ಉಡುಪಿಯಲ್ಲಿ ಸತತ ಎರಡನೆ ಬಾರಿ ಬಿಜೆಪಿ ಕ್ಲೀನ್‌ಸ್ವೀಪ್; ಕಾಂಗ್ರೆಸ್‌ಗೆ ಮುಖಭಂಗ

Update: 2023-05-13 16:08 GMT

ಉಡುಪಿ, ಮೇ 13: ಕರ್ನಾಟಕ ರಾಜ್ಯ ವಿಧಾನಸಭೆಗಾಗಿ ನಡೆದ ಚುನಾವಣೆ ಉಡುಪಿ ಜಿಲ್ಲೆಯ ಮಟ್ಟಿಗೆ ರಾಜ್ಯದಲ್ಲಿ ಕಂಡುಬಂದ ಟ್ರೆಂಡ್‌ಗೆ ಸಂಪೂರ್ಣ ವ್ಯತಿರಿಕ್ತವಾದ ಫಲಿತಾಂಶವನ್ನು ನೀಡಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಿಗ್ವಿಜಯ ಸಾಧಿಸಿದರೆ, ಉಡುಪಿ ಜಿಲ್ಲೆಯಲ್ಲಿ ಅದು ತೀವ್ರ ಮುಖಭಂಗ ಅನುಭವಿಸಿದೆ.

ಮತ್ತೊಂದೆಡೆ ಬಿಜೆಪಿ ಕಳೆದ ಬಾರಿ ಉಡುಪಿ ಜಿಲ್ಲೆಯಲ್ಲಿ ದಾಖಲಿಸಿದ ಕ್ಲೀನ್ ಸ್ವೀಪ್ ಸಾಧನೆಯನ್ನು ಮತ್ತೆ ತೋರಿಸಿದೆ. ಜಿಲ್ಲೆಯಲ್ಲಿ ಐದಕ್ಕೆ ಐದೂ ಸೀಟುಗಳನ್ನು ಭಾರೀ ಅಂತರಗಳಿಂದ ಬಿಜೆಪಿ ಅಭ್ಯರ್ಥಿಗಳು ಗೆದ್ದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗುರವನ್ನುಂಟು ಮಾಡಿದೆ.

ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಗಳಲ್ಲಿ ಬಿಗು ಭದ್ರತೆಯ ನಡುವೆ ಇಂದು ನಡೆದ ಮತ ಎಣಿಕೆಯಲ್ಲಿ ಕೇವಲ ಬೈಂದೂರಿನಲ್ಲಿ ಗೋಪಾಲ ಪೂಜಾರಿ ಒಬ್ಬರನ್ನು ಹೊರತು ಪಡಿಸಿ ಮತ ಎಣಿಕೆಯ ಪ್ರಾರಂಭಿಕ ಸುತ್ತಿನಿಂದಲೇ ಮುನ್ನಡೆ ಪಡೆದಿದ್ದ ಬಿಜೆಪಿಯ ಅಭ್ಯರ್ಥಿಗಳು ಕೊನೆಯ ಸುತ್ತಿನವರೆಗೂ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ಕಾರ್ಕಳ ಕ್ಷೇತ್ರವನ್ನು ಹೊರತು ಪಡಿಸಿದರೆ ಉಳಿದೆಡೆ ಬಿಜೆಪಿ ನಿರತಂಕ ಗೆಲುವು ದಾಖಲಿಸಿತು.

