ಅಂಬೇಡ್ಕರ್ ಬರೆದ ಸಂವಿಧಾನ ಬದಲಿಸ್ತೀರಾ?: ಪ್ರಚಾರಕ್ಕೆ ತೆರಳಿದ್ದ ಪ್ರತಾಪ್ ಸಿಂಹಗೆ ಗ್ರಾಮಸ್ಥರ ತರಾಟೆ
ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಪರ ಪ್ರಚಾರಕ್ಕೆ ತೆರಳಿದ್ದಾಗ ಘಟನೆ

ಮೈಸೂರು, ಎ.21: ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ವಿ.ಸೋಮಣ್ಣ ಪರವಾಗಿ ಪ್ರಚಾರಕ್ಕೆ ತೆರಳಿದ್ದ ಕೊಡಗು- ಮೈಸೂರು ಸಂಸದ ಪ್ರತಾಪ ಸಿಂಹರನ್ನು ಕುಪ್ಯ ಗ್ರಾಮದಲ್ಲಿ ಜನರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಇತ್ತೀಚೆಗಷ್ಟೇ ಕ್ಷೇತ್ರದ ಲಲಿತಾದ್ರಿಪುರ ಗ್ರಾಮಕ್ಕೆ ಮತಯಾಚನೆಗೆ ತೆರಳಿದ್ದಾಗ ಪ್ರತಾಪ್ ಸಿಂಹ ಮತ್ತು ಸೋಮಣ್ಣರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ: ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ, ಪ್ರತಾಪ್ ಸಿಂಹಗೆ ಗ್ರಾಮಸ್ಥರ ತರಾಟೆ
ಇದೀಗ ನಿನ್ನೆ (ಗುರುವಾರ) ಕುಪ್ಯ ಗ್ರಾಮದಲ್ಲಿ ಸಂಸದರು ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಪ್ರಶ್ನಿಸಿರುವುದು ಮತ್ತು ಸಂಸದರು ಉತ್ತರ ಕೊಡದೇ ಮೌನವಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ದಾಖಲಾಗಿದೆ.
'ಅಂಬೇಡ್ಕರ್ ಸಂವಿಧಾನವನ್ನೇ ಬದಲು ಮಾಡ್ತೀವಿ ಅಂತೀರಾ?, ಅಕ್ಕಿ ಬಿಜೆಪಿಯದ್ದು, ಚೀಲ ಮಾತ್ರ ಸಿದ್ದರಾಮಯ್ಯದ್ದು ಅಂತೀರಾ? - ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಏನು ಅಂತೀರಾ? - ಸಿದ್ದರಾಮಯ್ಯನವರ ಹತ್ತಿರ ಕುಳಿತುಕೊಳ್ಳಿ ಗೊತ್ತಾಗುತ್ತೆ' ಎಂದು ಗ್ರಾಮಸ್ಥರು ತರಾಟೆಗೆ ತೆಗದುಕೊಂಡಿದ್ದಾರೆ.
'ರಸ್ತೆಗಳ ರಾಜ ಅಂಥ ಮಾಜಿ ಸಚಿವ ಮಹದೇವಪ್ಪಗೆ ನಿಮ್ಮದೇ ಸರಕಾರ ಬಿರುದು ಕೊಟ್ಟಿದೆ. ಅದೇ ಮಹದೇವಪ್ಪ ವಿರುದ್ಧ ಮಾತನಾಡುತ್ತೀರಾ? ನಿಮ್ಮ ಸಂಸದ ಶ್ರೀನಿವಾಸ ಪ್ರಸಾದ್ ಗೆದ್ದ ಬಳಿಕ ಒಂದು ದಿನವೂ ನಮ್ಮ ಸಮಸ್ಯೆ ಕೇಳಲು ಬಂದಿಲ್ಲ' ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.







