ಉತ್ತರ ಪ್ರದೇಶ: 310 ಕೋಟಿ ರೂ. ನರೇಗಾ ವೇತನ ಬಾಕಿ, ಜನವರಿಯಿಂದ ಕಾರ್ಮಿಕರಿಗೆ ದುಡ್ಡು ಸಿಕ್ಕಿಲ್ಲ; ವರದಿ

Update: 2023-04-21 11:31 GMT

ಲಕ್ನೋ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಕಿಅಂಶಗಳಂತೆ ಉತ್ತರ ಪ್ರದೇಶದಲ್ಲಿ 2022-13ನೇ ವಿತ್ತವರ್ಷದಲ್ಲಿ ಮಾ.31ರವರೆಗೆ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಅಥವಾ ನರೇಗಾದಡಿ ಕಾರ್ಮಿಕರಿಗೆ ಒಟ್ಟು 310 ಕೋಟಿ ರೂ.ವೇತನ ಬಾಕಿಯುಳಿದಿದೆ. ಇದೇ ವೇಳೆ ಹಾಪುರ್,ಬಾಘಪತ್ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ನರೇಗಾ ಯೋಜನೆಯು ವಿಫಲಗೊಂಡಿದೆ ಎನ್ನುವುದನ್ನೂ ಅಂಕಿಅಂಶಗಳು ತೋರಿಸಿವೆ ಎಂದು newsclick.in ವರದಿ ಮಾಡಿದೆ.

ಉತ್ತರ ಪ್ರದೇಶದಲ್ಲಿ 1.36 ಕೋ.ನೋಂದಾಯಿತ ನರೇಗಾ ಕಾರ್ಮಿಕರಿದ್ದು, ಈ ಪೈಕಿ ಕೇವಲ ಎರಡರಿಂದ ಮೂರು ಲಕ್ಷ ಜನರು ಪ್ರತಿ ದಿನ ಕೆಲಸವನ್ನು ಪಡೆಯುತ್ತಿದ್ದಾರೆ. 2022-23ನೇ ವಿತ್ತವರ್ಷದಲ್ಲಿ ಯೋಜನೆಯಡಿ ಖಾತರಿ ಪಡಿಸಲಾಗಿರುವ 100 ದಿನಗಳ ಕೆಲಸವನ್ನು ಕೇವಲ 4.98 ಲಕ್ಷ ಜನರು ಪಡೆದಿದ್ದಾರೆ.

2019-20ರಲ್ಲಿ ಮತ್ತು 2018-19ರಲ್ಲಿ 100 ದಿನಗಳ ಕೆಲಸ ಪಡೆದಿದ್ದ ಕಾರ್ಮಿಕರ ಸಂಖ್ಯೆ ಅನುಕ್ರಮವಾಗಿ ಸುಮಾರು 5.12 ಲಕ್ಷ ಮತ್ತು 4.26 ಲಕ್ಷ ಆಗಿತ್ತು.

ಭಾಗವಹಿಸುವುದನ್ನು ನಿರುತ್ತೇಜಿಸುತ್ತಿರುವ ವ್ಯವಸ್ಥೆಯ ಸಮಸ್ಯೆಗಳಿಂದಾಗಿ ಯೋಜನೆಯು ಪೀಡಿತವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಆ್ಯಪ್ ಆಧಾರಿತ ನೋಂದಣಿ ಮತ್ತು ಹಾಜರಾತಿ ವ್ಯವಸ್ಥೆ ಇತ್ತೀಚಿಗೆ ತಲೆದೋರಿರುವ ಸಮಸ್ಯೆಯಾಗಿದೆ.

ನರೇಗಾ ಉದ್ಯೋಗ ಬೇಡಿಕೆಗೆ ಅನುಗುಣವಾದ ಯೋಜನೆಯಾಗಿದೆ ಮತ್ತು ಪ್ರತಿ ರಾಜ್ಯದಲ್ಲಿ ಉದ್ಯೋಗಕ್ಕೆ ಬೇಡಿಕೆಯನ್ನು ಅವಲಂಬಿಸಿ ಆಯಾ ರಾಜ್ಯಕ್ಕೆ ಕೇಂದ್ರದಿಂದ ಸಂಪನ್ಮೂಲ ವರ್ಗಾವಣೆಗೊಳ್ಳುತ್ತದೆ. ಆದರೆ ಜನರ ಬೇಡಿಕೆಯನ್ನು ಪರಿಗಣಿಸಲಾಗುತ್ತಿಲ್ಲ ಮತ್ತು ಇದು ಜನರಿಗೆ ಕೆಲಸ ದೊರೆಯದಿರುವುದಕ್ಕೆ ಮುಖ್ಯ ಕಾರಣವಾಗಿದೆ. ಅಲ್ಲದೆ ಹಣದ ಸಮಸ್ಯೆಯೂ ಬೇಡಿಕೆಯನ್ನು ನಿರ್ಲಕ್ಷಿಸಲು ಮತ್ತು ವೇತನ ಪಾವತಿಯಲ್ಲಿ ವಿಳಂಬಕ್ಕೆ ಕಾರಣವಾಗಿದೆ. ಕೆಲಸದ ಸ್ಥಳಗಳಲ್ಲಿ ಹಾಜರಾತಿ ದಾಖಲಿಸಲು ಆ್ಯಪ್ನಂತಹ ಅನಗತ್ಯ ತಾಂತ್ರಿಕ ಜಟಿಲತೆಗಳನ್ನು ಜಾರಿಗೆ ತಂದಿರುವುದು ಕಾರ್ಮಿಕರಿಗೆ ಹೆಚ್ಚಿನ ತೊಂದರೆಯನ್ನುಂಟು ಮಾಡಿದೆ ಎಂದು ನರೇಗಾ ಮಜ್ದೂರ್ ಯೂನಿಯನ್ ನ ಸಂಚಾಲಕ ಸುರೇಶ್ ಸಿಂಗ್ ರಾಠೋಡ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಕೇಂದ್ರ ಸರಕಾರವು ನರೇಗಾ ಯೋಜನೆಗೆ ಹಂಚಿಕೆ ಮಾಡಿದ ಹಣಕಾಸು ಕಡಿಮೆಯಾಗುತ್ತಿರುವುದನ್ನು ಖಂಡಿಸಿದ ರಾಠೋಡ್, ಹಲವಾರು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಹೇಳಿದರು.