ಪೂಜಾರಿಗೆ 2ನೇ ಬಾರಿ ಕೈಕೊಟ್ಟ ಗೆಲುವು: ಈ ಬಾರಿ ಗೆಲ್ಲುವ ಪೂರ್ಣ ವಿಶ್ವಾಸದಲ್ಲಿ ಗೋಪಾಲ ಪೂಜಾರಿ ಒಬ್ಬರು ಮಾತ್ರ ಮೊದಲ ಐದು ಸುತ್ತುಗಳಲ್ಲಿ ಮುನ್ನಡೆಯನ್ನು ಪಡೆದಿದ್ದರೂ, ಆರನೇ ಸುತ್ತಿನಲ್ಲಿ ಒಮ್ಮೆ ಹಿನ್ನಡೆಯನ್ನು ಕಂಡ ಬಳಿಕ ಮತ್ತೆ ಮುನ್ನಡೆಯನ್ನು ಸಾಧಿಸಲು ಸಾಧ್ಯವಾಗಲೇ ಇಲ್ಲ. ಇದೇ ಮೊದಲ ಬಾರಿ ಸ್ಪರ್ಧಿಸಿದ ಆರ್‌ಎಸ್‌ಎಸ್‌ನ ಪರಿಚಾರಕ ಗುರುರಾಜ ಶೆಟ್ಟಿ ಗಂಟಿಹೊಳೆ ವಿರುದ್ಧ ನಾಲ್ಕನೇ ಸುತ್ತಿನವರೆಗೆ 2918 ಮತಗಳ ಮುನ್ನಡೆ ಸಾಧಿಸಿದ್ದ ಕೆ.ಗೋಪಾಲ ಪೂಜಾರಿ ಅವರ ಮುನ್ನಡೆ ಐದನೇ ಸುತ್ತಿನಲ್ಲಿ ಹಠಾತ್ತನೆ 386ಕ್ಕೆ ಇಳಿಯಿತು. ಆರನೇ ಸುತ್ತಿನಲ್ಲಿ  996 ಮತಗಳ ಮುನ್ನಡೆ ಸಾಧಿಸಿದ ಗಂಟಿಹೊಳೆ ಮತ್ತೊಂದೂ ಹಿಂದಿರುಗಿ ನೋಡಲೇ ಇಲ್ಲ. ಅಂತಿಮವಾಗಿ ಅವರು 16,153 ಮತಗಳ ಜಯಭೇರಿ ಬಾರಿಸಿದರು.

ಹಾಲಾಡಿ ತೋರಿದ ದಾರಿ: ಕುಂದಾಪುರದಲ್ಲಂತೂ ಐದು ಬಾರಿಯ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಸೆಟ್ಟಿ ಅವರ ಕೃಪಕಟಾಕ್ಷದಡಿ ಸ್ಪರ್ಧಿಸಿದ ಕಿರಣ್‌ ಕುಮಾರ್ ಕೊಡ್ಗಿ ಅವರು ಕಳೆದ ಐದು ಚುನಾವಣೆಗಳಲ್ಲಿ ಹಾಲಾಡಿ ತೋರಿದ ಮಾರ್ಗದಲ್ಲೇ ಸಾಗಿ ತನ್ನ ವಿಜಯದ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ ಹೋದರು. ಮತಗಳ ಎಣಿಕೆ ಮುಗಿದಾಗ ಕಿರಣ್‌ ಕುಮಾರ್ ಕೊಡ್ಗಿ ಅವರು ತನ್ನ ಎದುರಾಳಿ ಕಾಂಗ್ರೆಸ್‌ನ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರ ವಿರುದ್ಧ 41,556 ಮತಗಳ ಅಂತರದ ಜಯ ಸಾಧಿಸಿದರು. ಆದರೆ ಕಳೆದ ಬಾರಿ (2018)ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಜಿಲ್ಲೆಯ ಚುನಾವಣಾ ಇತಿಹಾಸದಲ್ಲೇ ಸ್ಥಾಪಿಸಿದ  56,405 ಮತಗಳ ಅಂತರದ ದಾಖಲೆಯನ್ನು ಮುರಿಯಲಾಗಲಿಲ್ಲ.

