ರಾಜೀನಾಮೆಗೂ ಮುನ್ನ ಜೆಡಿಎಸ್ ಸೇರಿ 'ಬಿ ಫಾರಂ' ಪಡೆದ ಆಯನೂರು ಮಂಜುನಾಥ್

ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧೆ

Update: 2023-04-19 09:47 GMT

ಚಿತ್ರದುರ್ಗ: ವಿಧಾನಪರಿಷತ್ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಇಂದು (ಬುಧವಾರ) ಬೆಳಗ್ಗೆ ಘೋಷಣೆ ಮಾಡಿದ್ದ ಆಯನೂರು ಮಂಜುನಾಥ್ ಅವರು ಮಧ್ಯಾಹ್ನ ವೇಳೆ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.

ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಅವರ ಹುಬ್ಬಳ್ಳಿಯ ನಿವಾಸಕ್ಕೆ ತೆರಳುತ್ತಿದ್ದ ಅವರು ಚಿತ್ರದುರ್ಗ ಜೆಡಿಎಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾದರು. ಇದೇ ವೇಳೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ  'ಬಿ ಫಾರಂ' ಪಡೆದರು. 

ಶಿವಮೊಗ್ಗ ನಗರ ಕ್ಷೇತ್ರಕ್ಕೆ ಇನ್ನೂ ಬಿಜೆಟ್‌ ಟಿಕೆಟ್‌ ಘೋಷಣೆ ಮಾಡಿಲ್ಲ. ಈ ಕ್ಷೇತ್ರದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ  ಆಯನೂರು ಮಂಜುನಾಥ್ ಟಿಕೆಟ್ ಘೋಷಣೆಗೂ ಮೊದಲೇ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದು, ಇದೀಗ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. 

ಇಂದು ಬೆಳಗ್ಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಆಯನೂರು ಅವರು, 'ಶಿವಮೊಗ್ಗಕ್ಕೆ ಕೈಗಾರಿಕೆಗಳು ಬರಲು ಹಿಂದೇಟು ಹಾಕಿವೆ. ಇದಕ್ಕೆ ಶಿವಮೊಗ್ಗದಲ್ಲಿ ನಡೆಯುವ ಅಹಿತಕರ ಘಟನೆಗಳು ಕಾರಣ. ಗ್ಲೊಬಲ್ ಮೀಟಿಂಗ್ ನಲ್ಲಿ ಕೈಗಾರಿಕೋದ್ಯಮಿಗಳು ಶಿವಮೊಗ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ.ಗಲಭೆಗಳು ನಿಯಂತ್ರಣಕ್ಕೆ ಬಂದರೆ ಕೈಗಾರಿಕೆಗಳು ತರಬಹುದು. ಶಿವಮೊಗ್ಗ ಶಾಂತಿಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ' ಎಂದು ಹೇಳಿದ್ದರು. 

ಇದನ್ನೂ ಓದಿ: ನಾಮಪತ್ರ ಸಲ್ಲಿಕೆ: 1 ರೂಪಾಯಿ ನಾಣ್ಯಗಳ ಸಂಗ್ರಹಿಸಿ 10 ಸಾವಿರ ರೂ. ಠೇವಣಿ ಭರಿಸಿದ ಪಕ್ಷೇತರ ಅಭ್ಯರ್ಥಿ

Similar News