×
Ad

ಕಡೂರು: ಅಭಿಮಾನಿಗಳ ಸಭೆಯಲ್ಲಿ ವೈಎಸ್‍ವಿ ದತ್ತ ಭಾವುಕ ಭಾಷಣ, ಚುನಾವಣೆ ಖರ್ಚಿಗೆ 10 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹ

Update: 2023-04-09 21:54 IST

ಕಡೂರು, ಎ.9: 'ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನಿರಾಕರಿಸಿದ ಬಗ್ಗೆ ಕೊಂಚವೂ ಬೇಸರವಿಲ್ಲ. ಆದರೆ ಆ ಪಕ್ಷದ ನಾಯಕರು ದತ್ತ ಅವರಿಗೆ ಜಾತಿ ಇಲ್ಲ, ಮೈತುಂಬಾ ಸಾಲ ಮಾಡಿಕೊಂಡಿದ್ದಾರೆ ಎಂದೆಲ್ಲಾ ಆರೋಪಿಸಿದ್ದಾರೆ. ಹಾಗೆ ಈ ದತ್ತ ನಡೆದುಕೊಂಡಿದ್ದರೆ ಇಂದು ಸಾವಿರಾರು ಜನ ಈ ಕಾರ್ಯಕ್ರಮಕ್ಕೆ ಬರುತ್ತಿದ್ದರೇ?' ಎಂದು ಮಾಜಿ ಶಾಸಕ ವೈಎಸ್‍ವಿ ದತ್ತ ಬೇಸರ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಗೀತಾ ಮಂದಿರದಲ್ಲಿ ದತ್ತ ಅಭಿಮಾನಿಗಳು, ಅನುಯಾಯಿಗಳು ಮತ್ತು ಗೆಳೆಯರ ಬಳಗದ ವತಿಯಿಂದ ರವಿವಾರ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ ಅವರು, ಜಾತಿ, ಹಣ ಬಲದ ರಾಜಕಾರಣ ಮೀರಿ ಪ್ರೀತಿ, ವಾತ್ಸಲ್ಯ ಮತ್ತು ಸ್ವಾಭಿಮಾನದ ರಾಜಕಾರಣಕ್ಕೆ ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಓಂಕಾರ ಹಾಕಬಹುದಾದ ಅವಕಾಶ ಕಡೂರು ಕ್ಷೇತ್ರದ ಜನರಿಗೆ ಲಭಿಸಿದೆ. ಈ ಪರೀಕ್ಷೆಯಲ್ಲಿ ಜನರು ಯಶಸ್ಸು ಗಳಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯಾಗಿ ಟವಲ್ ಗುರುತಿನಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ವೈಎಸ್ ವಿ ದತ್ತ

ಜಾತಿ, ಹಣ, ತೋಳ್ಬಲವೇ ಟಿಕೆಟ್ ಹಂಚಿಕೆಯ ಮಾನದಂಡ ಆಗುವುದಾದರೆ ತಮ್ಮಂತಹ ರಾಜಕಾರಣಿಗಳು ಶಾಸಕಗಿರಿಯ ಕನಸನ್ನು ಕಾಣಲೇಬಾರದು. ಕೇವಲ ಕ್ಷೇತ್ರದ ಎರಡು ಬಹು ಸಂಖ್ಯಾತಕೋಮಿನ ವ್ಯಕ್ತಿಗಳೇ ಶಾಸಕರಾಗಬೇಕೆಂಬ ಅಲಿಖಿತ ನಿಯಮ ಇರುವುದಾದರೆ ದುರ್ಬಲರು, ಜಾತಿಯ ಬಲವಿಲ್ಲದ ತಮ್ಮಂತಹ ರಾಜಕಾರಣಿಗಳ ಪಾಡಿನ ಎಂದು ಭಾವುಕರಾಗಿ ಪ್ರಶ್ನೆ ಮಾಡಿದರು. 

ಪತ್ರಿಕೆಯೊಂದರಲ್ಲಿ ಚೌಕಾಶಿಗೆ ಇಳಿದ ದತ್ತ ಎಂಬ ಶೀರ್ಷಿಕೆಯ ಅಡಿ ಸುದ್ದಿ ಬಂದಿರುವುದು ಅತ್ಯಂತ ಬೇಸರದ ಸಂಗತಿ. ಚೌಕಾಶಿ ಮಾಡಲು ಇದೇನು ಸೊಪ್ಪಿನ ವ್ಯಾಪಾರವಲ್ಲ. ತಮಗೂ ಎಲ್ಲರ ಭಾವನೆ ಅರ್ಥವಾಗುತ್ತದೆ, ಹತ್ತಾರು ಚೆಕ್‍ಬೌನ್ಸ್ ಪ್ರಕರಣ ತಮ್ಮ ಮೇಲಿದೆ, ಆದರೆ ಮತದಾರರ ಮರ್ಯಾದೆಗೆ ಧಕ್ಕೆ ತರುವಂತಹ ಕೆಲಸವನ್ನು ಎಂದಿಗೂ ಮಾಡಿಲ್ಲ ಎಂದು ಹೆಮ್ಮೆಯಿಂದ ಹೇಳಿ ಕೊಳ್ಳುತ್ತೇನೆ ಎಂದರು. 

