ಪಕ್ಷೇತರ ಅಭ್ಯರ್ಥಿಯಾಗಿ ಟವಲ್ ಗುರುತಿನಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ವೈಎಸ್ ವಿ ದತ್ತ

ಕಡೂರು,ಎ.9: ಕಾಂಗ್ರೆಸ್ ನಿಂದ ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ವೈಎಸ್ ವಿ ದತ್ತ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ರವಿವಾರ ಘೋಷಣೆ ಮಾಡಿದ್ದಾರೆ.
ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಗೀತಾ ಮಂದಿರದಲ್ಲಿ ದತ್ತ ಅಭಿಮಾನಿಗಳು, ಅನುಯಾಯಿಗಳು ಮತ್ತು ಗೆಳೆಯರ ಬಳಗದ ವತಿಯಿಂದ ರವಿವಾರ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, 'ಅಭಿಮಾನಿಗಳ ಅಭಿಪ್ರಾಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದು, ಟವಲ್ ಗುರುತಿನಿಂದ ಸ್ಪರ್ಧೆ ಮಾಡುತ್ತೇನೆ' ಎಂದು ಘೋಷಣೆ ಮಾಡಿದರು.
'ಜಾತಿ, ಹಣ ಬಲದ ರಾಜಕಾರಣ ಮೀರಿ ಪ್ರೀತಿ, ವಾತ್ಸಲ್ಯ ಮತ್ತು ಸ್ವಾಭಿಮಾನದ ರಾಜಕಾರಣಕ್ಕೆ ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಓಂಕಾರ ಹಾಕಬಹುದಾದ ಅವಕಾಶ ಕಡೂರು ಕ್ಷೇತ್ರದ ಜನರಿಗೆ ಲಭಿಸಿದೆ. ಈ ಪರೀಕ್ಷೆಯಲ್ಲಿ ಜನರು ಯಶಸ್ಸು ಗಳಿಸುತ್ತಾರೆ' ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.
ಕಾಂಗ್ರೆಸ್ ಪಕ್ಷ ತಮಗೆ ಟಿಕೆಟ್ ನಿರಾಕರಿಸಿದ ಬಗ್ಗೆ ಕೊಂಚವೂ ಬೇಸರವಿಲ್ಲ. ಆದರೆ ಆ ಪಕ್ಷದ ನಾಯಕರು ದತ್ತ ಅವರಿಗೆ ಜಾತಿ ಇಲ್ಲ, ಮೈತುಂಬಾ ಸಾಲ ಮಾಡಿಕೊಂಡಿದ್ದಾರೆ ಎಂದೆಲ್ಲಾ ಆರೋಪಿಸಿದ್ದಾರೆ. ಹಾಗೆ ಈ ದತ್ತ ನಡೆದುಕೊಂಡಿದ್ದರೆ ಇಂದು ಸಾವಿರಾರು ಜನ ಈ ಕಾರ್ಯಕ್ರಮಕ್ಕೆ ಬರುತ್ತಿದ್ದರೇ? ಎಂದು ಪ್ರಶ್ನೆ ಮಾಡಿದರು.
ಜಾತಿ, ಹಣ, ತೋಳ್ಬಲವೇ ಟಿಕೆಟ್ ಹಂಚಿಕೆಯ ಮಾನದಂಡ ಆಗುವುದಾದರೆ ತಮ್ಮಂತಹ ರಾಜಕಾರಣಿಗಳು ಶಾಸಕಗಿರಿಯ ಕನಸನ್ನು ಕಾಣಲೇಬಾರದು. ಕೇವಲ ಕ್ಷೇತ್ರದ ಎರಡು ಬಹು ಸಂಖ್ಯಾತ ಕೋಮಿನ ವ್ಯಕ್ತಿಗಳೇ ಶಾಸಕರಾಗಬೇಕೆಂಬ ಅಲಿಖಿತ ನಿಯಮ ಇರುವುದಾದರೆ ದುರ್ಬಲರು, ಜಾತಿಯ ಬಲವಿಲ್ಲದ ತಮ್ಮಂತಹ ರಾಜಕಾರಣಿಗಳ ಪಾಡೇನು ಎಂದು ಭಾವುಕರಾಗಿ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಅಭ್ಯರ್ಥಿಗಳ 2ನೇ ಪಟ್ಟಿ: ವೈ.ಎಸ್.ವಿ ದತ್ತಾಗೆ ಕೈ ಕೊಟ್ಟ ಕಾಂಗ್ರೆಸ್







