ಪ್ರತೀ 5 ವರ್ಷದಲ್ಲಿ ಪಾಕಿಸ್ತಾನದ ಸಾಲ ಡಬಲ್: ವರದಿ‌

Update: 2023-04-02 17:42 GMT

ಇಸ್ಲಮಾಬಾದ್, ಎ.2: ಕಳೆದ 25 ವರ್ಷಗಳಲ್ಲಿ, ಪ್ರತೀ 5 ವರ್ಷಕ್ಕೆ ಪಾಕಿಸ್ತಾನದ ಅಂತರಾಷ್ಟ್ರೀಯ ಸಾಲದ ಪ್ರಮಾಣ ದ್ವಿಗುಣಗೊಂಡಿದೆ ಎಂದು ‘ಏಶ್ಯನ್ ಲೈಟ್’ ವರದಿ ಮಾಡಿದೆ. 

ಸರಣಿ ಭ್ರಷ್ಟಾಚಾರ, ವಿಫಲ ಸರಕಾರಗಳು, ಸೇನಾ ದಂಗೆ, ಹೆಚ್ಚುತ್ತಿರುವ ಅಂತರಾಷ್ಟ್ರೀಯ ಸಾಲದ ಪ್ರಮಾಣ, ರಫ್ತು ಪ್ರಮಾಣ ಕುಸಿತ ಇತ್ಯಾದಿ ಕಾರಣಗಳಿಂದ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಗ್ಯಾಸ್, ವಿದ್ಯುತ್ ಇತ್ಯಾದಿ ಮೂಲ ಸೌಕರ್ಯಗಳನ್ನು ಒದಗಿಸಲೂ ಸರಕಾರ ವಿಫಲವಾಗಿದೆ ಎಂದು ವರದಿ ಹೇಳಿದೆ.

ಈ ಮಧ್ಯೆ, ಪಾಕಿಸ್ತಾನದ ಕರೆನ್ಸಿಯು 2023ರ ಮಾರ್ಚ್ 20ರಂದು ದಾಖಲೆ ಕನಿಷ್ಟ ಮಟ್ಟಕ್ಕೆ ಅಪಮೌಲ್ಯಗೊಂಡಿದ್ದು ಡಾಲರ್ ಎದುರು 284.03 ರೂಪಾಯಿಗೆ ಕುಸಿದಿದೆ. ಅಲ್ಲದೆ, ಭಾರತದ ರೂಪಾಯಿಗಿಂತ ಪಾಕಿಸ್ತಾನದ ರೂಪಾಯಿ 3 ಪಟ್ಟು ದುರ್ಬಲವಾಗಿದೆ. ಮಾರ್ಚ್ 21ರ ಅಂಕಿಅಂಶ ಪ್ರಕಾರ ಭಾರತದ 1 ರೂಪಾಯಿಯು ಪಾಕಿಸ್ತಾನದ 3.407 ರೂಪಾಯಿಗೆ ಸಮವಾಗಿದೆ. ಅಂದರೆ  ಭಾರತದಲ್ಲಿ 1 ರೂಪಾಯಿಗೆ ಖರೀದಿಸಬಹುದಾದ ಒಂದು ವಸ್ತುವಿಗೆ ಪಾಕಿಸ್ತಾನದಲ್ಲಿ 3 ರೂಪಾಯಿಗೂ ಅಧಿಕ ಮೊತ್ತ ಪಾವತಿಸಬೇಕಾಗುತ್ತದೆ.
ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಪಾಕಿಸ್ತಾನ ಐಎಂಎಫ್ನಿಂದ ಆರ್ಥಿಕ ನೆರವನ್ನು ಎದುರು ನೋಡುತ್ತಿದೆ. ಆದರೆ ಐಎಂಎಫ್ ಕೆಲವು ಷರತ್ತುಗಳನ್ನು ವಿಧಿಸಿರುವುದರಿಂದ ಸಾಲ ಮಂಜೂರಾತಿ ವಿಳಂಬಗೊಂಡಿದೆ.
 

Similar News