನ್ನು ಸ್ಥಾಪಿಸಿದೆ. ಈ ಹಿನ್ನೆಲೆಯಲ್ಲಿ ಬ್ಯಾರಿ ಭಾಷಿಕರನ್ನು ಈ ಹೊರನಾಡು, ಗಡಿನಾಡ ಕನ್ನಡಿಗರ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕೆಂದು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಮನವಿ ಮಾಡಿತ್ತು.

'ಅಭಾರಿಯಾಗಿದ್ದೇವೆ' : ನಾವು ಕಳೆದ 10 ವರ್ಷಗಳಿಂದ ಬ್ಯಾರಿ ಭಾಷಿಕರನ್ನು ವೃತ್ತಿಪರ ಶಿಕ್ಷಣ ದಲ್ಲಿ ಪರಿಗಣಿಸಿ ಬೇಕೆಂದು ಪ್ರಯತ್ನ ಪಡುತ್ತಿದ್ದೆವು. ಮಾ.23ರಂದು ರಾಜ್ಯ ಸರಕಾರವು ನಮ್ಮ ಬೇಡಿಕೆಯನ್ನು ಮನ್ನಿಸಿ ಆದೇಶ ಹೊರಡಿಸಿದೆ. ಇದಕ್ಕೆ ಸಹಕರಿಸಿದ ಶಿಕ್ಷಣ ಸಚಿವರು ವಿಶೇಷವಾಗಿ ಅವರ ಆಪ್ತ ಕಾರ್ಯದರ್ಶಿ  ಎ.ವಿ.ಪ್ರಸನ್ನ (ಬಿ.ಎ. ಮೊಯಿದಿನ್ ರವರ ಆಪ್ತ ಕಾರ್ಯದರ್ಶಿ ಆಗಿದ್ದರು), ಶಿಕ್ಷಣ ಇಲಾಖೆಯ ಅಧಿಕಾರಿಗಳಾದ  ವೆಂಕಟೇಶ್, ನರಸಿಂಹಪ್ಪ, ಹೇಮಲತಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಟಿ.ಸ್.ನಾಗಾಭರಣ, ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ  ಎಚ್.ಕೆ.ಜಗದೀಶ್, ಸಂಸದೀಯ ವ್ಯವಹಾರಗಳ ಇಲಾಖೆಯ  ಉಪ ಕಾರ್ಯದರ್ಶಿ ಜನಾರ್ದನ ಮತ್ತು ಇದಕ್ಕಾಗಿ ವಿಶೇಷ ಮುತುವರ್ಜಿ ವಹಿಸಿ ಹಂತ ಹಂತದಲ್ಲಿ ಶ್ರಮಪಟ್ಟ ಪತ್ರಕರ್ತ ಬದ್ರುದ್ದೀನ್ ಮಾಣಿ ಇವರೆಲ್ಲರಿಗೂ ನಾವು ಅಭಾರಿಯಾಗಿದ್ದೇವೆ ಎಂದು ದಿ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ಪರವಾಗಿ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಬ್ಯಾರಿ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

Similar News