ಇದು ತಮ್ಮ ಜೀವನದ ಕೊನೆಯ ಚುನಾವಣೆ ಕಾಂಗ್ರೆಸ್ ಪಕ್ಷದ ಮುಖಂಡರು ಟಿಕೆಟ್ ಭರವಸೆ ನೀಡಿ ಕಡೇ ಗಳಿಗೆಯಲ್ಲಿ ಕೈ ಕೊಟ್ಟಿದ್ದರಿಂದ ಅನಿವಾರ್ಯವಾಗಿ ಅಭಿಮಾನಿಗಳ ಮತ್ತು ಹಿತೈಷಿಗಳ ಒತ್ತಾಯಕ್ಕೆ ಮಣಿದು ಪಕ್ಷೇತರನಾಗಿ ಸ್ಫರ್ಧಿಸಲು ಮುಂದಾಗಿದ್ದೇನೆ. ಆ ಮೂಲಕ ಕಡೂರು ಕ್ಷೇತ್ರದ ಲಕ್ಷಾಂತರ ಮತದಾರರ ಭಾವನೆಗಳಿಗೆ ಸ್ಪಂದಿಸುವ ಅವಕಾಶ ದೊರೆಯುತ್ತದೆ ಎಂದರು. 

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ವಿಧಾನಸಭಾ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮೇರೆಗೆ ದತ್ತ ಅವರು ಕಾಂಗ್ರೆಸ್ ಸೇರಿದರು ದತ್ತ ಅವರ ಮೇಲಿನ ಅಭಿಮಾನದಿಂದ ಅವರ ಜೊತೆ ತಮ್ಮಂತಹ ಅಸಂಖ್ಯಾತ ಮುಖಂಡರು ಮತ್ತು ಕಾರ್ಯಕರ್ತರು ಕೂಡ ಕಾಂಗ್ರೆಸ್ ಸೇರಿದ್ದವು, ಆದರೆ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದಿರುವುದ ನಮಗೆಲ್ಲ ಬೇಸರ ಮೂಡಿಸಿದೆ. ಎಲ್ಲಾ ಸಮೀಕ್ಷಗಳಲ್ಲೂ ದತ್ತ ಅವರ ಹೆಸರು ಮುಂಚೂಣಿಯಲ್ಲಿ ಇದ್ದು ಕಡೇ ಗಳಿಗೆಯಲ್ಲಿ ಬದಲಾಗಿದೆ. ಆದರೆ ಆ ಪಕ್ಷದ ನಾಯಕರಿಗೆ ಇನ್ನೂ ಕಾಲಾವಕಾಶ ಇದೆ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಕ್ಷೇತ್ರ ಉಳಿಸಿಕೊಳ್ಳಲು ಮುಂದಾಗಲಿ ಎಂದು ಸಲಹೆ ನೀಡಿದರು. 

ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ವಿವಿಧ ಸಮಾಜದ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿ, ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿ ಅವರ ಚುನಾವಣೆ ವ್ಯಚ್ಚಕ್ಕೆ ಹಣವನ್ನೂ ನೀಡಿ ಮತವನ್ನು ನೀಡುವುದಾಗಿ ಭರವಸೆ ನೀಡಿದರು. 

10ಲಕ್ಷಕ್ಕೂ ಹೆಚ್ಚು ಹಣ ಸ್ಥಳದಲ್ಲೇ ಸಂಗ್ರಹ:

ತಮ್ಮ ಭಾವುಕ ಭಾಷಣದ ಕೊನೆಯಲ್ಲಿ ಮಾತನಾಡುತ್ತಾ ತಾವು ನಿಮ್ಮಲ್ಲಿ ಒಂದು ಓಟು ಒಂದು ನೋಟು ಬೇಡುತ್ತೇನೆ ಎಂದು ತಮ್ಮ ಹೆಗಲ ಮೇಲಿನ ಟವಲ್ಲೇ ಚಿಹ್ನೆ ಎಂದು ಭಾವಿಸಿಕೊಳ್ಳಿ ಎಂದ ಅವರು, ಚುನಾವಣೆ ವೆಚ್ಚವನ್ನು ಈ ಜೋಳಿಗೆಗೆ ಹಾಕಿ ಎಂದು ಹೇಳುತ್ತಾ ಅಭಿಮಾನಿಗಳ ಮುಂದೆ ತೆರಳಿದ ದತ್ತ ಅವರಿಗೆ ನಾ ಮುಂದು ತಾ ಮುಂದು ಎಂದು ಸಾವಿರಾರು ರುಪಾಯಿಗಳನ್ನು ಕಾರ್ಯಕರ್ತರು ಅವರ ಮಡಿಲಿಗೆ ಹಾಕಿದರು. ದತ್ತ ಅವರ ಜೋಳಿಗೆಗೆ 50, 1ಲಕ್ಷ, 2ಲಕ್ಷ ರೂ.ಗಳ ಚೆಕ್‍ಗಳನ್ನು ಹಾಕಿದ್ದು, ಸುಮಾರು 10ಲಕ್ಷಕ್ಕೂ ಹೆಚ್ಚು ಹಣ ಸ್ಥಳದಲ್ಲೇ ಸಂಗ್ರಹವಾಯಿತು. ಕೆಲವರು ಚುನಾವಣೆ ಸಂದರ್ಭದಲ್ಲೂ ಚುನಾವಣೆ ಖರ್ಚಿಗಾಗಿ ಇನ್ನೂ ಹೆಚ್ಚಿನ ಹಣ ನೀಡುವುದಾಗಿ ಘೋಷಣೆ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಅಭಿಮಾವಯನಿಗಳೇ ಒತ್ತಾಯ ಪೂರ್ವಕವಾಗಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಕೆ ಎಲ್ ವಿ ವೃತ್ತದಿಂದ ಕಾರ್ಯಕ್ರಮದ ವೇದಿಕೆಯವರಗೆ ಭಾರೀ ಸಂಖ್ಯೆಯಲ್ಲಿ ಮೆರವಣಿಗೆ ಮೂಲಕ ಕರೆತಂದರು. ಸಭಾ ಭವನವಂತೂ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಕಿಕ್ಕಿರಿದು ತುಂಬಿತ್ತು.

Similar News