ಸುನಿಲ್‌ಗೆ ಕಠಿಣ: ಇನ್ನು ಅತ್ಯಂತ ನಿಕಟ ಸ್ಪರ್ಧೆ ಕಂಡು ಬಂದಿದ್ದು, ಇಂಧನ ಸಚಿವ ವಿ.ಸನಿಲ್ ಕುಮಾರ್ ಅವರ ಕಾರ್ಕಳ ಕ್ಷೇತ್ರದಲ್ಲಿ. ಮೊದಲ ಬಾರಿ ಚುನಾವಣಾ ಕಣಕ್ಕಿಳಿದ ಉದಯಕುಮಾರ್ ಶೆಟ್ಟಿ ಮುನಿಯಾಲು ವಿರುದ್ಧ ಪ್ರತಿ ಸುತ್ತಿನಲ್ಲಿ ಕಿರು ಅಂತರದ ಮುನ್ನಡೆ ಸಾಧಿಸುತ್ತಾ ಬಂದ ಸುನಿಲ್ ಕುಮಾರ್, 9ನೇ ಸುತ್ತಿನ ವೇಳೆ ಕೇವಲ 1,966 ಮತಗಳ ಮುನ್ನಡೆಯಲ್ಲಿದ್ದರು. ಆದರೆ ಅನಂತರ ಅವರ ಗೆಲುವಿನ ಅಂತರ ಹೆಚ್ಚುತ್ತಾ ಹೋಗಿ ಅಂತಿಮವಾಗಿ ಎದುರಾಳಿ ವಿರುದ್ಧ 4602 ಮತಗಳ ಅಂತರಿಂದ ಜಯಗಳಿಸಿದರು. 2018ರಲ್ಲಿ ಸುನಿಲ್, ತನ್ನ ಕಾಂಗ್ರೆಸ್ ಎದುರಾಳಿ ಗೋಪಾಲ ಭಂಡಾರಿ ಅವರನ್ನು 42,566 ಮತಗಳ ಅಂತರಿಂದ ಸೋಲಿಸಿದ್ದರು.

ಉಡುಪಿ ಮತ್ತು ಕಾಪು ಕ್ಷೇತ್ರಗಳಲ್ಲಿ ಮೊದಲ ಸುತ್ತಿನಿಂದಲೇ ಬಿಜೆಪಿಯ ಯಶ್ಪಾಲ್ ಸುವರ್ಣ ಹಾಗೂ ಸುರೇಶ್ ಶೆಟ್ಟಿ ಗುರ್ಮೆ ಎದುರಾಳಿಗಳಾದ ಪ್ರಸಾದ್‌ರಾಜ್ ಕಾಂಚನ್ ಹಾಗೂ ವಿನಯಕುಮಾರ್ ಸೊರಕೆ ವಿರುದ್ಧ ಲೀಡ್ ಸಾಧಿಸುತ್ತಾ ಸಾಗಿದ್ದು, ಕೊನೆಗೆ ನಿರಾತಂಕ ಜಯ ದಾಖಲಿಸಿದರು.

ವಿಜಯಿ ಅಭ್ಯರ್ಥಿಗಳು: ಬೈಂದೂರು ಕ್ಷೇತ್ರದಲ್ಲಿ ಬಿಜೆಪಿಯ ಗುರುರಾಜ್ ಶೆಟ್ಟಿ ಗಂಟಿಹೊಳೆ (98628) ಅವರು ಕೆ.ಗೋಪಾಲ ಪೂಜಾರಿ (82,475) ಅವರನ್ನು 16,153 ಮತಗಳ ಅಂತರದಿಂದ ಸೋಲಿಸಿದರೆ, ಕುಂದಾಪುರದಲ್ಲಿ ಕಿರಣ್‌ಕುಮಾರ್ ಕೊಡ್ಗಿ (1,02,424), ಕಾಂಗ್ರೆಸ್‌ನ ದಿನೇಶ್ ಹೆಗ್ಡೆ ಮೊಳಹಳ್ಳಿ (60,868) ಅವರನ್ನು 41,556 ಮತಗಳಿಂದ ಮಣಿಸಿದರು.