ರಾಜ್ಯ ಮತ್ತು ಕೇಂದ್ರ ಸರಕಾರದ ನಿರಾಸಕ್ತಿಯನ್ನು ಬೆಟ್ಟು ಮಾಡಿದ ರಾಠೋಡ್, ‘ವಾರಣಾಸಿಯಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಯಂತ್ರಗಳ ಮೂಲಕ ನಡೆಯುತ್ತಿವೆ. ನಾವು ಸಮೀಕ್ಷೆ ನಡೆಸಿರುವ ಹಲವಾರು ಬ್ಲಾಕ್ಗಳಲ್ಲಿ ಜನರು ಒಂದು ತಿಂಗಳು ಕೆಲಸ ಮಾಡಿದ್ದರೂ ಅವರಿಗೆ ಕೇವಲ 8-10 ದಿನಗಳ ವೇತನವನ್ನು ನೀಡಲಾಗುತ್ತಿದೆ’ ಎಂದರು. ರಾಠೋಡ್ ವಾರಣಾಸಿ ನಿವಾಸಿಯಾಗಿದ್ದಾರೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ಕೇವಲ 2,354 ಜನರು ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ರ ತವರು ಜಿಲ್ಲೆ ಗೋರಖ್ಪುರದಲ್ಲಿ 12,914 ಕಾರ್ಮಿಕರು ನೂರು ದಿನಗಳ ಕೆಲಸವನ್ನು ಪಡೆದಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಾರ್ಮಿಕರಿಗೆ ದಿನಗೂಲಿ ನರೇಗಾಕ್ಕಿಂತ ಹೆಚ್ಚಿದೆ. ಅಲ್ಲದೆ ಅವರು ಸಕಾಲದಲ್ಲಿ ದಿನಗೂಲಿಯನ್ನು ಪಡೆಯುತ್ತಾರೆ, ಆದರೆ ನರೇಗಾದಡಿ ವೇತನ ಪಡೆಯಲು ಅವರು ತಿಂಗಳುಗಟ್ಟಲೆ ಕಾಯಬೇಕು. ಇದೂ ನರೇಗಾದಡಿ ಕೆಲಸ ಮಾಡಲು ಜನರ ನಿರುತ್ಸಾಹಕ್ಕೆ ಕಾರಣವಾಗಿದೆ ಎಂದು ಉತ್ತರ ಪ್ರದೇಶ ಯೋಜನಾ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಲಕ್ನೋ ವಿವಿಯ ಪ್ರೊಫೆಸರ್ ಸುಧೀರ ಪನ್ವಾರ್ ಹೇಳಿದರು.

ಕೇಂದ್ರವು ಇತ್ತೀಚಿಗೆ 2023-24ನೇ ಸಾಲಿಗೆ ನರೇಗಾದಡಿ ವೇತನಗಳನ್ನು ಹೆಚ್ಚಿಸಿದೆ. ಹರ್ಯಾಣದಲ್ಲಿ ಗರಿಷ್ಠ (357 ರೂ.) ವೇತನವನ್ನು ನಿಗದಿಗೊಳಿಸಿದ್ದರೆ,ಅದು ಉ.ಪ್ರದೇಶದಲ್ಲಿ ಕನಿಷ್ಠ (230 ರೂ.) ಆಗಿದೆ.

ಉ.ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾದಡಿ ದುಡಿಯುತ್ತಿರುವ ಕಾರ್ಮಿಕರಿಗೆ ಕಳೆದ ನಾಲ್ಕು ತಿಂಗಳುಗಳಿಂದಲೂ ವೇತನ ಪಾವತಿಸಲಾಗಿಲ್ಲ, ಈ ವಿಳಂಬದಿಂದಾಗಿ ಸಾವಿರಾರು ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಅಲ್ಲದೆ ಸಿಮೆಂಟ್ ಮತ್ತು ಉಕ್ಕು ಇತ್ಯಾದಿ ಸಾಮಗ್ರಿಗಳ ಖರೀದಿಗೆ ಹಣಕಾಸಿನ ಕೊರತೆಯಿಂದಾಗಿ ನರೇಗಾದಡಿ ಹೆಚ್ಚಿನ ಕಾಮಗಾರಿಗಳು ಸ್ಥಗಿತಗೊಂಡಿವೆ.

Similar News