ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಕಾರಿಗೆ ಮುತ್ತಿಗೆ, ಸಿದ್ದರಾಮಯ್ಯ ಪರ ಘೋಷಣೆ
ಮೈಸೂರು: ವರುಣಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.
ಮೈಸೂರು ತಾಲೂಕು ವರುಣಾ ವಿಧಾನಸಭಾ ಕ್ಷೇತ್ರದ ಬುಗತಹಳ್ಳಿ ಗ್ರಾಮಕ್ಕೆ ರವಿವಾರ ತೆರಳಿದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮೊದಲಿಗೆ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿ, 'ನಾವು ಅಂಬೇಡ್ಕರ್ ಅವರಿಗೆ ಗೌರವ ಕೊಡುತ್ತೇವೆ. ಬೇರೆ ಪಕ್ಷದವರಿಗೆ ಗೌರವ ಇಲ್ಲ' ಎಂಬ ಹೇಳಿಕೆ ನೀಡಿದರು.
ಇದರಿಂದ ಕೆರಳಿದ ಕೆಲವು ಯುವಕರು 'ನೀವು ಅಂಬೇಡ್ಕರ್ ಅವರಿಗೆ ಏನು ಗೌರವ ಕೊಟ್ಟಿದ್ದೀರಿ. ಬರೀ ಸುಳ್ಳುಗಳನ್ನೇ ಹೇಳಿಕೊಂಡು ತಿರುಗುತ್ತಿದ್ದೀರಿ. ಪ್ರಚಾರಕ್ಕೆ ಬಂದ ಮೇಲೆ ಮತ ಕೇಳಿ ಹೋಗಬೇಕು, ಸುಳ್ಳುಗಳನ್ನು ಹೇಳಬಾರದು' ಎಂದು ಧಿಕ್ಕಾರ ಕೂಗಿದರು.
ನಂತರ ಕೆಲವು ಯುವಕರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪರ ಘೋಷಣೆಗಳನ್ನು ಕೂಗಿದರು.
ಇದರಿಂದ ತಬ್ಬಿಬ್ಬಾದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕಾರು ಹತ್ತಿ ಹೊರಡಲು ಮುಂದಾದರು. ಆಗ ಕಾರನ್ನು ಮುತ್ತಿಗೆ ಹಾಕಿದ ಯುವಕರು ಸಿದ್ದರಾಮಯ್ಯ ಪರ ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: ಅಂಬೇಡ್ಕರ್ ಬರೆದ ಸಂವಿಧಾನ ಬದಲಿಸ್ತೀರಾ?: ಪ್ರಚಾರಕ್ಕೆ ತೆರಳಿದ್ದ ಪ್ರತಾಪ್ ಸಿಂಹಗೆ ಗ್ರಾಮಸ್ಥರ ತರಾಟೆ