ಉಡುಪಿಯಲ್ಲಿ ಬಿಜೆಪಿಯ ಯಶ್ಪಾಲ್ ಸುವರ್ಣ(97,079)  ಅವರು ಕಾಂಗ್ರೆಸ್ ಎದುರಾಳಿ ಪ್ರಸಾದ್‌ರಾಜ್ ಕಾಂಚನ್(64,303)ರನ್ನು  32,776 ಮತಗಳ ಅಂತರದಿಂದ ಸೋಲಿಸಿದರು. ಕಾಪು ಕ್ಷೇತ್ರದಲ್ಲಿ  ಬಿಜೆಪಿಯ ಸುರೇಶ್ ಶೆಟ್ಟಿ ಗುರ್ಮೆ (80,559) ಅವರು, ವಿನಯಕುಮಾರ್ ಸೊರಕೆ (67,555) ಅವರನ್ನು 13,04 ಮತಗಳ ಅಂತರದಿಂದ ಹಿಮ್ಮೆಟ್ಟಿಸಿ ಮೊದಲ ಬಾರಿ ವಿಧಾನಸೌಧ ಪ್ರವೇಶಿಸುವ ಅವಕಾಶ ಪಡೆದರು.

ಕಾರ್ಕಳ ಕ್ಷೇತ್ರದಲ್ಲಿ ಹಾಲಿ ಶಾಸಕ ಬಿಜೆಪಿಯ ವಿ.ಸುನೀಲ್ ಕುಮಾರ್ ಆತಂಕಪೂರಿತ ಕ್ಷಣಗಳ ಬಳಿಕ ಜಯ ಪಡೆದರು. ಅವರು 77,028 ಮತಗಳನ್ನು ಪಡೆದರೆ, ಅವರ ಕಾಂಗ್ರೆಸ್ ಎದುರಾಳಿ ಉದಯಕುಮಾರ್ ಶೆಟ್ಟಿ ಮುನಿಯಾಲು 72,426 ಮತ ಪಡೆಯುವ ಮೂಲಕ ಕೇವಲ 4,602 ಮತಗಳ ಅಂತರದಿಂದ ಸೋಲೊಪ್ಪಿಕೊಂಡರು. ಕಳೆದ ಬಾರಿ ತನ್ನ ಕಾಂಗ್ರೆಸ್ ಎದುರಾಳಿ ಎಚ್.ಗೋಪಾಲ ಭಂಡಾರಿ ಅವರನ್ನು 42,566 ಮತಗಳ ಅಂತರದಿಂದ ಪರಾಭವಗೊಳಿಸಿದ್ದ ಸುನಿಲ್‌ಗೆ ಇದು ಪ್ರಯಾಸಕರ ಗೆಲುವು ಎಂದರೂ ತಪ್ಪಲ್ಲ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಕೇವಲ 4508 ಮತಗಳನ್ನು ಪಡೆದು ನಿರಾಶೆ ಉಂಟು ಮಾಡಿದರು.

25 ಮಂದಿಗೆ ಠೇವಣಿ ನಷ್ಟ: ಜಿಲ್ಲೆಯ ಒಟ್ಟು ಐದು ಕ್ಷೇತ್ರಗಳಲ್ಲಿ ಒಟ್ಟಾರೆ ಯಾಗಿ 35 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಇವರಲ್ಲಿ ಪ್ರತಿ ಕ್ಷೇತ್ರಗಳಲ್ಲಿ ವಿಜಯಿ ಬಿಜೆಪಿ ಹಾಗೂ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ 25 ಅಭ್ಯರ್ಥಿಗಳು ತಮ್ಮ ಠೇವಣಿಯನ್ನು ಕಳೆದುಕೊಂಡರು. 

