ನೀತಿ ಸಂಹಿತೆ ಉಲ್ಲಂಘನೆ | ಶಾಸಕ ರೇಣುಕಾಚಾರ್ಯ ಸಭೆ ಮೇಲೆ ಚುನಾವಣಾಧಿಕಾರಿಗಳ ದಾಳಿ; ಭಾಷಣ ನಿಲ್ಲಿಸಲು ಸೂಚನೆ

Update: 2023-04-02 12:33 GMT

ಬೆಂಗಳೂರು, ಎ. 2: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ಪಡೆಯದೆ ಹೊನ್ನಾಳಿ ಕ್ಷೇತ್ರದ ಜನರೊಂದಿಗೆ ಸಭೆ ನಡೆಸಲು ಮುಂದಾಗಿದ್ದ ಶಾಸಕ ರೇಣುಕಾಚಾರ್ಯ ಅವರಿಗೆ ಭಾಷಣ ನಿಲ್ಲಿಸಲು ಚುನಾವಣಾಧಿಕಾರಿಗಳು ಸೂಚನೆ ನೀಡಿದ ಘಟನೆ ನಡೆದಿದೆ.

ರವಿವಾರ ಇಲ್ಲಿ ಶಿವಾನಂದ ವೃತ್ತದ ಸಮೀಪದಲ್ಲಿನ ಗುರುರಾಜ ಕಲ್ಯಾಣ ಮಂಟಪದಲ್ಲಿ ಶಾಸಕ ರೇಣುಕಾಚಾರ್ಯ ಸಭೆ ನಡೆಸುತ್ತಿದ್ದರು. ಅಲ್ಲಿಗೆ ದಿಢೀರ್ ದಾಳಿ ನಡೆಸಿದ ಚುನಾವಣಾಧಿಕಾರಿಗಳು ಭಾಷಣ ನಿಲ್ಲಿಸಲು ಸೂಚಿಸಿದರು. ಆದರೆ, ಅವರು ಭಾಷಣ ಮುಂದುವರಿಸಿದ ಹಿನ್ನೆಲೆಯಲ್ಲಿ ಮೈಕ್ ಕಸಿದುಕೊಳ್ಳಲು ಅಧಿಕಾರಿಗಳು ಯತ್ನಿಸಿದರು. ಆದರೆ, ಇದಕ್ಕೆ ಸೊಪ್ಪು ಹಾಕದ ರೇಣುಕಾಚಾರ್ಯ ಭಾಷಣ ಮುಂದುವರಿಸಿದ್ದಾರೆ. ಕೊನೆಗೆ ಅಧಿಕಾರಿಗಳ ಸೂಚನೆಯಂತೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.

ಈ ಮಧ್ಯೆ ಸಭೆಯಲ್ಲಿ ನೆರೆದಿದ್ದ ಜನರಿಗೆ ಊಟ ಮಾಡಲೂ ಅವಕಾಶ ನೀಡದೆ ತಂದಿದ್ದ ಕ್ಯಾಟರಿಂಗ್ ಊಟವನ್ನು ವಾಪಸ್ ಕಳುಹಿಸಿದ್ದಾರೆ. ಸದ್ಯ ರೇಣುಕಾಚಾರ್ಯ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆಂದು ಗೊತ್ತಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಸಭೆ ಸಮಾರಂಭಗಳನ್ನು ನಡೆಸಬೇಕಾದರೆ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ರೇಣುಕಾಚಾರ್ಯ ಅವರು ಯಾವುದೇ ಅನುಮತಿ ಪಡೆಯದ ಹಿನ್ನೆಲೆ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿ ಸಭೆಯನ್ನು ರದ್ದುಗೊಳಿಸಿದ್ದಾರೆ.

ಭಾಷಣ ನಿಲ್ಲಿಸಲು ಸೂಚನೆ: ಈ ಮಧ್ಯೆ ಅತ್ತ ಕೊಪ್ಪಳದಲ್ಲಿ ಸಭೆಗೆ ನೀಡಿದ್ದ ಕಾಲಾವಕಾಶ ಮುಗಿದ ಬಳಿಕವೂ ಮಾತನಾಡುತ್ತಿದ್ದ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾಷಣವನ್ನು ನಿಲ್ಲಿಸಲು ಚುನಾವಣಾಧಿಕಾರಿಗಳು ಸೂಚಿಸಿದ ಘಟನೆ ವರದಿಯಾಗಿದೆ.

ಬಳ್ಳಾರಿ ವಿಭಾಗದ ಬಿಜೆಪಿ ಡಿಜಿಟಲ್ ಕಾರ್ಯಕರ್ತರ ಸಮಾವೇಶದಲ್ಲಿ ಸಂತೋಷ್ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಚುನಾವಣಾಧಿಕಾರಿಗಳು ಮತ್ತು ಪೊಲೀಸರು, ಪರವಾನಿಗೆ ಸಮಯ ಮೀರಿದ್ದು, ಸಭೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ್ ಭಾಷಣ ನಿಲ್ಲಿಸಿ ಕಾರ್ಯಕ್ರಮ ಮುಗಿಸಿದರು. 

Similar News