ಜಿಲ್ಲೆಯಲ್ಲಿ 5391 ನೋಟಾ ಮತಗಳು

ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಐದು ಮತಕ್ಷೇತ್ರಗಳಲ್ಲಿ ನೋಟಾ ಮತಗಳು ಭಾರೀ ಸಂಖ್ಯೆಯಲ್ಲಿ ಚಲಾವಣೆಗೊಂಡವು. ಹೆಚ್ಚಿನ ಕಡೆಗಳಲ್ಲಿ 3-4ನೇ ಸ್ಥಾನವನ್ನು ನೋಟಾ ಮತಗಳೇ ಪಡೆದುಕೊಂಡವು. ಜಿಲ್ಲೆಯಲ್ಲಿ ಒಟ್ಟು 5391 ನೋಟಾ ಮತಗಳು ಚಲಾವಣೆಗೊಂಡವು.

ಬೈಂದೂರಿನಲ್ಲಿ 1208, ಕುಂದಾಪುರದಲ್ಲಿ 1141, ಉಡುಪಿಯಲ್ಲಿ 1316, ಕಾಪುವಿನಲ್ಲಿ 805 ಹಾಗೂ ಕಾರ್ಕಳದಲ್ಲಿ 921 ನೋಟಾ ಮತಗಳು ದಾಖಲಾಗಿದ್ದವು. ಆದರೆ ನೋಟಾ ಮತಗಳು ಫಲಿತಾಂಶದ ಮೇಲೆ ಯಾವುದೇ ಪರಿಣಾಮವನ್ನು ಬೀರುವಷ್ಟಿರಲಿಲ್ಲ.

ಗರಿಷ್ಠ ಮತ್ತು ಕನಿಷ್ಠ ಅಂತರ

ಕುಂದಾಪುರ ಕ್ಷೇತ್ರದಲ್ಲಿ ಸತತ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ  ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತೋರಿಸಿದ ಹಾದಿಯಲ್ಲೇ ಸಾಗುತ್ತಿರುವ  ಕಿರಣ್‌ಕುಮಾರ್ ಕೊಡ್ಗಿ ಅತ್ಯಧಿಕ ಮತಗಳ ಅಂತರದಿಂದ ಜಯಗಳಿಸಿದ ದಾಖಲೆಯನ್ನು ಕುಂದಾಪುರ ಕ್ಷೇತ್ರಕ್ಕೆ ಉಳಿಸಿಕೊಂಡರು. ಈ ಬಾರಿ ಅವರ ಗೆಲುವಿನ ಅಂತರ 41,556 ಆಗಿತ್ತು.

ಈ ಬಾರಿ ಕನಿಷ್ಠ ಮತಗಳ ಅಂತರದ ದಾಖಲೆ ಕಾರ್ಕಳದ ಮೂರು ಬಾರಿಯ ಶಾಸಕ ವಿ.ಸುನಿಲ್ ಕುಮಾರ್ ಅವರದ್ದಾಗಿದೆ. 2018ರಲ್ಲಿ ಗೋಪಾಲ ಭಂಡಾರಿ ಅವರನ್ನು 42,566 ಮತಗಳ ಭರ್ಜರಿ ಅಂತರದಿಂದ ಸೋಲಿಸಿದ್ದ ಸುನಿಲ್ ಕುಮಾರ್, ಈ ಬಾರಿ ತನ್ನ ಎದುರಾಳಿಯಾಗಿರುವ ಉದಯಕುಮಾರ್ ಮುನಿಯಾಲ್ ವಿರುದ್ಧದ ಮುನ್ನಡೆ 4,602ಕ್ಕಿಳಿಯಿತು. 

1985-89ರಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಕಾಂಗ್ರೆಸ್‌ಗೆ ಸತತ ಎರಡನೇ ಬಾರಿ ಶೂನ್ಯ ಸಂಪಾದನೆ

1985 ಮತ್ತು 1989ರ ವಿಧಾನಸಭಾ ಚುನಾವಣೆ ಯಲ್ಲಿ ಉಡುಪಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿಯೂ (ಆಗ ಬ್ರಹ್ಮಾವರ ಕ್ಷೇತ್ರವಾಗಿತ್ತು) ಜಯಭೇರಿ ಸಾಧಿಸಿದ್ದ ಕಾಂಗ್ರೆಸ್ ಪಕ್ಷವು ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂಬಂತೆ ಸತತ ಎರಡನೇ ಬಾರಿಗೆ  ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿಯೂ ಸೋಲು ಕಂಡು ಶೂನ್ಯ ಸಂಪಾದಿಸಿದೆ.

1985ರ ವಿಧಾನಸಭಾ ಚುನಾವಣೆಯಲ್ಲಿ ಆಗಿನ ದ.ಕ. ಜಿಲ್ಲಾ ವ್ಯಾಪ್ತಿ ಯಲ್ಲಿದ್ದ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಿ.ಎಸ್.ಆಚಾರ್, ಕುಂದಾಪುರ ದಲ್ಲಿ ಪ್ರತಾಪ್‌ಚಂದ್ರ ಶೆಟ್ಟಿ, ಬ್ರಹ್ಮಾವರದಲ್ಲಿ ಪಿ.ಬಸವರಾಜ್, ಉಡುಪಿಯಲ್ಲಿ ಮನೋರಮಾ ಮಧ್ವರಾಜ್, ಕಾಪುವಿನಲ್ಲಿ ವಸಂತ ವಿ.ಸಾಲ್ಯಾನ್ ಹಾಗೂ ಕಾರ್ಕಳ ಕ್ಷೇತ್ರದಲ್ಲಿ ವೀರಪ್ಪ ಮೊಯಿಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಆರಕ್ಕೆ ಆರು ಸ್ಥಾನಗಳನ್ನು ಕೂಡ ತನ್ನದಾಗಿಸಿಕೊಂಡಿತ್ತು.

1989ರ ಚುನಾವಣೆಯಲ್ಲೂ ಇವರೇ ಗೆದ್ದು ಬಂದು ಕಾಂಗ್ರೆಸ್ ಮತ್ತೆ ಆರಕ್ಕೆ ಆರು ಸ್ಥಾನದಲ್ಲಿ ತನ್ನ ಜಯಭೇರಿ ಯನ್ನು ಮುಂದುವರೆಸಿ ಜಿಲ್ಲೆಯನ್ನು ಕಾಂಗ್ರೆಸ್‌ನ ಭದ್ರಕೋಟೆಯನ್ನಾಗಿಸಿತ್ತು. 

2004 ಮತ್ತು 2008ರ ವಿಧಾನಸಭಾ ಚುನಾವಣೆಯಲ್ಲಿ  ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಆಗ 2004ರಲ್ಲಿ ಬೈಂದೂರು ಕ್ಷೇತ್ರದಲ್ಲಿ ಗೋಪಾಲ ಪೂಜಾರಿ ಹಾಗೂ 2008ರಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಗೋಪಾಲ ಭಂಡಾರಿ ಶಾಸಕರಾಗಿ ಆಯ್ಕೆ ಯಾಗಿ ಬಂದು ಕಾಂಗ್ರೆಸ್ ಪಕ್ಷದ ಮಾನ ಉಳಿಸಿದ್ದರು.

ಆದರೆ 2018ರ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಜಿಲ್ಲೆಯ ಎಲ್ಲ ಐದು ಕ್ಷೇತ್ರಗಳನ್ನೂ ಕೂಡ ಕಳೆದುಕೊಂಡಿದೆ. ಇದೀಗ 2023ರ ಚುನಾವಣೆಯಲ್ಲೂ ಈ ದಾಖಲೆಯನ್ನು  ವಿಸ್ತರಿಸುವಲ್ಲಿ ಮಾತ್ರ ಕಾಂಗ್ರೆಸ್‌ಗೆ ಸಾಧ್ಯವಾಗಿದೆ. ರಾಜ್ಯದಲ್ಲಿ ಜಯಭೇರಿ ಬಾರಿಸಿದ ಪಕ್ಷ ಉಡುಪಿ ಜಿಲ್ಲೆಯಲ್ಲಿ ಪಾತಾಳಕ್ಕಿಳಿದಿರುವುದು ಸ್ಪಷ್ಟವಾಗಿದೆ.

Similar News